ADVERTISEMENT

ಧರ್ಮಸ್ಥಳ ಪ್ರಕರಣ | ಮುಂದುವರಿದ ಶೋಧ ಕಾರ್ಯ: 4ನೇ ದಿನ ಸಿಗದ ಅವಶೇಷ

ಪಿ.ವಿ.ಪ್ರವೀಣ್‌ ಕುಮಾರ್‌
Published 1 ಆಗಸ್ಟ್ 2025, 23:49 IST
Last Updated 1 ಆಗಸ್ಟ್ 2025, 23:49 IST
<div class="paragraphs"><p>ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯವು ಹೊರಗಿನವರಿಗೆ ಕಾಣಿಸಬಾರದೆಂದು ಹಸಿರು ಬಣ್ಣದ ಪರದೆಯನ್ನು ಶುಕ್ರವಾರ ಕಟ್ಟಲಾಗಿತ್ತು</p></div>

ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯವು ಹೊರಗಿನವರಿಗೆ ಕಾಣಿಸಬಾರದೆಂದು ಹಸಿರು ಬಣ್ಣದ ಪರದೆಯನ್ನು ಶುಕ್ರವಾರ ಕಟ್ಟಲಾಗಿತ್ತು

   

–ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಮಂಗಳೂರು: ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತು ಪತ್ತೆಯಾಗದೆ, ಎಷ್ಟು ಮೃತದೇಹಗಳನ್ನು ಮೂರು ದಶಕಗಳಿಂದ ಈಚೆಗೆ ವಿಲೇವಾರಿ ಮಾಡಲಾಗಿದೆ ಎಂಬ ಮಾಹಿತಿಯನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಕಲೆ ಹಾಕುತ್ತಿದೆ.

ADVERTISEMENT

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ, ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ಈ ಕುರಿತ ದಾಖಲೆಗಳನ್ನು ಶುಕ್ರವಾರ ಹಸ್ತಾಂತರಿಸ ಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ (ಧರ್ಮಸ್ಥಳ ಠಾಣೆಯ ವ್ಯಾಪ್ತಿಯ ಪ್ರದೇಶವು ಈ ಹಿಂದೆ ಬೆಳ್ತಂಗಡಿ ಠಾಣೆ ವ್ಯಾಪ್ತಿಯಲ್ಲಿತ್ತು) ಮೂರು ದಶಕಗಳಿಂದ ಈಚೆಗೆ ದಾಖಲಾಗಿರುವ ಅಸಹಜ ಸಾವುಗಳ ಕುರಿತ ವಿವರಗಳನ್ನೂ ಎಸ್‌ಐಟಿ ಕಲೆಹಾಕುತ್ತಿದೆ ಎಂದು ತಿಳಿಸಿವೆ.

4ನೇ ದಿನ ಸಿಗಲಿಲ್ಲ ಅವಶೇಷ: ಧರ್ಮಸ್ಥಳದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಎರಡು ಕಡೆ ಶುಕ್ರವಾರ ಶೋಧ ನಡೆದಿದ್ದು, ಮೃತದೇಹಗಳ ಯಾವುದೇ ಕುರುಹು ಪತ್ತೆಯಾಗಿಲ್ಲ.

ಬೆಳಿಗ್ಗೆ 11.30ಕ್ಕೆ ಕಾಡಿನೊಳಗೆ ತೆರಳಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಪ್ರಕರಣದ ಸಾಕ್ಷಿ ದೂರು ದಾರ ಕಾಡಿನಲ್ಲಿ ತೋರಿಸಿದ ಏಳನೇ ಜಾಗದಲ್ಲಿ ಅಗೆಯುವ ಪ್ರಕ್ರಿಯೆ ಯನ್ನು ಮುಂದುವರಿಸಿತು. ಯಂತ್ರದ ಮೂಲಕ 6 ಅಡಿಗಳಷ್ಟು ಆಳಕ್ಕೆ ಅಗೆದ ಬಳಿಕವೂ ಅಲ್ಲಿ ಕುರುಹು ಸಿಗಲಿಲ್ಲ. ಹಾಗಾಗಿ ಅಗೆಯುವುದನ್ನು ನಿಲ್ಲಿಸಲಾಯಿತು. ಸಾಕ್ಷಿ ದೂರುದಾರ ತೋರಿಸಿದ್ದ ಎಂಟನೇ ಜಾಗವನ್ನು ಮಧ್ಯಾಹ್ನ ಊಟದ ವಿರಾಮದ ಬಳಿಕ ಅಗೆಯಲಾಯಿತು. ಅಲ್ಲೂ ಕುರುಹುಗಳು ಸಿಗಲಿಲ್ಲ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

ಶುಕ್ರವಾರ ಮಳೆ ಅಬ್ಬರ ಕಡಿಮೆಯಾಗಿತ್ತು. ಸಾಕ್ಷಿದಾರ ತೋರಿಸಿದ್ದ 7 ಮತ್ತು 8ನೇ ಜಾಗಗಳು ನೇತ್ರಾವತಿ ನದಿಯಿಂದ 10 ಮೀ ದೂರದಲ್ಲಿದ್ದವು. ಅಗೆದ ಜಾಗದಲ್ಲಿ ನೀರಿನ ಒರತೆ ಇತ್ತು. ಗುಂಡಿಯೊಳಗೆ ತುಂಬುತ್ತಿದ್ದ ನೀರನ್ನು ತೆರವುಗೊಳಿಸಿ ಕೆಲಸ ಮುಂದುವರಿಸಬೇಕಾಯಿತು. ಹಾಗಾಗಿ ಶುಕ್ರವಾರ ಎರಡು ಜಾಗಗಳಲ್ಲಿ ಮಾತ್ರ ಅಗೆಯಲು ಸಾಧ್ಯವಾಯಿತು.

ಶೋಧ ಕಾರ್ಯದಲ್ಲಿ 20 ಕಾರ್ಮಿಕರು ಸೇರಿದಂತೆ 60 ಮಂದಿ ಭಾಗಿಯಾದರು. ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಾಕ್ಷಿ ದೂರುದಾರ ಶೋಧ ಕಾರ್ಯದ ವೇಳೆ ಸ್ಥಳದಲ್ಲಿದ್ದರು.

ಎಸ್ಐಟಿ ಡಿಐಜಿ ಎಂ.ಎನ್.ಅನುಚೇತ್ ಅವರು ಮುಂದಿನ ತನಿಖೆ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಧರ್ಮಸ್ಥಳದ‌ಲ್ಲಿ ನೇತ್ರಾವತಿ ನದಿ ಪಕ್ಕದಲ್ಲಿ ಸಾಕ್ಷಿ ದೂರುದಾರ ಒಟ್ಟು 13 ಜಾಗಗಳನ್ನು ತೋರಿಸಿ, ‘ಅಲ್ಲಿ ಮೃತದೇಹಗಳನ್ನು ಹೂತಿದ್ದೆ’ ಎಂದು ಎಸ್ಐಟಿಗೆ ತಿಳಿಸಿದ್ದ. ಆತ ತೋರಿಸಿದ್ದ ಆರನೇ ಜಾಗದಲ್ಲಿ ಗಂಡಸಿನ‌ ಮೃತದೇಹದ ಅವಶೇಷ ಗುರುವಾರ ಸಿಕ್ಕಿತ್ತು. ಉಳಿದ ಐದು ಕಡೆ ಅಗೆದಾಗ ಮೃತದೇಹದ ಯಾವುದೇ ಅವಶೇಷಗಳೂ ಸಿಕ್ಕಿರಲಿಲ್ಲ.

ಸಾಕ್ಷಿ ದೂರುದಾರ ತೋರಿಸಿರುವ ಜಾಗಗಳಲ್ಲಿ ಇನ್ನೂ ಐದು ಕಡೆ ಅಗೆಯಲು ಬಾಕಿ ಇದೆ. ಆತ ತೋರಿಸಿದ 9ನೇ ಜಾಗವನ್ನು ಅಗೆಯುವ ಕಾರ್ಯ ಶನಿವಾರ ಮುಂದುವರಿಯಲಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ತನಿಖೆ ವಿವರ ಕೇಳಿ ‘ಸಹಾಯವಾಣಿ’ಗೆ ಕರೆ

‘ಎಸ್‌ಐಟಿ ಮಂಗಳೂರಿನಲ್ಲಿ ಆರಂಭಿಸಿರುವ ಸಹಾಯವಾಣಿಗೆ ರಾಜ್ಯ–ಹೊರರಾಜ್ಯಗಳಿಂದ ಸಾಕಷ್ಟು ಕರೆಗಳು ಬರುತ್ತಿವೆ. ಕರೆಮಾಡುವ ಬಹುತೇಕರು ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಕೆಲವರು ಸಲಹೆ ನೀಡುತ್ತಿದ್ದಾರೆ. ಯಾವುದೇ ನಿರ್ದಿಷ್ಟ ದೂರು ಸಲ್ಲಿಕೆಯಾಗಿಲ್ಲ. ದೂರು ಸಲ್ಲಿಕೆಯಾದರೆ ಸ್ವೀಕರಿಸಿ, ಸಂಬಂಧಿಸಿದ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗುವುದು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.