ಸಾಕ್ಷಿ ದೂರುದಾರ ಮಾಸ್ಕ್ ಧರಿಸಿರುವವರು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರನ ಪತ್ನಿ ಹಾಗೂ ಸಹೋದರಿಯನ್ನು ವಿಶೇಷ ತನಿಖಾ ತಂಡದವರು ಸೋಮವಾರ ವಿಚಾರಣೆಗೆ ಒಳಪಡಿಸಿದ್ದಾರೆ.
‘ಸಾಕ್ಷಿ ದೂರುದಾರನ ಕುಟುಂಬಕ್ಕೆ ಹಣಕಾಸು ವರ್ಗಾವಣೆ ಆಗಿರುವ ಕುರಿತು ಮಾಹಿತಿ ಕಲೆ ಹಾಕಲು ಆತನ ಪತ್ನಿ, ಅಕ್ಕನನ್ನು ಎಸ್‌ಐಟಿ ಕಚೇರಿಗೆ ಕರೆಸಿ ವಿಚಾರಿಸಲಾಗಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
‘ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಾಗೂ ಧರ್ಮಸ್ಥಳ ಹೊರ ಠಾಣೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಕೆಲ ಪೊಲೀಸ್ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಕೆಲ ಅಸಹಜ ಸಾವುಗಳ ಶವಗಳನ್ನು ವಿಲೇವಾರಿ ಮಾಡಿದಾಗ ಕರ್ತವ್ಯ ನಿರ್ವಹಿಸಿದ್ದವರಿಂದ ಮಾಹಿತಿ ಕಲೆ ಹಾಕಲಾಗಿದೆ’ ಎಂದು ತಿಳಿಸಿವೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್‌ಐಟಿ ಅಧಿಕಾರಿಗಳು ಸೋಮವಾರ ಭೇಟಿ ನೀಡಿದ್ದರು.
‘ಸಾಕ್ಷಿ ದೂರುದಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿದ್ದಾಗ ಒಂದು ವಿಡಿಯೊ ಚಿತ್ರೀಕರಿಸಲಾಗಿತ್ತು. ಆ ವಿಡಿಯೊ ಚಿತ್ರೀಕರಿಸಿದ್ದು ಮಹೇಶ್ ಶೆಟ್ಟಿ ಅವರ ಮಗಳು. ಹಾಗಾಗಿ ಆಕೆಯ ಹೇಳಿಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳ ಗ್ರಾಮದಲ್ಲಿ ಹಿಂದೆ ನಡೆದಿದ್ದ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಮತ್ತು ಆತನ ಸೋದರಿ ಯಮುನಾ ಮತ್ತಿತರ ಕೊಲೆಗಳ ಮರು ತನಿಖೆಗೆ ಒತ್ತಾಯಿಸಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಮತ್ತು ಇತರರು ಈಚೆಗೆ ದೂರು ನೀಡಿದ್ದರು.
‘ಆ ದೂರಿನ ತನಿಖೆಯನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಕೈಗೆತ್ತಿಕೊಳ್ಳಲಾಗದು. ಈ ಬಗ್ಗೆ ದೂರುದಾರರಿಗೂ ತಿಳಿಸಿದ್ದೇವೆ’ ಎಂದು ಎಸ್ಐಟಿ ಮೂಲಗಳು ಸ್ಪಷ್ಟಪಡಿಸಿವೆ.
‘ಐಐಎಸ್ಸಿ ತಜ್ಞರ ಸಹಾಯ ಯಾಚನೆ’
ಎಸ್ಐಟಿಯ ಒಂದು ತಂಡವು ಮೂಳೆಗಳ ಅವಶೇಷದ ಮೂಲ ಪತ್ತೆ ಕಾರ್ಯದಲ್ಲಿ ನಿರತವಾಗಿದೆ. ವಂಶವಾಹಿಗಳ ವಿಶ್ಲೇಷಣೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರನ್ನು ತಂಡವು ಸಂಪರ್ಕಿಸಿ ತನಿಖೆಗೆ ಸಹಾಯ ಯಾಚಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.