(ಸಾಂದರ್ಭಿಕ ಚಿತ್ರ)
ಮಂಗಳೂರು: ‘ಧರ್ಮಸ್ಥಳ ಗ್ರಾಮದ ಬೂರ್ಜೆಯಲ್ಲಿ 2012ರ ಸೆ. 21ರಂದು ನಡೆದಿದ್ದ ಜೋಡಿ ಕೊಲೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಸ್‌ಐಟಿ ಕಚೇರಿಗೆ ದೂರು ನೀಡಲಾಗಿದೆ.
ಬೂರ್ಜೆಯಲ್ಲಿ ವಾಸವಿದ್ದ ನಾರಾಯಣ, ಅವರ ಸೋದರಿ ಯಮುನಾ 2012 ಸೆ. 21ರಂದು ಕೊಲೆಯಾಗಿತ್ತುಎಂದು ದಿ.ನಾರಾಯಣ ಅವರ ಮಕ್ಕಳಾದ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟುವಿನ ಗಣೇಶ ಹಾಗೂ ಭಾರತಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ದೂರು ನೀಡಿದರು.
‘ಕೊಲೆಯಾಗುವ ಐದು ವರ್ಷಗಳಿಂದ ಆ ಮನೆ ತೆರವಿಗೆ ಒತ್ತಾಯಿಸಿ ಸ್ಥಳೀಯ ಪ್ರಭಾವಿಯೊಬ್ಬರು ಜೀವ ಬೆದರಿಕೆ ಹಾಕಿದ್ದರು. ತಂದೆಗೆ ಎರಡು ಸಲ ಹಲ್ಲೆ ಮಾಡಲಾಗಿತ್ತು. 2012ರ ಸೆ. 20ರ ಸಂಜೆ ಆ ಪ್ರಭಾವಿ, ಮನೆಗೆ ಬಂದು, ‘ಮನೆ ತೆರವುಗೊಳಿಸದಿದ್ದರೆ ಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
‘ತಂದೆಗೆ ಯಾರೂ ವಿರೋಧಿಗಳಿರಲಿಲ್ಲ. ತಂದೆ ದಾಸವಾಗಿದ್ದ ಮನೆ ಮತ್ತು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.
‘ಕೊಲೆಯಾದ ಮೂರು ದಿನ್ಗ ನಾವು ಆ ಪ್ರಭಾವಿಯ ಅಣ್ಣನನ್ನು ಖುದ್ದು ಭೇಟಿಯಾಗಿ ವಿಷಯ ತಿಳಿಸಿದಾಗ, ‘ಆಗಿದ್ದು ಆಗಿ ಹೋಯ್ತು. ಆ ವಿಷಯ ಬಿಟ್ಟು ಬಿಡಿ’ ಎಂದಿದ್ದರು ಎಂದು ಉಲ್ಲೆಖಿಸಿದ್ದಾರೆ.
‘ಈ ಪ್ರಕರಣ ಸಂಬಂಧ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದರೂ, ಸರಿಯಾದ ಸ್ಪಂದನೆ ಸಿಕ್ಕಿಲ್ಲ. ನಮಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.