ADVERTISEMENT

ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ 7 ತಲೆ ಬುರುಡೆ, ನೂರಾರು ಮೂಳೆಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 19:30 IST
Last Updated 18 ಸೆಪ್ಟೆಂಬರ್ 2025, 19:30 IST
   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಲ್ಲಿ ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಒಟ್ಟು ಏಳು ತಲೆಬುರುಡೆಗಳು ಹಾಗೂ ಬಹಳಷ್ಟು ಮೂಳೆಗಳು ನೆಲದ ಮೇಲೆ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿಯವರು ಬುಧವಾರ ಹಾಗೂ ಗುರುವಾರ ಶೋಧ ನಡೆಸಿದ್ದರು. ಈ ವೇಳೆ ಒಟ್ಟು ಒಂಬತ್ತು ಕಡೆ ಮೃತದೇಹಗಳ ಅವಶೇಷಗಳು ಕಂಡುಬಂದಿದ್ದವು. ಅವುಗಳ ಪೈಕಿ ಐದು ಸ್ಥಳಗಳಲ್ಲಿ ಸಿಕ್ಕಿದ್ದ ಐದು ತಲೆ ಬುರುಡೆಗಳು ಹಾಗೂ ನೂರಾರು ಮೂಳೆಗಳನ್ನು ಬುಧವಾರವೇ ಎಸ್‌ಐಟಿ ವಶಕ್ಕೆ ಪಡೆದಿತ್ತು. ಗುರುವಾರ ಇನ್ನುಳಿದ ಕಡೆಗಳಲ್ಲಿದ್ದ ಎರಡು ತಲೆಬುರುಡೆಗಳು ಹಾಗೂ ಮೂಳೆಗಳನ್ನು ವಶಕ್ಕೆ ಪಡೆದಿದೆ ಎಂದು ಗೊತ್ತಾಗಿದೆ.

‘ಶೋಧ ಮುಗಿದಿಲ್ಲ. ಹಾಗಾಗಿ ಎಷ್ಟು ಮೃತದೇಹಗಳ ಮೂಳೆ ಪತ್ತೆಯಾಗಿವೆ ಎಂದು ಹೇಳಲಾಗದು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಕಾಡಿನಲ್ಲಿ ಸಿಕ್ಕ ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಆ ಮೂಳೆಗಳು ಪುರುಷ, ಮಹಿಳೆ, ವಯಸ್ಸಾದ ವ್ಯಕ್ತಿಗಳದ್ದೇ, ಮಕ್ಕಳದ್ದೇ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರಿದ ಬಳಿಕವಷ್ಟೇ ಗೊತ್ತಾಗಲಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ. 

ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಸ್ಐಟಿಯವರು ಕಾಡಿನೊಳಕ್ಕೆ ತೆರಳಿ, ಮಧ್ಯಾಹ್ನ 3.30ರ ಸುಮಾರಿಗೆ ಹೊರಬಂದರು. ಎಸ್‌ಐಟಿಯ ಎಸ್‌ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್‌, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆಳ್ತಂಗಡಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ  ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. 

ಶೋಧ ಕಾರ್ಯ ನಡೆದ ಸ್ಥಳದಲ್ಲಿ ವಾಕಿಂಗ್ ಸ್ಟಿಕ್‌, ಚಪ್ಪಲಿಗಳು, ಸೀರೆ ಮತ್ತಿತರ ಬಟ್ಟೆಗಳು, ಬ್ಯಾಗ್‌ಗಳು, ಬಾಟಲಿಗಳು ಸಿಕ್ಕಿವೆ ಎಂದು ಗೊತ್ತಾಗಿದೆ.  ಪತ್ತೆಯಾದ ಬುರುಡೆಗಳನ್ನು ಬಕೆಟ್‌ಗಳಲ್ಲಿ ಹಾಗೂ ಮೂಳೆಗಳನ್ನು ಪಿವಿಸಿ ಕೊಳವೆಯಲ್ಲಿ ತುಂಬಿ ಕೊಂಡೊಯ್ದರು. 

ಬೇರೆ ಕಡೆ ಶೋಧ ಕಾರ್ಯ ಶುಕ್ರವಾರ ಮುಂದುವರಿಯಲಿದೆಯೇ ಎಂಬ ಬಗ್ಗೆ ಎಸ್‌ಐಟಿ ಸುಳಿವು ಬಿಟ್ಟುಕೊಟ್ಟಿಲ್ಲ.

ಈ ಪ್ರಕರಣದ ಸಾಕ್ಷಿ ದೂರುದಾರ ಪೊಲೀಸರಿಗೆ ತಲೆಬುರುಡೆಯನ್ನು ಒಪ್ಪಿಸಿದ್ದ. ಆದರೆ, ಅದನ್ನು ಹೊರತೆಗೆದದ್ದು ‘ನಾನಲ್ಲ’ ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು. ಆ ತಲೆಬುರುಡೆ ಇದ್ದ ಜಾಗವನ್ನು ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ತೋರಿಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಎಸ್‌ಐಟಿ ಅಧಿಕಾರಿಗಳು ವಿಠಲ ಗೌಡ ಅವರನ್ನು ಕೆಲ ದಿನಗಳ ಹಿಂದೆ ಕಾಡಿನ ಒಳಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ನೆಲದ ಮೇಲೆಯೇ ಕೆಲವೆಡೆ ಮೃತದೇಹಗಳ ಅವಶೇಷ ಕಂಡುಬಂದಿತ್ತು. ಹಾಗಾಗಿ ಕಾಡಿನಲ್ಲಿ ಶೋಧ ಕಾರ್ಯ ನಡೆಸಲು ಎಸ್‌ಐಟಿ ನಿರ್ಧರಿಸಿತ್ತು.

ಒಂದು ಮೃತದೇಹದ ಗುರುತು ಪತ್ತೆ?
ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಸಿಕ್ಕಿರುವ ಮೃತದೇಹಗಳ ಅವಶೇಷಗಳಲ್ಲಿ ಒಂದು ಮೃತದೇಹದ ಗುರುತು ಪತ್ತೆಯಾಗಿದೆ ಎಂದು ಗೊತ್ತಾಗಿದೆ. ಮೃತದೇಹದ ಅವಶೇಷದ ಜೊತೆ ಗುರುತಿನ ಚೀಟಿಯೂ ಸಿಕ್ಕಿತ್ತು. ಅದರಲ್ಲಿದ್ದ ವಿಳಾಸದ ಪ್ರಕಾರ ಅದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಯು.ಬಿ.ಅಯ್ಯಪ್ಪ ಅವರದು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಇನ್ನಷ್ಟೇ ಖಾತರಿಪಡಿಸಿಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.

ಸಿಪಿಎಂನಿಂದ ಎಸ್‌ಐಟಿಗೆ ದೂರು

ಬೆಳ್ತಂಗಡಿ ಠಾಣೆ ಮತ್ತು ಧರ್ಮಸ್ಥಳ ಠಾಣೆಗಳಲ್ಲಿ 20 ವರ್ಷಗಳಿಂದ ಈಚೆಗೆ ದಾಖಲಾದ ಎಲ್ಲ ಅಸಹಜ ಸಾವು, ಆತ್ಮಹತ್ಯೆ, ಕೊಲೆ ಅತ್ಯಾಚಾರ ಹಾಗೂ ಕೊಲೆಗಳಿಗೆ ಕಾರಣವಾಗಿರಬಹುದಾದ ಭೂಕಬಳಿಕೆ, ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಬೆಳ್ತಂಗಡಿ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಬಿ.ಎಂ.ಭಟ್ ಅವರು ಎಸ್‌ಐಟಿಗೆ ದೂರು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಅವರು ಎಸ್‌ಐಟಿಗೆ ಒಪ್ಪಿಸಿದ್ದಾರೆ. 

ವಿಠಲ ಗೌಡ ವಿರುದ್ಧ ದೂರು:  ಎಸ್‌ಐಟಿ ವಿಚಾರಣೆಗೆ ಒಳಪಟ್ಟ ವಿಠಲ ಗೌಡ ಅವರು ಪ್ರಕರಣದ ತನಿಖೆ ನಡೆಯುವ ವೇಳೆಯೇ, ‘ಕಾಡಿನಲ್ಲಿ ಮೃತದೇಹಗಳ ಅವಶೇಷಗಳಿವೆ’ ಎಂದು ವಿಡಿಯೊ ಹರಿಯ ಬಿಡುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾರೆ. ಅವರನ್ನು ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಧರ್ಮಸ್ಥಳದ ಸಂದೀಪ್ ರೈ ಎಂಬವರು ಎಸ್‌ಐಟಿಗೆ ಗುರುವಾರ ದೂರು ನೀಡಿದ್ದಾರೆ. 

ಸಾಕ್ಷಿ ದೂರುದಾರ ನ್ಯಾಯಾಲಯಕ್ಕೆ ಹಾಜರು
ಪ್ರಕರಣದ ಸಾಕ್ಷಿ ದೂರುದಾರನನ್ನು ಶಿವಮೊಗ್ಗದ ಜೈಲಿನಿಂದ ಕರೆತಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಯಿತು. ‘ಹೇಳಿಕೆ ದಾಖಲಿಸಿಕೊಳ್ಳುವ ಉದ್ದೇಶದಿಂದ ಆತನನ್ನು ಬೆಳ್ತಂಗಡಿಗೆ ಕರೆತರಲಾಗಿತ್ತು. ಆದರೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿಲ್ಲ’ ಎಂದು ಮೂಲಗಳು ತಿಳಿಸಿವೆ.

ವಸಂತಿ ಸೋದರ ವಿಜಯ್ ಹಾಜರು

ಎಸ್‌ಐಟಿಗೆ ಈ ಹಿಂದೆ, ‘ನನ್ನ ಮಗಳು ಅನನ್ಯಾ ಭಟ್‌ ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ಕಾಣೆಯಾಗಿದ್ದಾಳೆ’ ಎಂದು ಆರೋಪಿಸಿ ಸುಜಾತಾ ಭಟ್‌ ಎಸ್‌ಐಟಿಗೆ ನೀಡಿದ್ದ ದೂರಿಗೆ ಸಂಬಂಧಿಸಿ  ವಸಂತಿ ಎಂ.ಪಿ. ಅವರ ಸೋದರ, ಕೊಡಗು ಜಿಲ್ಲೆಯ ವಿಜಯ್ ಎಂಬವರು ಎಸ್‌ಐಟಿಯ ಬೆಳ್ತಂಗಡಿ ಕಚೇರಿಗೆ ಗುರುವಾರ ಹಾಜರಾಗಿ ಹೇಳಿಕೆ ದಾಖಲಿಸಿದರು.

‘ತನ್ನ ಮಗಳು ಅನನ್ಯಾ ಭಟ್‌ ಫೋಟೊ ಎಂದು ಹೇಳಿ ಸುಜಾತಾ ಭಟ್‌ ಅವರು ವಸಂತಿ ಎಂ.ಪಿ. ಅವರ ಫೋಟೊವನ್ನು ಎಸ್‌ಐಟಿಗೆ ನೀಡಿದ್ದರು. ವಸಂತಿ ಅವರು 2007ರಲ್ಲಿ ನಿಧನರಾಗಿದ್ದರು. ಆಕೆಯ ಮರಣ ಪ್ರಮಾಣಪತ್ರವೂ ಸೇರಿದಂತೆ ಕೆಲ ದಾಖಲೆಗಳನ್ನು ವಿಜಯ್‌ ಅವರು ಎಸ್ಐಟಿ ಮುಂದೆ ಹಾಜರುಪಡಿಸಿದರು’ ಎಂದು ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.