
ಉಜಿರೆ: ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಅಂಗವಾಗಿ ಬುಧವಾರ ನಡೆದ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ದೇಶದ ಅಸ್ತಿತ್ವ, ಭವಿಷ್ಯದ ಬಗ್ಗೆ ಮುಂದಿನ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಸಲಹೆ ನೀಡಿದರು.
ಬಹುಮಾನಕ್ಕಾಗಿ, ಕೀರ್ತಿಗಾಗಿ ಹಾಗೂ ಹಣ ಸಂಪಾದನೆಗಾಗಿ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸ ವಿಚಾರಗಳು, ಹೊಸ ಪಾತ್ರಗಳು, ಹೊಸ ಸನ್ನಿವೇಶಗಳು ದೊರಕಿದಾಗ ಪರಕಾಯ ಪ್ರವೇಶ ಮಾಡಿ ಸಾಹಿತ್ಯ ಕೃತಿಗಳನ್ನು ಸಮಾಜದ ಪ್ರಗತಿಗಾಗಿ ಪ್ರೀತಿಯಿಂದ ಬರೆಯಬೇಕು. ಆಗ ಮಾತ್ರ ಮಿದುಳು ಸಕ್ರಿಯವಾಗಿ ಸಾಹಿತಿಗಳು ಮಾನಸಿಕವಾಗಿ ಸದಾ ಚೈತನ್ಯಶೀಲರಾಗುತ್ತಾರೆ. ಕೇವಲ ಪ್ರೀತಿ, ಪ್ರೇಮ ಅಲ್ಲದೇ ಬದುಕಿನ ಸೋಲು, ಸವಾಲುಗಳು, ಅವಹೇಳನ, ಆತಂಕಗಳ ಬಗ್ಗೆಯೂ ಸಾಹಿತ್ಯ ರಚನೆ ಮಾಡಬೇಕು ಎಂದರು.
ಬದುಕು ಹೇಗಿದೆಯೋ ಹಾಗೆ ಚಿತ್ರಿಸುವುದು ನವೋದಯ ಸಾಹಿತ್ಯವಾದರೆ, ಮುಂದೆ ಹೇಗೆ ಬದಲಾಗಬೇಕು ಎಂದು ಬರೆಯುವುದು ಪ್ರಗತಿಪರ ಸಾಹಿತ್ಯ. ವಿದೇಶದಲ್ಲಿ ಉದ್ಯೋಗ ಮಾಡಿ ಅಸ್ತಿತ್ವಕ್ಕಾಗಿ ಸಾಹಿತ್ಯ ರಚನೆ ಮಾಡುವುದು ನವ್ಯ ಸಾಹಿತ್ಯವಾಗಿದೆ. ಸುಂದರ ಬದುಕಿಗಾಗಿ ಹೋರಾಡಬೇಕು ಎಂದು ಬರೆಯುವುದು ಬಂಡಾಯ ಸಾಹಿತ್ಯವಾಗಿದೆ ಎಂದು ಅವರು ಹೇಳಿದರು.
ಇಂದು ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ಹಾಗೂ ಆಧುನೀಕರಣದಿಂದಾಗಿ ಹೆಚ್ಚು ಕೃತಿಗಳು ಪ್ರಕಟವಾಗುತ್ತಿವೆ. ಇಂದು ಕಾದಂಬರಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕಥೆ ಬರೆಯುವವರ ಸಂಖ್ಯೆ ಮತ್ತು ಓದುವವರ ಸಂಖ್ಯೆ ಹೆಚ್ಚಾಗಿದೆ. ಕಥಾ ಸಾಹಿತ್ಯ ಅರ್ಥಪೂರ್ಣವಾಗಿ ಬೆಳೆಯುತ್ತಿದೆ. ಹೃದಯದಿಂದ, ಪ್ರೀತಿಯಿಂದ ಬಂದ ಆಲೋಚನೆಗಳನ್ನು ಬಳಸಿ ಉತ್ತಮ ಕಥೆಗಳನ್ನು ಬರೆಯಬಹುದು ಎಂದು ಸಲಹೆ ನೀಡಿದರು.
ಬೆಳೆಸಬೇಕಾದರೆ ಕನ್ನಡ ಬಳಸಬೇಕು
ಅಧ್ಯಕ್ಷತೆ ವಹಿಸಿದ್ದ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು. ಕನ್ನಡಕ್ಕೆ ಸ್ವಂತ ಲಿಪಿ ಇದ್ದು, ಎಲ್ಲಾ ದೃಷ್ಟಿಯಿಂದಲೂ ಕನ್ನಡ ಅತ್ಯಂತ ಪರಿಪೂರ್ಣ, ಸಮೃದ್ಧ ಹಾಗೂ ಸುಂದರ ಭಾಷೆಯಾಗಿದೆ. ಆದರೆ, ಕನ್ನಡಕ್ಕೆ ದೊಡ್ಡ ಸವಾಲು ಭಾಷೆ. ಕನ್ನಡ ಉಳಿಸಬೇಕಾದರೆ ಭಾಷಾ ಶುದ್ಧಿಯೊಂದಿಗೆ ಮನೆಯಲ್ಲಿ ಹಾಗೂ ವ್ಯವಹಾರದಲ್ಲಿ ನಿತ್ಯವೂ ಶುದ್ಧ ಕನ್ನಡ ಬಳಸಬೇಕು. ಭಾಷೆ ಸ್ವಚ್ಛವಾಗಿದ್ದರೆ ಸಾಹಿತ್ಯವೂ ಸ್ವಚ್ಛವಾಗಿರುತ್ತದೆ ಎಂದರು.
ನಿತ್ಯವೂ ನಾವು ಬೆಳಿಗ್ಗೆ ಹಲ್ಲು ಉಜ್ಜುವಂತೆ ನಾಲಗೆಯನ್ನೂ ಉಜ್ಜಬೇಕು. ಆಗ ಸ್ವಚ್ಛ ಕನ್ನಡ ಮಾತನಾಡಲು ಸಾಧ್ಯ. ಸಾಹಿತ್ಯವು ದೈನಂದಿನ ಬದುಕು ಮತ್ತು ಸಮಾಜಕ್ಕೆ ಸಂಬಂಧಪಟ್ಟಿದೆ. ಇಂಗ್ಲಿಷ್ ಪದಗಳ ಬಳಕೆಯಿಂದ ಕನ್ನಡ ಅಪಾಯದ ಅಂಚಿನಲ್ಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಬೆಂಗಳೂರಿನ ಶಾಂತಾ ನಾಗಮಂಗಲ, ಡಾ.ರಘು, ವಿ., ಧಾರವಾಡದ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಉಪನ್ಯಾಸ ನೀಡಿದರು. ರಾಜಶ್ರೀ ಎಸ್.ಹೆಗ್ಡೆ ಧನ್ಯವಾದವಿತ್ತರು. ಉಜಿರೆಯ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕರಾದ ಶ್ರೀಧರ ಭಟ್, ದಿವಾಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.
‘ಸೌಹಾರ್ದ ಮೂಡಿಸುವುದೇ ಉದ್ದೇಶ’
ಸಾಹಿತ್ಯ ಮತ್ತು ಜೀವನಕ್ಕೆ ಅವಿನಾಭಾವ ಸಂಬಂಧವಿದ್ದು ಸರ್ವರ ಹಿತವನ್ನು ಬಯಸುವ ಸಾಹಿತ್ಯ ಸಾತ್ವಿಕವಾದ ಸಭ್ಯ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ರಾಮಾಯಣ ಮಹಾಭಾರತಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಸಾಹಿತ್ಯವು ಆದರ್ಶ ಜೀವನವನ್ನು ರೂಪಿಸುತ್ತಾ ಬಂದಿದೆ. ಪುರಾಣಕಥೆಗಳು ಧಾರ್ಮಿಕ ಕಥೆಗಳು ಮಾನವನ ಮೇಲೆ ಗಾಢ ಪರಿಣಾಮ ಬೀರಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಸಾಹಿತ್ಯವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಭ್ಯ ಸುಸಂಸ್ಕೃತ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಸರ್ವರ ಹಿತವನ್ನು ಬಯಸುವ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯವಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ಇಂದು ಅನೇಕ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಅಂತರ್ಜಾಲದಲ್ಲಿ ಸಾಹಿತ್ಯ ಕಲೆ ಸಂಗೀತದ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಆಧುನಿಕ ತಂತ್ರಜ್ಞಾನದ ಬಳಕೆ ಹೊಸ ಮನ್ವಂತರವನ್ನೇ ಸೃಷ್ಟಿಸಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ 2200 ಗ್ರಂಥಾಲಯಗಳನ್ನು ಆರಂಭಿಸಿ ಓದುವ ಹವ್ಯಾಸ ಬೆಳೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.