ಉಜಿರೆ (ದಕ್ಷಿಣ ಕನ್ನಡ): ಸೌಜನ್ಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನಿಂದ ಪಾದಯಾತ್ರೆಯಲ್ಲಿ ಬಂದ ಯಲಹಂಕದ ಶರಣಬಸಪ್ಪ ಕಬ್ಜ ಮತ್ತು ತಂಡದವರನ್ನು ಧರ್ಮಸ್ಥಳದ ಮುಖ್ಯ ಪ್ರವೇಶದ್ವಾರದ ಬಳಿ ಗ್ರಾಮಸ್ಥರು ಮತ್ತು ವ್ಯಾಪಾರಿಗಳು ಸೋಮವಾರ ತಡೆದರು.
ಪಾದಯಾತ್ರಿಗಳ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.
ಪಾದಯಾತ್ರಿಗಳು ಧರ್ಮಸ್ಥಳಕ್ಕೆ ಬರುವ ಮಾಹಿತಿ ಪಡೆದು ಊರಿನವರು ಹಾಗೂ ಕ್ಷೇತ್ರದ ಭಕ್ತರು ಪ್ರವೇಶದ್ವಾರದ ಬಳಿ ಸೇರಿದ್ದರು. ‘ಈ ಪಾದಯಾತ್ರಿಗಳು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಕ್ಷೇತ್ರದ ಮತ್ತು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಕುರಿತು ಆಕ್ಷೇಪಾರ್ಹವಾದ ಮಾತುಗಳನ್ನು ಬಳಸಿ ನಿಂದಿಸಿದ್ದಾರೆ’ ಎಂದು ಆರೋಪಿಸಿದ ಗ್ರಾಮಸ್ಥರು ಶರಣಬಸಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಕ್ಷೇತ್ರದ ಕುರಿತು ಆಕ್ಷೇಪಾರ್ಹ ಮಾತುಗಳನ್ನು ಬಳಸಿದ ಬಗ್ಗೆ ‘ಲೈವ್ ವಿಡಿಯೊ’ ಮೂಲಕ ಕ್ಷಮೆ ಕೇಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಪಾದಯಾತ್ರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪಾದಯಾತ್ರಿಗಳನ್ನು ಠಾಣೆಗೆ ಕರೆದೊಯ್ದರು.
ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.