ಧರ್ಮಸ್ಥಳ (ದಕ್ಷಿಣ ಕನ್ನಡ): ‘ಭಾರತ ಹಿಂದೆಂದಿಗಿಂತಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಾಗ, ಕೆಲವು ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಅಂತಹ ಶಕ್ತಿಗಳ ಕುರಿತು ಜನ ಎಚ್ಚರವಾಗಿರಬೇಕು’ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿದರು.
ಧರ್ಮಸ್ಥಳ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಸರತಿ ಸಾಲಿನಲ್ಲಿ ಸಾಗುವುದಕ್ಕಾಗಿ ನಿರ್ಮಿಸಿರುವ ಸುಧಾರಿತ ಸೌಲಭ್ಯಗಳನ್ನು ಒಳಗೊಂಡ ಸಂಕೀರ್ಣ 'ಶ್ರೀ ಸಾನ್ನಿಧ್ಯ'ವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
'ಜಗತ್ತೇ ನಮ್ಮ ದೇಶದತ್ತ ಮುಖಮಾಡಿದೆ. ಇನ್ನೊಂದೆಡೆ ಈ ಅಭಿವೃದ್ಧಿಯನ್ನು ಸಹಿಸದ ಭಾರತ ವಿರೋಧಿ ಶಕ್ತಿಗಳು ಒಗ್ಗೂಡುತ್ತಿವೆ. ಅವು ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಹಾಗೂ ಸಾಂವಿಧಾನಿಕ ಹುದ್ದೆಗಳಿಗೆ ಕಳಂಕ ಹಚ್ಚಲು ಯತ್ನಿಸುತ್ತಿವೆ’ ಎಂದು ಅವರು ಆರೋಪಿಸಿದರು.
'ಬೀದಿಗಿಳಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಷ್ಟು ಕೆಳಮಟ್ಟಕ್ಕೂ ಅವರು ಇಳಿಯುತ್ತಾರೆ. ಸಾರ್ವಜನಿಕ ಸ್ವತ್ತುಗಳನ್ನು ನಾಶ ಪಡಿಸುವುದಕ್ಕೂ ಹೇಸುವುದಿಲ್ಲ. ಇದು ನಾಚಿಕೆಗೇಡಿನ ವಿಷಯ. ಇದನ್ನೆಲ್ಲ ಸಹಿಸಲು ಸಾಧ್ಯವೇ? ಇಂತಹವರು ದೇಶದ ಶತ್ರುಗಳು. ಅವರಿಂದಾಗಿ 145 ಕೋಟಿ ಜನ ಸಮಸ್ಯೆ ಎದುರಿಸುವುದಕ್ಕೆ ಅವಕಾಶ ನೀಡಬಾರದು. ಅಂತಹವರನ್ನು ಒಂಟಿಯಾಗಿಸಬೇಕು. ದೇಶದ ಕೆಲವು ಕಡೆ ಇದನ್ನು ಮಾಡಿತೋರಿಸಲಾಗಿದೆ. ದೇಶದ ಎಲ್ಲ ಕಡೆಯೂ ಇದು ಸಾಧ್ಯವಾಗಬೇಕು' ಎಂದರು.
'ರಾಜಕಾರಣಿಗಳಿಗೆ ಸಿದ್ಧಾಂತ ಮುಖ್ಯ. ಅಧಿಕಾರವೇ ರಾಜಕೀಯದ ಉದ್ದೇಶ ಆಗಬಾರದು. ದಿನದ ಇಪ್ಪತ್ತನಾಲ್ಕು ಗಂಟೆಗಳನ್ನೂ ರಾಜಕೀಯ ಲಾಭ ಗಳಿಕೆಗಾಗಿ ವಿನಿಯೋಗಿಸುವುದಲ್ಲ. ದೇಶಕ್ಕೆ ಸೇವೆ ಸಲ್ಲಿಸುವುದೇ ರಾಜಕಾರಣಿಗಳ ಧ್ಯೇಯವಾಗಬೇಕು' ಎಂದರು.
ಸಾನ್ನಿಧ್ಯ ಸಂಕೀರ್ಣದ ಅತ್ಯಾಧುನಿಕ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, 'ಇದು ಕೇವಲ ಕಟ್ಟಡ ಮಾತ್ರವಲ್ಲ. ಸೇವೆಯ ದ್ಯೋತಕ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ, 'ಭಕ್ತರ ಅವಶ್ಯಕತೆಗೆ ಅನುಗುಣವಾಗಿ ಶ್ರೀಸಾನಿಧ್ಯವನ್ನು ನಿರ್ಮಿಸಲಾಗಿದೆ. ಬೇಸಿಗೆ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಕಲ್ಪಿಸಿದ್ದೇವೆ' ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ'ದ 2024-25 ನೇ ಸಾಲಿನ ಚಟುವಟಿಕೆಗಳಿಗೆ ಉಪರಾಷ್ಟ್ರಪತಿಯವರು ಚಾಲನೆ ನೀಡಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಧನ್‌ಕರ್ ಅವರ ಪತ್ನಿ ಸುದೇಶ್ ಧನಕರ್, ಹೇಮಾವತಿ ವಿ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.