
ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು
ಉಜಿರೆ: ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತರು ತಮ್ಮಲ್ಲಿರುವ ದೋಷಗಳನ್ನೆಲ್ಲ ತ್ಯಜಿಸಿ, ಉತ್ತಮ ಆಚಾರ-ವಿಚಾರಗಳೊಂದಿಗೆ ಸಂಸ್ಕಾರಯುತ ಸಾರ್ಥಕ ಜೀವನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳನ್ನು ಪ್ರವಚನ ಮಂಟಪದಲ್ಲಿ ಅಭಿನಂದಿಸಿ ಅವರು ಮಾತನಾಡಿದರು.
ವಿಷಕಂಠನಾದ ಮಂಜುನಾಥಸ್ವಾಮಿಗೆ ಎಲ್ಲ ದೋಷಗಳನ್ನು ಸ್ವೀಕರಿಸಿ ಲೋಕಕಲ್ಯಾಣ ಮಾಡುವ ಶಕ್ತಿ ಇದೆ. ಆದ್ದರಿಂದಲೇ ಅಪಘಾತದಲ್ಲಿ ಹಾಗೂ ಅಪಮೃತ್ಯುವಿನಲ್ಲಿ ಮೃತಪಟ್ಟವರ ಮೋಕ್ಷಪ್ರಾಪ್ತಿಗಾಗಿ ಭಕ್ತರು ಧರ್ಮಸ್ಥಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಶ್ರದ್ಧಾ-ಭಕ್ತಿಯಿಂದ ನಿಃಸ್ವಾರ್ಥವಾಗಿ ಪಾದಯಾತ್ರೆ ಮಾಡಿದಾಗ ಹೆಚ್ಚಿನ ಫಲ ಸಿಗುತ್ತದೆ. ಮಹಿಳೆಯರೂ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೆಗ್ಗಡೆ ಹೇಳಿದರು.
ಧರ್ಮಸ್ಥಳದ ಭಕ್ತರ ಸೇವೆ ಮಾಡಿದರೂ ಸ್ವಾಮಿಯ ಸೇವೆ ಮಾಡಿದಷ್ಟೆ ಪುಣ್ಯ ಸಂಚಯವಾಗುತ್ತದೆ ಎಂಬ ಭಾವನೆಯಿಂದ ದಾರಿಯುದ್ದಕ್ಕೂ ಊರಿನ ನಾಗರಿಕರು ಹಾಗೂ ಸಾರ್ವಜನಿಕರು ಪಾದಯಾತ್ರಿಗಳಿಗೆ ಎಳನೀರು, ಉಚಿತ ಪಾನೀಯ, ಹಣ್ಣು-ಹಂಪಲು, ವಸತಿ, ಊಟದ ವ್ಯವಸ್ಥೆ ಮಾಡಿ ಸಹಕರಿಸಿದ್ದಾರೆ. ಭಕ್ತರ ಸೇವೆಯೇ ಭಗವಂತನ ಸೇವೆ ಎಂಬ ಭಾವನೆಯಿಂದ ಶಿವರಾತ್ರಿಯಂದು ಭಾನುವಾರ ಬೆಂಗಳೂರಿನ ಭಕ್ತರು ಅನ್ನಪೂರ್ಣದ ಹಿಂಭಾಗದ ಮೈದಾನದಲ್ಲಿ ಹಾಗೂ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಅನ್ನದಾಸೋಹದ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪಾದಯಾತ್ರಿಗಳ ವತಿಯಿಂದ ಹೆಗ್ಗಡೆ ಅವರ ಆಪ್ತಕಾರ್ಯದರ್ಶಿ ಎ.ವಿ.ಶೆಟ್ಟಿ ಅವರನ್ನು ಗೌರವಿಸಿದರು.
ಧರ್ಮಸ್ಥಳದ ವತಿಯಿಂದ ಪಾದಯಾತ್ರೆಯ ರೂವಾರಿ ಗುರು ಹನುಮಂತಪ್ಪ ಸ್ವಾಮೀಜಿ ಮತ್ತು ಮರಿಯಪ್ಪ ಅವರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.