ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಿದ ಪ್ರಕರಣದ (ಸಂಖ್ಯೆ 39/2025 ) ಸಾಕ್ಷಿ ದೂರುದಾರ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ 13 ಜಾಗಗಳನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳಿಗೆ ಸೋಮವಾರ ತೋರಿಸಿದರು.
ಮುಖಕ್ಕೆ ಮುಸುಕು ಹಾಕಿದ್ದ ಸಾಕ್ಷಿ ದೂರುದಾರ ತೋರಿಸಿದ ಒಂದೊಂದು ಜಾಗದ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್ ಕಟ್ಟಿದರು. ಆತ ತೋರಿಸುತ್ತಾ ಹೋದ ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಗುರುತು ಮಾಡಿದರು.
ಎಸ್‌ಐಟಿ ಅಧಿಕಾರಿಗಳು, ವಿಧಿ ವಿಜ್ಞಾನ ತಜ್ಞರು (ಸೀನ್ ಆಫ್ ಕ್ರೈಂ ಅಧಿಕಾರಿಗಳು) ಹಾಗೂ ಭದ್ರತಾ ಸಿಬ್ಬಂದಿ ಸಾಕ್ಷಿ ದೂರುದಾರನ ಜೊತೆ ಸುಮಾರು ಎರಡು ಕಿ.ಮೀ ದೂರದ ಮುಂಡಾಜೆ ಮೀಸಲು ಅರಣ್ಯಕ್ಕೆ ಸೇರಿದ ಕಾಡಿನಲ್ಲಿ ಅಲೆದರು. ಎಸ್‌ಐಟಿಯ ಸಿಬ್ಬಂದಿ ಆತ ತೋರಿಸಿದ ಜಾಗಗಳ ವಿಡಿಯೊ ಚಿತ್ರೀಕರಣ ಮಾಡಿಕೊಂಡರು.
ಸಾಕ್ಷಿ ದೂರುದಾರ ಸೋಮವಾರ ತೋರಿಸಿರುವ 13 ಜಾಗಗಳೂ ಧರ್ಮಸ್ಥಳ ಪೊಲೀಸ್ ಠಾಣೆಯಿಂದ 1 ಕಿ.ಮೀ ವ್ಯಾಪ್ತಿಯ ಕಾಡಿನಲ್ಲಿವೆ. ಮೊದಲು ತೋರಿಸಿದ ಎಂಟು ಜಾಗಗಳು ನೇತ್ರಾವತಿ ನದಿ ದಂಡೆಯಲ್ಲಿದ್ದರೆ, ಉಳಿದ ನಾಲ್ಕು ಜಾಗಗಳು ನೇತ್ರಾವತಿ ಸೇತುವೆಯಿಂದ ಸ್ನಾನಘಟ್ಟದ ಕಡೆಗೆ ರಾಜ್ಯ ಹೆದ್ದಾರಿ–37ರ ಪಕ್ಕದಲ್ಲಿವೆ. ಒಂದು ಜಾಗ ಮಾತ್ರ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಬಯಲು ಜಾಗದಲ್ಲಿದೆ.
ಸಾಕ್ಷಿ ದೂರುದಾರ ವಕೀಲರ ತಂಡದ ಜೊತೆಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಾಜರಾಗಿದ್ದರು. ಅಲ್ಲಿಂದ ಬೆಳಿಗ್ಗೆ 11.50ರ ಸುಮಾರಿಗೆ ಎಸ್‌ಐಟಿ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಆತನನ್ನು ಧರ್ಮಸ್ಥಳ ಸ್ನಾನಘಟ್ಟದ ಬಳಿಗೆ ಕರೆದೊಯ್ದರು. ಮೊದಲ ದಿನ ಸುಮಾರು 15 ಜಾಗಗಳನ್ನು ಗುರುತಿಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಮಧ್ಯಾಹ 2 ಗಂಟೆವರೆಗೆ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ಎಂಟು ಜಾಗಗಳನ್ನು ತೋರಿಸಿದ್ದರು. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಆತನನ್ನು ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಆತನಿಗೆ ಊಟದ ವ್ಯವಸ್ಥೆ ಮಾಡಿದರು. ಊಟ ಮುಗಿಸಿದ ಬಳಿಕ ಎಸ್‌ಐಟಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತೆ ಆತನನ್ನು ಕಾಡಿನೊಳಕ್ಕೆ ಕರೆದೊಯ್ದು ಜಾಗದ ಹುಡುಕಾಟ ಮುಂದುವರಿಸಿದರು.
ಮಧ್ಯಾಹ್ನ ಊಟದ ಬಳಿಕ ರಾಜ್ಯ ಹೆದ್ದಾರಿ ಪಕ್ಕದ ಕಾಡಿನಲ್ಲಿ ನಾಲ್ಕು ಜಾಗಗಳನ್ನು ತೋರಿಸಿದ್ದರು. ಬಳಿಕ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಜಾಗ ತೋರಿಸಿದರು. ಒಟ್ಟು 13 ಜಾಗಗಳನ್ನು ಗುರುತಿಸುವ ಪ್ರಕ್ರಿಯೆ ಮುಗಿಸುವಷ್ಟರಲ್ಲಿ ಸಂಜೆಯಾಗಿತ್ತು. ಸ್ನಾನಘಟ್ಟದ ಬಳಿ ನೇತ್ರಾವತಿ ನದಿಯ ಆಚೆ ಬದಿಯಲ್ಲೂ ಜಾಗವನ್ನು ಗುರುತಿಸಬೇಕಿತ್ತು. ಸೇತುವೆ ಮೂಲಕ ಸಾಗಿ ಕನ್ಯಾಡಿ ಬಳಿಯ ರಸ್ತೆ ಮೂಲಕ ನದಿಯ ಇನ್ನೊಂದು ಬದಿಗೆ ಸಾಕ್ಷಿ ದೂರುದಾರರನ್ನು ಕರೆದೊಯ್ಯುವಷ್ಟರಲ್ಲಿ ಸಂಜೆ 6 ಗಂಟೆ ದಾಟಿತ್ತು. ಜೋರಾಗಿ ಮಳೆ ಸುರಿಯಿತಲ್ಲದೇ, ಕತ್ತಲು ಆವರಿಸಿತ್ತು. ಹಾಗಾಗಿ ಜಾಗಗಳ ಹುಡುಕಾಟ ಪ್ರಕ್ರಿಯೆಯನ್ನು ಈ ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು.
ಸ್ಥಳಕ್ಕೆ ಬಂದು ಅಲ್ಲಿಂದ ನಿರ್ಗಮಿಸುವರೆಗೂ ಸಾಕ್ಷಿ ದೂರುದಾರರ ಮುಖಕ್ಕೆ ಕವಚ ಹಾಕಿ ಗುರುತು ಮರೆಮಾಚಲಾಗಿತ್ತು. ಆತನನ್ನು ಸ್ನಾನಘಟ್ಟದವರೆಗೆ ಕರೆದೊಯ್ಯುವವರೆಗೆ ಐವರು ವಕೀಲರ ತಂಡ ಜೊತೆಗಿತ್ತು. ಕಾಡಿನ ಒಳಗೆ ಕರೆದೊಯ್ದಾಗ ವಕೀಲರು ಜೊತೆಯಲ್ಲಿ ಇರಲಿಲ್ಲ.
‘ಸಾಕ್ಷಿ ದೂರುದಾರ ತೋರಿಸಿರುವ ಜಾಗಗಳಲ್ಲಿ ಕೆಲವು ಕಡೆ ಒಂದಕ್ಕಿಂತ ಹೆಚ್ಚು ಮೃತದೇಹಗಳನ್ನು ಹೂತಿರಬಹುದು. ಅವುಗಳನ್ನು ಹೊರಗೆ ತೆಗೆದ ಬಳಿಕವಷ್ಟೇ ಆ ಜಾಗಗಳಲ್ಲಿ ಎಷ್ಟು ಮೃತದೇಹಗಳಿವೆ ಎಂಬುದು ನಿಖರವಾಗಿ ಗೊತ್ತಾಗಲಿದೆ. ಮೃತದೇಹಗಳನ್ನು ಹೂತುಹಾಕಲಾಗಿದೆ ಎನ್ನಲಾದ ಜಾಗಗಳನ್ನು ಗುರುತಿಸುವ ಕಾರ್ಯ ಮಂಗಳವಾರವೂ ಮುಂದುವರಿಯಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್. ಅನುಚೇತ್ ಅವರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ತನಿಖೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್.ಪಿ ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಸಾಕ್ಷಿ ದೂರುದಾರರನ್ನು ಮಂಗಳೂರಿನ ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ಎಸ್‌ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರು ತನಿಖೆಯ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಭಾನುವಾರ ಮಾರ್ಗದರ್ಶನ ಮಾಡಿದ್ದರು.
ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಜಾಗವನ್ನು ತೋರಿಸಲು ಸಾಕ್ಷಿ ದೂರುದಾರರನ್ನು ಕರೆದೊಯ್ಯುವಾಗ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗರುಡ ಪಡೆ ಹಾಗೂ ವಿಶೇಷ ಕಾರ್ಯಪಡೆಯ ತರಬೇತಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗಾಗಿ ಬಳಸಲಾಗಿತ್ತು. ಸಾಕ್ಷಿ ದೂರುದಾರ ಜಾಗವನ್ನು ತೋರಿಸುವಾಗ ಈ ಪಡೆಗಳ ಸಿಬ್ಬಂದಿ ರೈಫಲ್ ಹಿಡಿದುಕೊಂಡೇ ಭದ್ರತೆ ಒದಗಿಸಿದರು. ಸಾಕ್ಷಿ ದೂರುದಾರರನ್ನು ಕಾಡಿನ ಒಳಗೆ ಕರೆದೊಯ್ಯುವಾಗ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಒಂದು ತುಕಡಿಯನ್ನು ಭದ್ರತೆಗಾಗಿ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ನಾನಘಟ್ಟದ ಬಳಿ ಇದ್ದ ಸಾರ್ವಜನಿಕರನ್ನು ಪೊಲೀಸರು ಆಚೆಗೆ ಕಳುಹಿಸಿದರು. ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗದತ್ತ ಸಾರ್ವಜನಿಕರು ಹೋಗುವುದನ್ನು ತಡೆಯಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಬಯಲು ಪ್ರದೇಶದ ಜಾಗ ಗುರುತಿಸುವ ಪ್ರಕ್ರಿಯೆಯನ್ನು ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಯಿತು. ಆದರೆ ಕಾಡಿನ ಒಳಗೆ ಬಾನೆತ್ತರ ಬೆಳೆದ ಮರಗಳ ನಡುವಿನ ಜಾಗಗಳನ್ನು ಗುರುತಿಸುವಾಗ ಡ್ರೋನ್ ಚಿತ್ರೀಕರಣ ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.