ADVERTISEMENT

ಧರ್ಮಸ್ಥಳ ಪ್ರಕರಣ| ತನಿಖೆ ಚುರುಕುಗೊಳಿಸಿದ ಎಸ್‌ಐಟಿ: ಸಾಕ್ಷಿ ದೂರುದಾರನ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 23:03 IST
Last Updated 16 ಆಗಸ್ಟ್ 2025, 23:03 IST
‘ಧರ್ಮಸ್ಥಳ ಚಲೊ’ ಯಾತ್ರೆ ಮೂಲಕ ಬೆಂಗಳೂರಿನಿಂದ ಧರ್ಮಸ್ಥಳ ಕ್ಷೇತ್ರವನ್ನು ಶನಿವಾರ ತಲುಪಿದ ಶಾಸಕ ಎಸ್‌.ಆರ್‌.ವಿಶ್ವನಾಥ್ ಮತ್ತು ಬಳಗದವರನ್ನು ಹೂಮಳೆಗರೆದು ಬರಮಾಡಿಕೊಳ್ಳಲಾಯಿತು
‘ಧರ್ಮಸ್ಥಳ ಚಲೊ’ ಯಾತ್ರೆ ಮೂಲಕ ಬೆಂಗಳೂರಿನಿಂದ ಧರ್ಮಸ್ಥಳ ಕ್ಷೇತ್ರವನ್ನು ಶನಿವಾರ ತಲುಪಿದ ಶಾಸಕ ಎಸ್‌.ಆರ್‌.ವಿಶ್ವನಾಥ್ ಮತ್ತು ಬಳಗದವರನ್ನು ಹೂಮಳೆಗರೆದು ಬರಮಾಡಿಕೊಳ್ಳಲಾಯಿತು   

ಮಂಗಳೂರು: ಧರ್ಮಸ್ಥಳ ಬೆಳವಣಿಗೆ ಕುರಿತು ಇದುವರೆಗೆ ನಡೆದ ಶೋಧ ಕಾರ್ಯದಲ್ಲಿ ಪತ್ತೆಯಾದ ಅಂಶಗಳ ಬಗೆಗಿನ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿದೆ.

ಸಾಕ್ಷಿ ದೂರುದಾರನ ಬೆಳ್ತಂಗಡಿಯ ಕಚೇರಿಗೆ ಶನಿವಾರ ಕರೆಸಿಕೊಂಡ ಎಸ್‌ಐಟಿ ಅಧಿಕಾರಿಗಳು, ಆತ ದೂರಿನಲ್ಲಿ ಮಾಡಿರುವ ಆರೋಪಗಳು ಹಾಗೂ ಆತ ತೋರಿಸಿದ ಜಾಗಗಳ ಶೋಧಕಾರ್ಯಕ್ಕೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಿದರು.

ಶೋಧ ಕಾರ್ಯದ ವೇಳೆ 6 ಹಾಗೂ 11ನೇ ಜಾಗಕ್ಕಿಂತ 100 ಮೀ ದೂರದಲ್ಲಿ ಸಿಕ್ಕಿರುವ ಮೃತದೇಹಗಳ ಅವಶೇಷಗಳನ್ನು ಬೆಂಗಳೂರಿನ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹಾಗೂ ಕಸ್ತೂರಬಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. 

ADVERTISEMENT

‘ಈವರೆಗಿನ ಶೋಧ ಕಾರ್ಯಕ್ಕೆ ಸಂಬಂಧಿಸಿದ ತನಿಖೆಗೆ ಸಾಕಷ್ಟು ಸಮಯಬೇಕು. ಅಗತ್ಯ ನೋಡಿಕೊಂಡು ಶೋಧ ಕಾರ್ಯ ಮುಂದುವರಿಸುತ್ತೇವೆ’ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಎಸ್‌ಐಟಿ, ಹೊಸತಾಗಿ ಬಂದ ದೂರುಗಳಿಗೆ ಸಂಬಂಧಿಸಿದ ತನಿಖೆ ಆರಂಭಿಸಿಲ್ಲ. ಸಾಕ್ಷಿ ದೂರುದಾರ ಮಾಡಿರುವ ಆರೋಪಗಳ ತನಿಖೆ ಒಂದು ಹಂತಕ್ಕೆ ಬಂದ ಬಳಿಕವಷ್ಟೇ ಉಳಿದ ದೂರುಗಳ ತನಿಖೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.  

ಸಾಕ್ಷಿ ದೂರುದಾರ ತೋರಿಸಿರುವ 18 ಜಾಗಗಳ ಪೈಕಿ ಈವರೆಗೆ 17 ಕಡೆ ನೆಲ ಅಗೆದಿದ್ದು, ಎರಡು ಕಡೆ ಮೃತದೇಹಗಳ ಅವಶೇಷಗಳು ಸಿಕ್ಕಿವೆ. ಶನಿವಾರ ಹೊಸ ಜಾಗ ತೋರಿಸಿಲ್ಲ.

ಮೃತದೇಹ ವಿಲೇವಾರಿಯಲ್ಲಿ ಲೋಪ: ‘13ರಿಂದ 15 ವರ್ಷದೊಳಗಿನ ಬಾಲಕಿಯ ಮೃತದೇಹ ಹೂತು ಹಾಕಿದ ಬಗ್ಗೆ ತನಿಖೆ ನಡೆಸುವಂತೆ ಎಸ್‌ಐಟಿಗೆ ಆ. 4ರಂದು ದೂರು ನೀಡಿದ್ದೆ. ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ. ಕೃತ್ಯ ನಡೆದಾಗ ಜೊತೆಗಿದ್ದವರ ಬಗ್ಗೆ ತಿಳಿಸಿದ್ದೆ. ಎಸ್‌ಐಟಿಯವರು ಅವರ ಮನೆಗೆ ಹೋಗಿ ಮಾಹಿತಿ ಪಡೆದಿದ್ದು, ಗುರುವಾರ ಸ್ಥಳ ಮಹಜರು ನಡೆಸಿದ್ದಾರೆ.  ಇನ್ನಷ್ಟೇ ನಾನು ತೋರಿಸಿದ್ದ ಜಾಗ ಅಗೆಯಬೇಕಿದೆ’ ಎಂದು ಕಡಬ ತಾಲ್ಲೂರು ಇಚ್ಲಂಪಾಡಿಯ ಜಯಂತ್‌ ಟಿ. ಸುದ್ದಿಗಾರರಿಗೆ ತಿಳಿಸಿದರು.

ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಹೇಳಿಕೆ ದಾಖಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ, ‘2010ರ ಏ. 6 ರಂದು ಧರ್ಮಸ್ಥಳದ ವಸತಿಗೃಹವೊಂದರಲ್ಲಿ 35ರಿಂದ 40 ವರ್ಷದ ಮಹಿಳೆ ಕೊಲೆ ಕುರಿತು ಮಾಹಿತಿ ಹಕ್ಕಿನಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ದಿನವೇ, ದಫನ ಮಾಡಿದ್ದಾರೆ. ಮೃತ ವ್ಯಕ್ತಿ ಯಾರು ಎಂದು ತಿಳಿಯುವ ಯತ್ನ ನಡೆದಿಲ್ಲ ಪ್ರಕರಣ ಮುಚ್ಚಿ ಹಾಕಿದ್ದು ಯಾರು’ ಎಂದು ಪ್ರಶ್ನಿಸಿದರು.‌

‘ಮಾಹಿತಿ ಹಕ್ಕಿನಡಿ 1995ರಿಂದ 2024ರವರೆಗೆ ಧರ್ಮಸ್ಥಳದಲ್ಲಿ ಸಂಭವಿಸಿದ್ದ 160 ಅಸಹಜ ಸಾವುಗಳ ಮಾಹಿತಿ ಪಡೆದಿದ್ದೇನೆ. ಕೆಲ ಮೃತದೇಹಗಳು ಬಸ್‌ನಿಲ್ದಾಣದ ಬಳಿ, ದ್ವಾರದ ಬಳಿ, ಬೆಟ್ಟಕ್ಕೆ ಹೋಗುವ ದಾರಿಯ ಬಳಿ ಸಿಕ್ಕಿವೆ. ಆತ್ಮಹತ್ಯೆ ಮಾಡಿಕೊಂಡವರ ದೇಹಗಳು ಇವೆ. ಇವನ್ನು ಅದೇ ದಿನ ದಫನ ಮಾಡಿದ್ದು ಸರಿಯೇ’ ಎಂದು ಪ್ರಶ್ನಿಸಿದರು.

ಸಾಕ್ಷಿದಾರರಿಗೆ ಬೆದರಿಕೆ: ‘ಸಾಕ್ಷಿದಾರರೊಬ್ಬರಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಬೆದರಿಕೆ ಒಡ್ಡಿದ್ದಾರೆ. ಬೆದರಿಕೆ ಒಡ್ಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಠಾಣೆಗೆ ದೂರು ನೀಡಿದ್ದೇವೆ’ ಎಂದು ಜಯಂತ ಟಿ. ತಿಳಿಸಿದರು.

ಶಾಸಕ ಎಸ್‌.ಆರ್‌.ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟ ‘ಧರ್ಮಸ್ಥಳ ಚಲೊ’ ಯಾತ್ರೆ ಧರ್ಮಸ್ಥಳ ಕ್ಷೇತ್ರವನ್ನು ಶನಿವಾರ ತಲುಪಿತು
‘ಒಂದು ವಾರ ಶಿವ ಪಂಚಾಕ್ಷರಿ ಪಠಣ’
‘ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರಗಳಿಗೆ ಸೋಲುಂಟಾಗಲಿ. ಅಪಪ್ರಚಾರ ನಿಲ್ಲಲಿ ಕ್ಷೇತ್ರದಲ್ಲಿ ಶ್ರದ್ದೆ ಭಕ್ತಿ ಬೆಳಗಿ ಶಾಂತಿ ನೆಲಸಲಿ‘ ಎಂಬ ಸಂಕಲ್ಪದೊಂದಿಗೆ ಇದೇ 18ರಿಂದ ಒಂದು ವಾರ ರಾಜ್ಯದಾದ್ಯಂತ ಸಾಮೂಹಿಕ ಶಿವ ಪಂಚಾಕ್ಷರಿ ( ಓಂ ನಮಃ ಶಿವಾಯ) ಜಪ ಅನುಷ್ಠಾನ ಮಾಡುವಂತೆ ವಿಶ್ವ ಹಿಂದೂ ಪರಿಷದ್ ಹೇಳಿದೆ. ‘ಮಂಗಳೂರಿನ  ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಇದೇ 18ರಂದು ಬೆಳಿಗ್ಗೆ 9ಕ್ಕೆ ಶಿವ ಪಂಚಾಕ್ಷರಿ ಜಪ ಅನುಷ್ಠಾನ ಪ್ರಾರಂಭಗೊಳ್ಳಲಿದೆ. ಹಿಂದೂಗಳು ತಮ್ಮ ಮನೆಗಳಲ್ಲಿ ಜಪ ಅನುಷ್ಠಾನ ಮಾಡಬೇಕು’ ಎಂದು ವಿಎಚ್‌ಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ ಪುರುಷೋತ್ತಮ ಹಾಗೂ ಕಾರ್ಯದರ್ಶಿ ರವಿ ಅಸೈಗೋಳಿ ಕೋರಿದ್ದಾರೆ.
ಶಾಸಕ ವಿಶ್ವನಾಥ್ ನೇತೃತ್ವದಲ್ಲಿ 'ಧರ್ಮಸ್ಥಳಕ್ಕೆ ಬಂದ ಯಾತ್ರೆ‘
ಕ್ಷೇತ್ರದ ಅಪಪ್ರಚಾರ ತಡೆಗೆ ಒತ್ತಾಯಿಸಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟ 'ಧರ್ಮಸ್ಥಳ ಚಲೊ' ಯಾತ್ರೆ ಶನಿವಾರ ಸಂಜೆ ಧರ್ಮಸ್ಥಳ ತಲುಪಿತು. ಯಾತ್ರೆಯಲ್ಲಿ ಪಾಲ್ಗೊಂಡವರು ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಎಸ್‌.ಆರ್‌.ವಿಶ್ವನಾಥ್‌ ‘ತನಿಖೆ ವರದಿ ಬಂದ ಬಳಿಕ ಮೊದಲು ಸಾಕ್ಷಿ ದೂರುದಾರನ ವಿಚಾರಣೆ ಮಾಡಬೇಕು. ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು. ‘ದೂರುದಾರ ಮುಖ ಮುಚ್ಚಿಕೊಂಡಿರುವುದು ಏಕೆ. ಅವನ ಹೆಸರನ್ನು ಎಸ್‌ಐಟಿ ಬಹಿರಂಗ ಮಾಡುತ್ತಿಲ್ಲವೇಕೆ.  ಆತ ಮತಾಂತರಗೊಂಡ ವ್ಯಕ್ತಿ. ಮೂರು ಮದುವೆಯಾಗಿದ್ದಾನೆ ಎಂಬ ಮಾಹಿತಿ ಇದೆ’ ಎಂದರು. ‘ಎಸ್‌ಡಿಪಿಐ ಹಾಗೂ ಎಡಪಂಥೀಯರ ಷಡ್ಯಂತ್ರದಿಂದ ಸರ್ಕಾರ ಎಸ್ಐಟಿಯನ್ನು ರಚಿಸಲಾಗಿದೆ. ಯೂಟ್ಯೂಬರ್‌ಗಳು ಹಾಗೂ ಬೇರೆ ಬೇರೆಯವರು ಸೇರಿ ಅಂತರರಾಷ್ಟ್ರೀಯ ಷಡ್ಯಂತ್ರ ಮಾಡಿದ್ದಾರೆ. ಹೊರದೇಶಗಳಿಂದಲೂ ಹಣ ಸಂದಾಯವಾಗಿರಬಹುದು’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.