ADVERTISEMENT

ಕ್ಷೇತ್ರ ಬೆಳಗುತ್ತಿದೆ, ನಾವೀಗ ನಿರಾಳ... ಎಂದ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಶೀಘ್ರದಲ್ಲೇ ಸೇವಾ ಕಾರ್ಯಗಳಿಗೆ ಚಾಲನೆ –ಡಿ.ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 21:07 IST
Last Updated 28 ಸೆಪ್ಟೆಂಬರ್ 2025, 21:07 IST
ಧರ್ಮಸ್ಥಳದಲ್ಲಿ ನಡೆದ ಸತ್ಯದರ್ಶನ ಸಮಾವೇಶದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು
ಧರ್ಮಸ್ಥಳದಲ್ಲಿ ನಡೆದ ಸತ್ಯದರ್ಶನ ಸಮಾವೇಶದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು   

ಉಜಿರೆ (ದಕ್ಷಿಣ ಕನ್ನಡ): ‘ಧರ್ಮಸ್ಥಳ ಕ್ಷೇತ್ರದ ವತಿಯಿಂದ ಸದ್ಯದಲ್ಲೇ ಹಲವು ಸಮಾಜಮುಖಿ ಸೇವಾ ಕಾರ್ಯ ಪ್ರಾರಂಭಿಸಲಾಗುವುದು’ ಎಂದು ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಭಾನುವಾರ ಧರ್ಮಸ್ಥಳದಲ್ಲಿ ಪ್ರಕಟಿಸಿದರು.

ಬೆಳ್ತಂಗಡಿ ತಾಲ್ಲೂಕಿನ 81 ಗ್ರಾಮಗಳ ಗ್ರಾಮಸ್ಥರು ಆಯೋಜಿಸಿದ್ದ ‘ಸತ್ಯ ದರ್ಶನ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕುಟುಂಬದ ಕಾರ್ಯಕ್ರಮ ಎಂಬಂತೆ ಸಂಭ್ರಮದಿಂದ ಭಾಗವಹಿಸಿದ್ದೀರಿ. ಈಗ ನಾವು ನಿರಾಳರಾಗಿದ್ದು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದರು.

ADVERTISEMENT

‘ಧರ್ಮಸ್ಥಳದ ಬಗ್ಗೆ ಸುಳ್ಳು ವದಂತಿ ಪಸರಿಸಿದರೂ, ಷಡ್ಯಂತ್ರದ ರಹಸ್ಯ ಬಯಲಾಗಿ ಪವಿತ್ರಕ್ಷೇತ್ರ ಇನ್ನಷ್ಟು ಬೆಳಗುತ್ತಿದೆ. ಭಕ್ತರು, ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಈಗ ಸತ್ಯದ ಅನಾವರಣವಾಗಿದ್ದು, ಸರ್ಕಾರ, ಎಸ್‌ಐಟಿಗೆ ಅಭಿನಂದಿಸುತ್ತೇವೆ’ ಎಂದರು.

ಸಮಾವೇಶಕ್ಕೆ ಪೂರ್ವಭಾವಿಯಾಗಿ ಧರ್ಮಸ್ಥಳದ ಅರ್ಚಕ ರಾಮಕೃಷ್ಣ ಕಲ್ಲೂರಾಯ ಅವರ ನೇತೃತ್ವದಲ್ಲಿ ಚಂಡಿಕಾಹೋಮ ನಡೆಸಲಾಯಿತು.

ಡಾ. ಪ್ರದೀಪ್ ನಾವೂರು, ಸಮಾವೇಶದ ಸಂಚಾಲಕ ಸುಬ್ರಹ್ಮಣ್ಯ ಅಗರ್ತ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ , ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಇತರ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.