ಮಂಗಳೂರು: ‘ಪೆನ್ಸಿಲ್ವೇನಿಯ ರಾಜ್ಯವು ಅಮೆರಿಕದ ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದು, ರಾಜ್ಯದ ಆರ್ಥಿಕತೆಗೆ 132.5 ಬಿಲಿಯನ್ ಡಾಲರ್ ಮೊತ್ತವನ್ನು ನೀಡುತ್ತಿದೆ. ಆಹಾರ ಉತ್ಪಾದನಾ ಕ್ಷೇತ್ರದಲ್ಲಿ 4ನೇ ಅತಿದೊಡ್ಡ ರಾಜ್ಯವಾಗಿದ್ದು, ಭಾರತೀಯ ಕಂಪನಿಗಳು ಅಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ’ ಎಂದು ಪೆನ್ಸಿಲ್ವೇನಿಯಾದ ವಿದೇಶಿ ನೇರ ಹೂಡಿಕೆ ಪ್ರತಿನಿಧಿಯಾಗಿರುವ, ಭಾರತದಲ್ಲಿರುವ ಪೆನ್ಸಿಲ್ವೇನಿಯ ಟ್ರೇಡ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಚೇರಿಯ ನಿರ್ದೇಶಕಿ ಸುಪ್ರಿಯಾ ಕನೇಟ್ಕರ್ ಹೇಳಿದರು.
ನಗರದ ಕೆನರಾ ಚೇಂಬರ್ ಆಫ್ ಕಾಮರ್ಸ್ (ಕೆಸಿಸಿಐ) ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಅಮೆರಿಕದಲ್ಲಿ ಉದ್ದಿಮೆ ಸ್ಥಾಪಿಸಲು ಭಾರತೀಯ ಕಂಪನಿಗಳಿಗೆ ಇರುವ ಅವಕಾಶ ಹಾಗೂ ಅಮೆರಿಕದ ಕಂಪನಿಗಳಿಗೆ ಭಾರತದಲ್ಲಿ ಇರುವ ಅವಕಾಶಗಳ ಬಗ್ಗೆ ವಿವರಿಸಿದರು.
ಪೆನ್ಸಿಲ್ವೇನಿಯಾದಲ್ಲಿ ಆಗಿರುವ ತಾಂತ್ರಿಕ ಕ್ಷೇತ್ರದ ಅಭಿವೃದ್ಧಿ, ಕೊಡುಗೆಗಳು, ಬೆಳವಣಿಗೆ, ಉದ್ದಿಮೆಗೆ ಸಹಕಾರಿ ಆಗಿರುವ ಕಾರ್ಯಕ್ರಮಗಳನ್ನು ತಿಳಿಸಿದರು.
ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ 1,189 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅಮೆರಿಕದ ಎರಡನೇ ಅತಿ ದೊಡ್ಡ ಇಂಧನ ಪೂರೈಸುವ ರಾಜ್ಯವಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ 3,081 ಜೈವಿಕ ವಿಜ್ಞಾನ ಕ್ಷೇತ್ರದ ಸಂಸ್ಥೆಗಳಿವೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಮೂಲ ಸೌಲಭ್ಯ, ಉತ್ಪಾದನೆ, ರೊಬೊಟಿಕ್ಸ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಅಮೆರಿಕದಲ್ಲಿ ಉದ್ದಿಮೆ ಸ್ಥಾಪಿಸಲು, ಉದ್ದಿಮೆ ಕ್ಷೇತ್ರಗಳ ಭೇಟಿ, ಮೂಲಸೌಲಭ್ಯ, ಕಾರ್ಮಿಕರು, ತೆರಿಗೆ ವಿಚಾರಗಳ ಅಧ್ಯಯನ, ಪ್ರಾದೇಶಿಕ ಮತ್ತು ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಪಾಲುದಾರರು ಹಾಗೂ ಚುನಾಯಿತ ಪ್ರತಿನಿಧಿಗಳ ಭೇಟಿ, ಹಣಕಾಸು ನೆರವಿಗೆ ನಮ್ಮ ಕಚೇರಿ ಮೂಲಕ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕೆಸಿಸಿಐ ಅಧ್ಯಕ್ಷ ಆನಂದ್ ಜಿ.ಪೈ, ಕಾರ್ಯದರ್ಶಿ ಅಶ್ವಿನ್ ಪೈ ಮಾರೂರ್, ಉಪಾಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸರ್, ಕೋಶಾಧಿಕಾರಿ ಅಬ್ದುರ್ ರೆಹಮಾನ್ ಮುಸ್ಬಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.