ADVERTISEMENT

ಬೆಳ್ತಂಗಡಿ | ಫಲಾನುಭವಿ ಆಯ್ಕೆ: ತಾರತಮ್ಯ ಆರೋಪ

ಕಾಂಗ್ರೆಸ್ ಪಕ್ಷದಿಂದ ವಸಂತ ಬಂಗೇರ ನೇತೃತ್ವದಲ್ಲಿ ತಹಶೀಲ್ದಾರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:36 IST
Last Updated 19 ಮಾರ್ಚ್ 2023, 7:36 IST
ಅಕ್ರಮ - ಸಕ್ರಮದಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ನಡೆದಿರುವ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು
ಅಕ್ರಮ - ಸಕ್ರಮದಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ನಡೆದಿರುವ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು   

ಬೆಳ್ತಂಗಡಿ: ‘ಅಕ್ರಮ-ಸಕ್ರಮ ಯೋಜನೆಯಡಿ ಭೂಮಿ ಮಂಜೂರು ಗೊಳಿಸುವ ವಿಚಾರದಲ್ಲಿ ಬೆಳ್ತಂಗಡಿಯಲ್ಲಿ ನಿಯಮ ಉಲ್ಲಂಘನೆ, ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರು ನಮಗೆ ದೂರು ನೀಡಿದ್ದಾರೆ. ಬೈಠಕ್ ನಡೆಸುವ ವೇಳೆ ಕಂದಾಯ ಇಲಾಖೆಯ ಯಾವೊಬ್ಬ ಅಧಿಕಾರಿಯ ಸಹಿ ಇಲ್ಲದೆ ಬೆರಳೆಣಿಕೆಯ ಹಕ್ಕುಪತ್ರ ನೀಡಿ ಜನರನ್ನು ವಂಚಿಸುತ್ತಿದ್ದಾರೆ’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಆರೋಪಿಸಿದರು.

ತಾಲ್ಲೂಕಿನಲ್ಲಿ ಅಕ್ರಮ- ಸಕ್ರಮದಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಶನಿವಾರ ತಾಲ್ಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರರಿಗೆ ಮನವಿ ನೀಡಿ ಅವರು ಮಾತನಾಡಿದರು. ಶಾಸಕರು, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು, ಕಾರ್ಯಕರ್ತರು ಹೇಳಿದ ಕಡತವನ್ನಷ್ಟೆ ಮಂಜೂರು ಗೊಳಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ತಹಶೀಲ್ದಾರ್ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಕಚೇರಿ ಹಳೆ ಕಟ್ಟಡ ಕೆಡವಲು ಅನುಮತಿ ಪಡೆದಿಲ್ಲ. ರಕ್ಷಣೆ ನೀಡಬೇಕಿದ್ದ ಪೊಲೀಸ್ ಇಲಾಖೆ ಭಕ್ಷಿಸುತ್ತಿದೆ. ನಗರ ಪಂಚಾಯಿತಿಗೆ ಸಂಬಂಧಿಸಿ ಸುತ್ತಮುತ್ತಲ 13 ಗ್ರಾಮ ಪಂಚಾಯಿತಿಗಳ ಮೂರು ಕಿ.ಮೀ. ವ್ಯಾಪ್ತಿಯನ್ನು ನಗರ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸಬೇಕೆಂಬ ನಿಯಮದಿಂದ ಗ್ರಾಮೀಣ ಕೃಪಾಂಕಕ್ಕೆ ತೊಂದರೆ ಆಗುತ್ತಿದೆ. ತಹಶೀಲ್ದಾರರು ಕಡತಗಳಿಗೆ ಸಹಿ ಹಾಕಿತ್ತಿಲ್ಲ. ತಾಲ್ಲೂಕು ಕಚೇರಿ ದಲ್ಲಾಳಿಗಳ ಕೇಂದ್ರವಾಗಿದೆ. ಇವೆಲ್ಲದಕ್ಕೂ ಕಡಿವಾಣ ಹಾಕದೆ ಹೋದಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ಉತ್ತರಿಸಿ, ‘ಎಲ್ಲವನ್ನೂ ಪರಿಶೀಲಿಸಿ ಕಡತಕ್ಕೆ ಸಹಿ ಹಾಕಬೇಕಾಗುತ್ತದೆ‌. ಅಕ್ರಮ ಸಕ್ರಮ ವಿಚಾರದಲ್ಲಿ ಸಮಿತಿ ಅಧ್ಯಕ್ಷರು ಕರೆದಾಗ ನಿಯಮದಂತೆ ನಾವು ತೆರಳಬೇಕಾಗುತ್ತದೆ. ಇಲ್ಲಿ ಪಕ್ಷವನ್ನು ಆಧರಿಸಿ ಕಡತ ವಿಲೇವಾರಿ ಮಾಡುತ್ತಿಲ್ಲ. ಕಾನೂನಾತ್ಮಕವಾಗಿಯೇ ನೀಡುತ್ತಿದ್ದೇವೆ. ಮೇ ಅಂತ್ಯದವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪಕ್ಷಾತೀತವಾಗಿ ವಿಲೇವಾರಿ ಮಾಡಲಾಗುವುದು’ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸುತ್ತಮುತ್ತಲ 13 ಗ್ರಾಮಗಳನ್ನು ಸೇರಿಸುವ ಕುರಿತು ಯಾವುದೇ ಪ್ರಸ್ತಾವ ಇಲ್ಲ. ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಅವರನ್ನು ಸ್ಥಳಕ್ಕೆ ಕರೆಸಿ ಸ್ಪಷ್ಟೀಕರಣ ಪಡೆಯಲಾಯಿತು. ಕಾಂಗ್ರೆಸ್ ಮುಖಂಡರು ಈ ಸಂಬಂಧ ಇರುವ ಕಡತಗಳನ್ನು ಬಹಿರಂಗ ಪಡಿಸುವಂತೆ ಒತ್ತಾಯ ಮಾಡಿದರು. ಇದಕ್ಕೆ ತಹಶೀಲ್ದಾರ್ ನಿರಾಕರಿಸಿದಾಗ ಮಾತಿನ ಚಕಮಕಿ ನಡೆಯಿತು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕೆ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸದಸ್ಯ ಕೇಶವ ಗೌಡ, ವಕ್ತಾರ ಮನೋಹರ್ ಕುಮಾರ್, ಪ್ರಮುಖರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತಾ, ವಂದನಾ ಭಂಡಾರಿ, ಜಗದೀಶ್, ಅಭಿನಂದನ್ ಹರೀಶ್ ಕುಮಾರ್, ಉಷಾ ಶರತ್, ಅಶ್ರಫ್ ನೆರಿಯ, ಸಲೀಂ, ರಾಜಶೇಖರ್ ಕೋಟ್ಯಾನ್, ಜಯವಿಕ್ರಂ ಕಲ್ಲಾಪು, ಪ್ರಭಾಕರ್, ಕಾರ್ಮಿಕ ಮುಖಂಡ ಬಿ.ಎಂ.ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.