ಮಂಗಳೂರು: ‘ಗಂಡು ಎಂತಹ ಕೆಟ್ಟ ಅವಸ್ಥೆಯಲ್ಲಿದ್ದಾನೆ ಎಂದರೆ, ಹೆಣ್ಣನ್ನು ಸ್ವತಂತ್ರ ಜೀವಿಯಾಗಿ ನೋಡಲು ಆತನಿಗೆ ಇನ್ನೂ ಸಾಧ್ಯವಾಗಿಲ್ಲ. ಹೆಣ್ಣನ್ನು ಸ್ವತಂತ್ರ ಜೀವಿಯಂತೆ ನಡೆಸಿಕೊಂಡು, ಸಂಭ್ರಮಿಸುವುದನ್ನು ಕಲಿತರೆ ಬದುಕೇ ಹಬ್ಬವಾಗುತ್ತದೆ’ ಎಂದು ಕವಯಿತ್ರಿ, ನಾಟಕಗಾರ್ತಿ ಸುಧಾ ಆಡುಕಳ ಅಭಿಪ್ರಾಯಪಟ್ಟರು.
ನಿರ್ದಿಗಂತ ತಂಡವು ಮಂಗಳೂರಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 'ನೇಹದ ನೆಯ್ಗೆ' ರಂಗೋತ್ಸವದ ರಂಗ ಸಂವಾದದಲ್ಲಿ ಅವರು ಸೋಮವಾರ ಮಾತನಾಡಿದರು.
’ಹೆಣ್ಣಿನ ಗೆಲುವನ್ನು ಸಂಭ್ರಮಿಸುವಷ್ಟು ಈಗ ಕಾಲ ಬದಲಾಗಿದೆ. ಆದರೆ ಆಕೆ ಒಡ್ಡಿಕೊಳ್ಳುವ ಅಪಾಯಗಳನ್ನೂ ಒಪ್ಪಿಕೊಳ್ಳುವಷ್ಟರ ಮಟ್ಟಿನ ಬದಲಾವಣೆ ಈಗಲೂ ಸಾಧ್ಯವಾಗಿಲ್ಲ. ಹೆಣ್ಣನ್ನು ಸಹಜೀವಿ ಆಗಿ ಒಪ್ಪಿಕೊಳ್ಳುವಂತಾಗಬೇಕು. ಇದಕ್ಕೆ ಬದುಕಿನಲ್ಲಿ ಸಣ್ಣ ಸಣ್ಣ ಸಂಗತಿಗಳೂ ಮುಖ್ಯವಾಗುತ್ತವೆ. ನಮ್ಮ ನಮ್ಮ ಕೆಲಸ ನಾವೇ ನಿಭಾಯಿಸುವ, ಅಗತ್ಯವಿದ್ದಾಗ ಪರಸ್ಪರ ನೆರವಾಗುವ, ಭಾವನೆಗಳನ್ನು ಹಂಚಿಕೊಳ್ಳುವಂತಹ ಕ್ರಿಯೆಯಿಂದ ಹೆಣ್ಣಿಗೆ ಸಿಗುವ ಬಿಡುಗಡೆ ನನಗಿಷ್ಟ. ನನಗೆ ಕೇಳಲು ಸಾಧ್ಯವಿಲ್ಲದ ಇಂತಹವುಗಳನ್ನು ಬರಹಗಳಲ್ಲಿ ತರುತ್ತೇನೆ’ ಎಂದರು.
‘ಬೇಟೆ ಕುರಿತು ಸಾಹಿತ್ಯ ರಚಿಸುವಾಗ ಬೇಟೆಗಾರನ ದೃಷ್ಟಿಕೋನದಲ್ಲೇ ಅದನ್ನು ನೋಡುತ್ತೇವೆ. ಬೇಟೆ ಪ್ರಾಣಿಯ ದೃಷ್ಟಿಕೋನದಲ್ಲೂ ಅದನ್ನು ಕಟ್ಟಿಕೊಡಲು ಸಾಧ್ಯವಿದೆ. ಹೆಣ್ಣಿನ ವಿಚಾರದಲ್ಲೂ ಬದುಕನ್ನು ಏಕವ್ಯಕ್ತಿ ನೆಲೆಯಲ್ಲಿ ನಿರೂಪಿಸುವ ಪ್ರಯತ್ನವನ್ನು ನನ್ನ ನಾಟಕಗಳಲ್ಲಿ ಮಾಡಿದ್ದೇನೆ. ಸಮಾಜದ ಕಟ್ಟಳೆಗಳನ್ನು ಮುರಿಯುವುದು ತುಂಬಾ ಕಷ್ಟ. ಸೈನಿಕನ ಶವ ಮನೆಗೆ ಬಂದಾಗ ಬಿಳಿ ಸೀರೆಯುಟ್ಟ ವಿಧವೆ ಪತ್ನಿಗೆ ನಿಜಕ್ಕೂ ಏನನಿಸುತ್ತದೆ ಎಂಬುದನ್ನು ಗ್ರಹಿಸುವುದು ಮುಖ್ಯ’ ಎಂದರು.
ಬಾಲ್ಯದಲ್ಲಿ ಅಪ್ಪನೊಡನೆ ಕಂಡ ಯಕ್ಷಗಾನದಿಂದ ಆದ ಪ್ರಭಾವ, ಹುಟ್ಟೂರಿನಲ್ಲಿ ಹುಡುಗಿಯರಿಗೆ ಸಿಕ್ಕ ಅಸೀಮ ಸ್ವಾತಂತ್ರ್ಯ, ಪಠ್ಯಪುಸ್ತಕದ ಪಾಠಗಳನ್ನೆಲ್ಲ ಬಾಯಿಪಾಠ ಮಾಡಿಕೊಂಡ ಅಮ್ಮನ ನೆನಪಿನ ಶಕ್ತಿ, ಹಣ್ಣಿನ ಪಾತ್ರಗಳೇ ಪ್ರಧಾನವಾದ ಏಕವ್ಯಕ್ತಿ ನಾಟಕ ರಚಿಸುವಾಗ ಕಾಡಿದ ಭಾವನಾ ಲಹರಿಗಳನ್ನು ಅವರು ಪ್ರೇಕ್ಷಕರ ಜೊತೆ ಹಂಚಿಕೊಂಡರು.
‘ಪ್ರಜಾವಾಣಿ’ಯ ಕಾವ್ಯ ಸಂಕ್ರಾಂತಿ ಸ್ಪರ್ಧೆ– 2023ರಲ್ಲಿ ಬಹುಮಾನ ಪಡೆದ 'ಹಕ್ಕಿ ಮತ್ತು ಹುಡುಗಿ' ಕವನವನ್ನು ಅವರು ವಾಚಿಸಿದರು. ಅಭಿಲಾಷಾ ಹಂದೆ ಸಂವಾದ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.