ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ತುರ್ತು ಸ್ಪಂದನಾ ಪಡೆಯನ್ನು ಸನ್ನದ್ಧವಾಗಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಯ ಮಳೆ ಹಾನಿ ಪರಿಸ್ಥಿತಿಯ ಮಾಹಿತಿ ಪಡೆದರು. ಮುಳುಗಡೆಯಾಗುವ ಸಂಭವ ಇದ್ದರೆ ಆ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಬೇಕು. ನದಿ ಪಾತ್ರ ಹಾಗೂ ಕಡಲ್ಕೊರೆತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಸುಸಜ್ಜಿತ ತಂಡ ಇಡಬೇಕು. ಭೂಕುಸಿತದಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದರೆ, ಶೀಘ್ರ ತೆರವುಗೊಳಿಸಬೇಕು. ವಿದ್ಯುತ್ ಕಂಬಗಳು ಬಿದ್ದಲ್ಲಿ ಕೂಡಲೇ ಕ್ರಮ ಕೈಗೊಂಡು ವಿದ್ಯುತ್ ಪುನರ್ ಸ್ಥಾಪಿಸಬೇಕು ಎಂದರು.
ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಮಳೆ ಪರಿಸ್ಥಿತಿ ಮೇಲೆ ನಿಗಾ ಇಡಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಪರಿಸ್ಥಿತಿ ಬಗ್ಗೆ ನೆರೆಯ ಜಿಲ್ಲೆಗಳೊಂದಿಗೆ ಸಂಪರ್ಕದಲ್ಲಿದ್ದು, ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಕೈಗೊಂಡಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ತೈಲ, ಅನಿಲ ಸಾಗಣೆ ಟ್ಯಾಂಕರ್‌ಗಳ ಸಂಚಾರ ಹೆಚ್ಚಿರುವ ಶಿರಾಡಿ ಘಾಟಿಯ ಎರಡೂ ಕಡೆಗಳಾದ ಗುಂಡ್ಯ ಹಾಗೂ ಹಾಸನ ವ್ಯಾಪ್ತಿಯಲ್ಲಿ ತುರ್ತು ರಕ್ಷಣಾ ಕಾರ್ಯದ ತಂಡ ಇಡಲು ತೈಲ ಕಂಪನಿಗಳಿಗೆ ಸೂಚಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.