ADVERTISEMENT

ಕಾರ್ಪೊರೇಟ್ ಆಸೆ ಬಿಟ್ಟು ವಕೀಲಿ ವೃತ್ತಿಗೆ ಬನ್ನಿ: ಹೈಕೋರ್ಟ್ ವಕೀಲ ಸುಧಾಕರ ಪೈ

ಎಸ್‌ಡಿಎಂ ಕಾಲೇಜು, ಮೂಟ್ ಕೋರ್ಟ್ ಸೊಸೈಟಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಹಬ್ಬ 'ಲೆಕ್ಸ್ ಅಲ್ಟಿಮಾ'

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 3:54 IST
Last Updated 28 ಏಪ್ರಿಲ್ 2025, 3:54 IST
ಕೋರ್ಟ್ ತೀರ್ಪು
ಕೋರ್ಟ್ ತೀರ್ಪು   

ಮಂಗಳೂರು: ಕಾರ್ಪೊರೇಟ್ ವಲಯದ ಉದ್ಯೋಗದ ಆಸೆ ಬಿಟ್ಟು ವಕೀಲಿ ವೃತ್ತಿ ಆಯ್ಕೆ ಮಾಡಿಕೊಳ್ಳುವಂತೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಇಂದ್ರಕುಮಾರ್ ಅರುಣ್ ಸಲಹೆ ನೀಡಿದರು. ವಕೀಲಿ ವೃತ್ತಿ ಆಯ್ದುಕೊಳ್ಳುವಂತೆ ಹೈಕೋರ್ಟ್ ವಕೀಲ ಸುಧಾಕರ ಪೈ ಅವರೂ ಸೂಚಿಸಿದರು. 

ಮೂಟ್ ಕೋರ್ಟ್ ಸೊಸೈಟಿ ಆಶ್ರಯದಲ್ಲಿ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ ಡಿಎಂ) ಕಾನೂನು ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಹಬ್ಬ 'ಲೆಕ್ಸ್ ಅಲ್ಟಿಮಾ'ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಪೊರೇಟ್ ವಲಯದ ಕಡೆಗಿರುವ ಒಲವಿನಿಂದ ದೂರ ಇರುವುದು ಕಷ್ಟ. ಆದರೂ ವಕೀಲಿ ವೃತ್ತಿಯಿಂದ ಸಿಗುವ ಖುಷಿಯನ್ನು ಅರ್ಥ ಮಾಡಿಕೊಳ್ಳಬೇಕು. ದುಡಿಯುವ ಮನಸ್ಸಿದ್ದರೆ ಈ ವೃತ್ತಿ ಯಾರನ್ನು ಬಿಟ್ಟುಹಾಕುವುದಿಲ್ಲ. ಉದ್ವೇಗಗಳನ್ನು ನಿಯಂತ್ರಿಸಿ ವ್ಯಕ್ತಿಯ ಮನಸ್ಸನ್ನು ಸಂತನ ಮಟ್ಟಕ್ಕೆ ಪಾಕ ಮಾಡುವುದಕ್ಕೂ ಈ ವೃತ್ತಿಗೆ ಸಾಧ್ಯವಿದೆ ಎಂದು ನ್ಯಾಯಮೂರ್ತಿ ಹೇಳಿದರು. 

ADVERTISEMENT

ವಕೀಲರು ಪುಸ್ತಕಗಳನ್ನು ಓದಿ ತಿಳಿದುಕೊಂಡರೆ ಸಾಲದು. ಸಮಾಜದ ಜೊತೆ ಇದ್ದು ಸಮಾಜಕ್ಕೆ ಸ್ಪಂದಿಸಬೇಕು. ಭಾರತದಲ್ಲೂ ವಿದೇಶಗಳಲ್ಲೂ ಸ್ವಾತಂತ್ರ್ಯ ಹೋರಾಟಗಳಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂಬ ವಿಷಯವನ್ನು ಮರೆಯಬಾರದು ಎಂದ ಅವರು ಕಾನೂನಿನ ಸರಿಯಾದ ತಿಳಿವಳಿಕೆ ಇಲ್ಲದೇ ಇದ್ದರೆ ಸಮಾಜ ಸುಸ್ಥಿತಿಯಲ್ಲಿ ಇರುವುದಿಲ್ಲ. ಕೆಲವು ಕಡೆಗಳಲ್ಲಿ ರಾಜಿ ಮಾಡಿಕೊಂಡಿರುವುದರಿಂದ ಈಗ ಸಮಾಜದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದರು.

ಸುಧಾಕರ ಪೈ ಮಾತನಾಡಿ ಕಾರ್ಪೊರೇಟ್ ಕಂಪನಿಗಳ ಪ್ಯಾಕೇಜ್‌ಗಳ ಬೆನ್ನುಬಿದ್ದು ಅಲ್ಲಿನ ಉದ್ಯೋಗಕ್ಕೆ ಆಸೆಪಡುವುದು ಬಿಟ್ಟು ವಕೀಲಿ ವೃತ್ತಿಯತ್ತ ಗಮನ ಕೊಡಬೇಕು. ನ್ಯಾಯಾಂಗದಲ್ಲಿ ಈಗ ಉತ್ತಮ ಅವಕಾಶಗಳು ಇವೆ ಎಂದರು. 

ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸತೀಶ್ ಬಿ.ಕೆ, ವಿದ್ಯಾರ್ಥಿ ಕಾರ್ಯದರ್ಶಿ ಶ್ರೀವರ, ಮೂಟ್‌ಕೋರ್ಟ್ ಸೊಸೈಟಿ ವಿದ್ಯಾರ್ಥಿ ಸಂಯೋಜಕಿ ಪ್ರಿಯಾಂಕಾ, ಸುಮಾ ಕೋಗಿಲಗೇರಿ ಪಾಲ್ಗೊಂಡಿದ್ದರು.

ಕೆಎಲ್‌ಇ ಕಾನೂನು ಕಾಲೇಜು ಚಾಂಪಿಯನ್‌

ವಿವಿಧ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದ ಬೆಂಗಳೂರಿನ ಕೆಎಲ್‌ಇ ಸೊಸೈಟಿ ಕಾನೂನು ಕಾಲೇಜು ತಂಡದವರು ಕಾನೂನು ಹಬ್ಬದ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡರು. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಂಡ ರನ್ನರ್ ಅಪ್ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.