ಮಂಗಳೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಈದ್ ಮೀಲಾದುನ್ನಬಿ ಅನ್ನು ಶುಕ್ರವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲೆಯ ಬಹುತೇಕ ಮದ್ರರಸ, ಮಸೀದಿಗಳಲ್ಲಿ ವಿಶೇಷ ಮಜ್ಲಿಸ್, ಬೆಳಿಗ್ಗೆ ಧ್ವಜಾರೋಹಣ, ಸಭಾ ಕಾರ್ಯಕ್ರಮಗಳು ನಡೆದವು. ಪ್ರವಾದಿಯವರ ಸಂದೇಶದ ಕುರಿತು ವಿಶೇಷ ಉಪನ್ಯಾಸಗಳು ನೆರವೇರಿದವು. ಅನೇಕ ಕಡೆಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಸೌಹಾರ್ದದಿಂದ ಕಾರ್ಯಕ್ರಮ ನಡೆಸಿದರು.
ಮೀಲಾದುನ್ನಬಿ ಅಂಗವಾಗಿ ಸಾರ್ವಜನಿಕವಾಗಿ ದಫ್, ಹಾಡು ಹಾಡುತ್ತ ಜಾಥಾ, ವಾಹನಗಳ ಮೀಲಾದ್ ರ್‍ಯಾಲಿ ನಡೆಸಿ, ಪ್ರವಾದಿ ಸಂದೇಶವನ್ನು ಬಿತ್ತರಿಸಲಾಯಿತು. ರ್‍ಯಾಲಿಯಲ್ಲಿ ಮಕ್ಕಳು, ಯುವಕರು, ಹಿರಿಯರು ಭಕ್ತಿಯಿಂದ ಪಾಲ್ಗೊಂಡರು.
ಇಸ್ಲಾಮಿಕ್ ಕ್ಯಾಲೆಂಡರ್‌ನ ರಬೀಉಲ್ ಅವ್ವಲ್ ತಿಂಗಳಲ್ಲಿ ಸುನ್ನಿ ಮುಸ್ಲಿಮರು ಮಸೀದಿ ಮತ್ತು ಮನೆಗಳಲ್ಲಿ ಪ್ರವಾದಿ ಗುಣಗಾನ ಮಾಡುವ ವೌಲಿದ್ ಪಾರಾಯಣ ಮಾಡುತ್ತಾರೆ. ಮದರಸಗಳಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಾಡು ಭಾಷಣ ಸ್ಪರ್ಧೆಗಳು ಇಡೀ ತಿಂಗಳು ನಡೆಯುತ್ತವೆ. ರಬೀಉಲ್ ಅವ್ವಲ್ ತಿಂಗಳ ಚಾಂದ್ 12ರಂದು ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ.
ಮಂಗಳೂರಿನಲ್ಲಿ ಈದ್ ಮೀಲಾದುನ್ನಬಿ ಅಂಗವಾಗಿ ಶುಕ್ರವಾರ ಕುದ್ರೋಳಿಯಿಂದ ಬಾವುಟ ಗುಡ್ಡೆಯವರೆಗೆ ಮೆರವಣಿಗೆ ನಡೆಯಿತು
ರ್‍ಯಾಲಿಯಲ್ಲಿ ಸಿಹಿ ವಿತರಣೆ:
ಬಜಾಲ್ ನಂತೂರು ಬದ್ರಿಯಾ ಜುಮ್ಮಾ ಮಸೀದಿ ವ್ಯಾಪ್ತಿಯಲ್ಲಿ ಈದ್ ಮೀಲಾದುನ್ನಬಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ಧ್ವಜಾರೋಹಣ ನೆರವೇರಿಸಿ ರ್‍ಯಾಲಿಗೆ ಚಾಲನೆ ನೀಡಿದರು. ಜಮಾತ್‌ನ ಖತೀಬರಾದ ಅಬ್ದುಲ್ ನಾಸಿರ್ ಸಅದಿ ದುಆ ನಡೆಸಿ ಉದ್ಘಾಟಿಸಿದರು.ಬಜಾಲ್ ನಂತೂರಿನ ಹಯತುಲ್ ಇಸ್ಲಾಂ ಮದರಸ ಫೈಝಲ್ ನಗರ ನಮಾವುಲ್ ಇಸ್ಲಾಂ ಮದರಸದ ವಿದ್ಯಾರ್ಥಿನಿಯರು ಸ್ಕೌಟ್ ಫ್ಲವರ್ ಶೋ ದಫ್ ಪ್ರದರ್ಶಿಸಿದರು. ತರ್ಬಿಯತುಲ್ ಇಸ್ಲಾಂ ದರ್ಸ್‌ನಲ್ಲಿ ಕಲಿಯುವ ಮುತಃಲ್ಲಿಮ್‌ನವರು ಭಾಗವಹಿಸಿದರು. ರ್‍ಯಾಲಿಯಲ್ಲಿ ಚಾಕೊಲೇಟ್ ತಂಪು ಪಾನೀಯ ಫಲೂದಾ ಬಿರಿಯಾನಿ ಹಣ್ಣು ಹಂಪಲು ವಿತರಿಸಲಾಯಿತು. ಬದ್ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಅಶ್ರಫ್ ಕೆ ಹನೀಫ್ ಎಚ್.ಎಸ್ ಎಂ.ಎಚ್ ಮುಹಮ್ಮದ್ ಫೈಝಲ್ ನಗರ್ ಅಬ್ದುಲ್ ಹಮೀದ್ ಅಬ್ದುಲ್ ಸಲಾಂ ಬಿ ಫಕ್ರುದ್ದೀನ್ ಮಾಜಿ ಅಧ್ಯಕ್ಷರು ಬಿ ಎನ್ ಅಬ್ಬಾಸ್ ಗೌಸಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಝಾಕ್ ಇಸಾಕ್ ಹಮೀದಿ ನಝೀರ್ ಬಜಾಲ್ ಮತ್ತಿತರರು ಭಾಗವಹಿಸಿದರು. ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿದರು. ಹಕೀಂ ಮದನಿ ನಿರೂಪಿಸಿದರು. ಅಬೂಬಕ್ಕರ್ ಸಖಾಫಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.