ADVERTISEMENT

ಅತ್ಯಾಧುನಿಕ ತಂತ್ರಜ್ಞಾನ ಬಳಸಿ– ಕೃಷಿಕರಿಗೆ ಸಲಹೆ

ಎಕ್ಕೂರು: ಕೃಷಿಕರ ಪಾಕ್ಷಿಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:23 IST
Last Updated 28 ನವೆಂಬರ್ 2022, 14:23 IST
ಕೃಷಿಕರ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿದ ರೈತ ಗ್ರಾಹಕರು ಕೃಷಿ ಉಪಕರಣಗಳ ಕುರಿತು ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ
ಕೃಷಿಕರ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿದ ರೈತ ಗ್ರಾಹಕರು ಕೃಷಿ ಉಪಕರಣಗಳ ಕುರಿತು ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ   

ಮಂಗಳೂರು: ‘ಕೃಷಿ ಕಾರ್ಯಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಕೃಷಿಕರು ಮುಂದಾಗಬೇಕು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಟಿ.ಜೆ.ರಮೇಶ್‌ ಸಲಹೆ ನೀಡಿದರು.

ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಪ್ರಾಂಗಣದಲ್ಲಿ ಬ್ಯಾಂಕ್‌ ಆಫ್‌ ಬರೋಡ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿಕರ ಪಾಕ್ಷಿಕ (ಕಿಸಾನ್‌ ಪ‍ಖ್ವಾಡ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

'ಕೃಷಿಗೆ ವೈಜ್ಞಾನಿಕ ವಿಧಾನ ಅನುಸರಿಸುವುದಕ್ಕೆ ಉತ್ತೇಜನ ನೀಡಲು ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದೆ. ಅದರ ಮೂಲಕ ಕ್ಷೇತ್ರೋತ್ಸವ ಏರ್ಪಡಿಸಿ, ಕೃಷಿಯಲ್ಲಿ ಬಳಸಬಹುದಾದ ಅತ್ಯಾಧುನಿಕ ತಾಂತ್ರಿಕ ವಿಧಾನಗಳನ್ನು ಪ್ರಚುರಪಡಿಸಲಾಗುತ್ತಿದೆ. ವಿಜ್ಞಾನಿಗಳೂ ಕ್ಷೇತ್ರ ಪರಿವೀಕ್ಷಣೆ ನಡೆಸಿ, ಸ್ಥಳೀಯ ವಾತಾವರಣ ಅನುಗುಣವಾಗಿ ಯಾವ ತರಹದ ಮಣ್ಣಿಗೆ ಎಂತಹ ಕೃಷಿ ಸರಿಹೊಂದುತ್ತದೆ ಎಂದು ಮಾರ್ಗದರ್ಶನ ಮಾಡುತ್ತಾರೆ’ ಎಂದರು.

ADVERTISEMENT

ಕಾಲೇಜಿನ ಪ್ರಾಧ್ಯಾಪಕ ಮತ್ತು ಡೀನ್‌ ಡಾ.ಶಿವಕುಮಾರ್‌ ಮಗದ, ‘ಯುವ ಕೃಷಿಕರಿಗೆ ಮೀನು ಸಾಕಣೆ, ಜೇನು ಸಾಕಣೆ, ಕೋಳಿ ಸಾಕಣೆ ಕ್ಷೇತ್ರಗಳಲ್ಲಿ ಹೇರಳ ಉದ್ಯೋಗಾವಕಾಶಗಳಿವೆ. ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯ ಸದುಪಯೋಗ ಪಡೆದು ಸ್ವಂತ ಉದ್ಯೋಗದಲ್ಲಿ ತೊಡಗಬೇಕು’ ಎಂದು ಅವರು ಕಿವಿಮಾತು ಹೇಳಿದರು.

‘ಕೃಷಿಕರು ತಮ್ಮ ಮಾರುಕಟ್ಟೆ ಕೌಶಲ ಬಳಸಿ ಹೆಚ್ಚು ಲಾಭ ಗಳಿಸಲು ಯತ್ನಿಸಬೇಕು. ಸಾರ್ವಜನಿಕರೂ ಕೃಷಿಕರಿಂದ ನೇರವಾಗಿ ಖರೀದಿ ಮಾಡುವಾಗ ಚೌಕಾಸಿಗೆ ಇಳಿಯದೇ ಅವರ ಬೆವರಿನ ಶ್ರಮವನ್ನು ಗೌರವಿಸಬೇಕು’ ಎಂದರು.

ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂಜೀವ ದೋಭಾಲ್‌, ಮಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕ (ನೆಟ್‌ವರ್ಕ್‌) ವಿನಯ್‌ ಗುಪ್ತ, ಉಪಮುಖ್ಯಸ್ಥ ಆರ್.ಗೋಪಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.