ಮಂಗಳೂರು: ‘ದೇಶದಲ್ಲಿ ಯುವಜನರ ಆತ್ಮಹತ್ಯೆ ಪ್ರತಿನಿತ್ಯ ವರದಿಯಾಗುತ್ತಿದೆ. ಸಾಮಾಜಿಕ ಜಾಲತಾಣದ ಪ್ರಭಾವ ಹಾಗೂ ಮೊಬೈಲ್ ಅತಿ ಬಳಕೆಯಿಂದ ವಿದ್ಯಾರ್ಥಿ ಸಮುದಾಯ ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶೋಭಾ ಬಿ.ಜಿ ಕಳವಳ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಇಲ್ಲಿ ಏರ್ಪಡಿಸಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಗುವಿನ ಆಹಾರ ಸೇವನೆಯೂ ಮೊಬೈಲ್ ನೆರವಿನಿಂದಲೇ ಆಗುತ್ತಿದೆ. ತಾಯಂದಿರು ಮಗುವಿನ ಪಾಲನೆ ವೇಳೆ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರ ವಹಿಸಬೇಕು. ಅಂಕ ಪಡೆಯಲು ವಿದ್ಯಾರ್ಥಿ ಮಕ್ಕಳ ಮೇಲೆ ಒತ್ತಡ ಹಾಕಬಾರದು’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ, ರೆ. ಫಾದರ್ ರಿಚರ್ಡ್ ಅಲೋಷಿಯಸ್ ಕುವೆಲ್ಲೊ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸುದರ್ಶನ್, ಮಾನಸಿಕ ಆರೋಗ್ಯ ತಜ್ಞರಾದ ಡಾ.ಪ್ರಜಕ್ತ ರಾವ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ಭಾಗವಹಿಸಿದ್ದರು.
ಡಾ. ಸುಪ್ರಿಯಾ ಹೆಗಡೆ ಸ್ವಾಗತಿಸಿದರು. ಡಾ.ರಾಹುಲ್ ರಾವ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.