ಅಬಕಾರಿ ಅಕ್ರಮ ತಡೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಜುಲೈ 2024ರಿಂದ ಇಲ್ಲಿಯವರೆಗೆ ಒಟ್ಟು 31 ಘೋರ ಪ್ರಕರಣಗಳನ್ನು ದಾಖಲಿಸಿ, ಒಟ್ಟು ₹9.31 ಕೋಟಿ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಅಬಕಾರಿ ಅಕ್ರಮ ತಡೆಟ್ಟಲು ಇಲಾಖೆಯಿಂದ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ. 115.350 ಲೀ. ಗೋವಾ ಮದ್ಯ, 47.250 ಲೀ. ಡಿಫೆನ್ಸ್ ಮದ್ಯ, 140.940 ಲೀ. ಅಕ್ರಮ ಮದ್ಯ, 56.570 ಲೀ. ಬಿಯರ್, 244.920 ಲೀ. ವೈನ್, 115 ಲೀ. ಶೇಂದಿ, 92 ಲೀ. ಬೆಲ್ಲದ ಕೊಳೆ, 64.750 ಲೀ. ಕಳ್ಳಬಟ್ಟಿ ಒಟ್ಟು 876.780 ಲೀ. ಹಾಗೂ ನಾಲ್ಕು ವಾಹನ ಜಪ್ತುಗೊಳಿಸಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ಇಲಾಖೆಯಿಂದ ಸಾಂದರ್ಭಿಕ ಸಿಎಲ್- 5 ಸನ್ನದನ್ನು ನೀಡಲಾಗುತ್ತಿದೆ. ಇದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಮದ್ಯ ಸರಬರಾಜು ತಡೆಗಟ್ಟುವ ಸಂಬಂಧ ಇಲಾಖೆ ಅಧಿಕಾರಿಗಳು ಸಮವಸ್ತ್ರ ಧರಿಸದೆ ಸಭೆ, ಸಮಾರಂಭಗಳಿಗೆ ಭೇಟಿ ನೀಡುವ ಮೂಲಕ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಅನಧಿಕೃತ ಗೋವಾ ಮದ್ಯ ಹಾಗೂ ಡಿಫೆನ್ಸ್ ಮದ್ಯ ಸರಬರಾಜನ್ನು ತಡೆಹಿಡಿಯಲಾಗಿದೆ. ಜಿಲ್ಲೆಯಲ್ಲಿ 2023-24ನೇ ಸಾಲಿನ ಎಪ್ರಿಲ್‌ನಿಂದ 15 ಜನವರಿ 2024ರವರೆಗೆ ಒಟ್ಟು 432 ಸಾಂದರ್ಭಿಕ ಸನ್ನದು ನೀಡಲಾಗಿದ್ದು, ಏಪ್ರಿಲ್ 2024ರಿಂದ ಈ ವರ್ಷ ಜನವರಿ 15ರವರೆಗೆ ಒಟ್ಟು 865 ಸಾಂದರ್ಭಿಕ ಸನ್ನದು ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.