ADVERTISEMENT

ಕಾಂಗ್ರೆಸ್‌ನಿಂದ ಸುಳ್ಳು ಆರೋಪ: ಮಹಾನಗರ ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 2:43 IST
Last Updated 25 ಸೆಪ್ಟೆಂಬರ್ 2021, 2:43 IST

ಮಂಗಳೂರು: ‘ಮಹಾನಗರ ಪಾಲಿಕೆ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಸಂಬಂಧ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಮಾತ್ರ ಸಿದ್ಧಪಡಿಸಲಾಗಿದೆ. ಆದರೆ, ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಎ.ಸಿ. ವಿನಯರಾಜ್, ಇದರಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದು ಆರೋಪ ಮಾಡಿದ್ದಾರೆ’ ಎಂದು ಪಾಲಿಕೆಯ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಟೀಕಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿಪಿಆರ್‌ ಬಗ್ಗೆ ಪಾಲಿಕೆಯ ಸಭೆಯಲ್ಲಿ ತೀರ್ಮಾನವಾಗಬೇಕು. ಇದನ್ನು ಜಿಲ್ಲಾಧಿಕಾರಿ ಅನುಮೋದಿಸಿ, ನಂತರ ಮೂರು ಸಮಿತಿಗಳ ಅನುಮೋದನೆ ದೊರೆತ ನಂತರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ನಡೆಸುವ ಪೂರ್ವದಲ್ಲಿ ವಿನಾಕಾರಣ ಆರೋಪ ಮಾಡಲಾಗುತ್ತಿದೆ’ ಎಂದರು.

‘ರಾಮಕೃಷ್ಣ ಮಠದ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರು ಸೇರಿ ಬಗೆಹರಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಈಗ ರಾಮಕೃಷ್ಣ ಮಠಕ್ಕೆ ಹೋಗಿ ಫೋಟೊ ತೆಗೆಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಜತೆಗೆ ಮಠವನ್ನು ರಾಜಕೀಯಕ್ಕೆ ಎಳೆದು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಘನತ್ಯಾಜ್ಯ ಸಾಗಾಟ ಮತ್ತು ನಿರ್ವಹಣೆಯ ಬಗ್ಗೆ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ಥಾಯಿ ಸಮಿತಿಯ ಸದಸ್ಯರೊಂದಿಗೆ ಸೆ. 14ರಂದು ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಿ, ಮೂರು ಮಾದರಿಗಳಲ್ಲಿ 2ನೇ ಮಾದರಿಯನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆ ಪ್ರಕಾರ ಪಾಲಿಕೆಗೆ ಆದಾಯ ಬರುವ ಜತೆಗೆ, ಹೆಚ್ಚುವರಿ ಪೌರ ಕಾರ್ಮಿಕರ ನೇಮಕ ಸಾಧ್ಯವಾಗುತ್ತದೆ’ ಎಂದು ಹೇಳಿದರು. ಪ್ರಮುಖರಾದ ರಾಧಾಕೃಷ್ಣ, ವಿಜಯ ಕುಮಾರ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.