ADVERTISEMENT

ಮಸೂದ್‌, ಫಾಝಿಲ್‌ ಹತ್ಯೆ: ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕ ಮೌನ ಪ್ರತಿಭಟನೆ

ಮಸೂದ್‌, ಫಾಝಿಲ್‌ ಕುಟುಂಬಗಳಿಗೆ ಅನ್ಯಾಯ–ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 14:06 IST
Last Updated 20 ಸೆಪ್ಟೆಂಬರ್ 2022, 14:06 IST
ಹತ್ಯಗೊಳಗಾದ ಮಸೂದ್‌ ಹಾಗೂ ಮಹಮ್ಮದ್‌ ಫಾಝಿಲ್‌ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ನಗರದ ಪುರಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು– ಪ್ರಜಾವಾಣಿ ಚಿತ್ರ
ಹತ್ಯಗೊಳಗಾದ ಮಸೂದ್‌ ಹಾಗೂ ಮಹಮ್ಮದ್‌ ಫಾಝಿಲ್‌ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ನಗರದ ಪುರಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು– ಪ್ರಜಾವಾಣಿ ಚಿತ್ರ   

ಮಂಗಳೂರು: ಹತ್ಯೆಗೊಳಗಾದ ಬೆಳ್ಳಾರೆಯ ಕಳೆಂಜದ ಮಸೂದ್‌ ಹಾಗೂ ಕಾಟಿಪಳ್ಳದ ಮೊಹಮ್ಮದ್‌ ಫಾಝಿಲ್‌ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ‌ಸರ್ಕಾರ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಹಾಗೂ ಈ ಎರಡೂ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ನಗರದ ಕುದ್ಮುಲ್ ರಂಗರಾವ್‌ ಪುರಭವನದ ಎದುರು ಮಂಗಳವಾರ ಮೌನ ಪ್ರತಿಭಟನೆ ನಡೆಯಿತು.

ಮಸೂದ್‌ ಅವರ ತಾಯಿ ಸಾರಮ್ಮ ಹಾಗೂ ಮಹಮ್ಮದ್‌ ಫಾಝಿಲ್‌ ಅವರ ತಂದೆ ಉಮರ್‌ ಫಾರೂಕ್‌ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತಿಭಟನೆಯ ಕೊನೆಯಲ್ಲಿ ಮಾನತಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್‌ ಹಮೀದ್‌, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಅಮಾಯಕರ ಹತ್ಯೆಗಳು ನಡೆದವು. ಆದರೆ, ಅವರಲ್ಲಿ ಪ್ರವೀಣ್‌ ನೆಟ್ಟಾರು ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಲ್ಲೇ ಸಮೀಪದ ಮಸೂದ್‌ ಮನೆಗೆ ಭೇಟಿ ನೀಡಲಿಲ್ಲ. ಫಾಝಿಲ್‌ ಮನೆಗೂ ಹೋಗಲಿಲ್ಲ. ಿದಕ್ಕೆ ರಾಜ್ಯದದ್ಯಂತ ವಿರೋಧ ವ್ಯಕ್ತವಾಯಿತು. ಬಳಿಕ ಜನಾಕ್ರೋಶಕ್ಕೆ ಮಣಿದು ಮಸೂದ್‌ ಹಾಗೂ ಫಾಝಿಲ್‌ ಅವರ ಮನೆಗೂ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅವರು ಈ ಎರಡು ಕುಟುಂಬಗಳಿಗೆ ಭೇಟಿ ನೀಡದೇ ಮಾತು ತಪ್ಪಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಹತ್ಯೆಗೊಂಡ ಒಬ್ಬ ಯುವಕನ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿಯವರು ಉಳಿದ ಎರಡೂ ಕುಟುಂಬಗಳ ಬಾಯಿಗೆ ಮಣ್ಣು ಹಾಕಿದ್ದಾರೆ. ಅವರಲ್ಲಿ ಮಾನವೀಯತೆ ಒಂದಿಷ್ಟಾದರೂ ಉಳಿದಿದ್ದರೆ ಈ ಕುಟುಂಬಗಳಿಗೆ ಕನಿಷ್ಠಪಕ್ಷ ಸಾಂತ್ವನದ ಮಾತುಗಳನ್ನಾದರೂ ಹೇಳಬಹುದಾಗಿತ್ತು. ಆದರೆ ಅವರ ಹೃದಯಶೂನ್ಯವಾಗಿದೆ’ ಎಂದರು.

‘ಫಾಝಿಲ್‌ ಕೊಲೆ ಧಾರ್ಮಿಕ ಕಾರಣಕ್ಕೆ ನಡೆದಿರಲಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ, ಕೊಲೆ ಯಾವ ಉದ್ದೇಶದಿಂದ ಆಯಿತು ಎಂದು ಮುಖ್ಯಮಂತ್ರಿ ಹಾಗೂ ಗೃಹಸಚಿವರು ಉತ್ತರ ಕೊಡಬೇಕಿತ್ತು. ಅದನ್ನೂ ಮಾಡಿಲ್ಲ. ಈ ವಿಚಾರಗಳ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ನಡೆಸುವುದಕ್ಕೂ ಅವಕಾಶ ಕಲ್ಪಿಸದೇ ಈ ಸರ್ಕಾರ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದೆ’ ಎಂದರು.

‘ ಹತ್ಯೆಯಾಗಿರುವ ಇಬ್ಬರೂ ಯುವಕರು ಜೀವನದಲ್ಲಿ ಒಂದೂ ಸಲವೂ ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತದ ಇಬ್ಬರು ಅಮಾಯಕರು. ಅವರ ಪೋಷಕರ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಸರ್ಕಾರ ಇನ್ನಾದರೂ ಕಣ್ಣು ತೆರೆಯಬೇಕು. ಮಾನವೀಯತೆಯ ತುಣುಕಾದರೂ ಇದ್ದರೆ, ಈ ಕುಟುಂಬಗಳಿಗೂ ಪರಿಹಾರ ಘೋಷಣೆ ಮಾಡಿ, ಸಾಂತ್ವನ ಹೇಳಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡರಾದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್‌, ಜೆ.ಆರ್‌.ಲೋಬೊ, ಮೊಯ್ದಿನ್‌ ಬಾವಾ, ಇಬ್ರಾಹಿಂ ಕೋಡಿಜಾಲ್‌, ಮಿಥುನ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಮತ್ತಿತರರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.