ಪುತ್ತೂರು: ಅಂಗವಿಕಲರ ಕಾರ್ಡ್ ಮಾಡುವ ಉದ್ದೇಶದಿಂದ ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ತಪಾಸಣಾ ಶಿಬಿರಕ್ಕೆ ಶುಕ್ರವಾರ ಬಂದಿದ್ದ ಪುತ್ತೂರು ತಾಲ್ಲೂಕು ವ್ಯಾಪ್ತಿಯ ಹಲವು ಮಂದಿ ಅಂಗವಿಕರು ಆಸ್ಪತ್ರೆಯಲ್ಲಿನ ಅಸಮರ್ಪಕ ನಿರ್ವಹಣೆಯ ಪರಿಣಾಮವಾಗಿ ಬೆಳಗ್ಗಿನಿಂದ ಸಂಜೆ ತನಕ ಕಾದು ಪರದಾಡಿ ಸುಸ್ತಾದ ಘಟನೆ ನಡೆದಿದೆ.
ಈ ಹಿಂದೆ ಅಂಗವಿಕರ ತಪಾಸಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದ್ದರೂ ಈ ಬಾರಿ ಉಳಿದ ರೋಗಿಗಳ ಜತೆ ಅಂಗವಿಕಲರನ್ನು ಕೂಡ ಸೇರಿಸಿ ತಪಾಸಣಾ ಕ್ರಮ ಅನುಸರಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಅಂಗವಿಕಲರನ್ನು ಉಳಿದ ರೋಗಿಗಳ ಜತೆ ಸೇರ್ಪಡೆಗೊಳಿಸಿ ತಪಾಸಣಾ ಕ್ರಮ ಅನುಸರಿಸಿದ ಕಾರಣ ನಡೆದಾಡಲು ಸಾಧ್ಯವಿಲ್ಲದ ಹಾಗೂ ಅಸಹಾಯಕ ಸ್ಥಿತಿಯಲ್ಲಿದ್ದ ಅಂಗವಿಕಲರು ಆಸ್ಪತ್ರೆಯ ವರಾಂಡದಲ್ಲೇ ಉಳಿದು ಗೋಳಿಡುವ ಪರಿಸ್ಥಿತಿ ನಿರ್ಮಾಣವಾಯಿತು.
‘ನಾವು ಬೆಳಿಗ್ಗಿನ ವೇಳೆಯೇ ಆಸ್ಪತ್ರೆಗೆ ಬಂದಿದ್ದೇವೆ. ತಪಾಸಣೆ ನಡೆಸುವ ವೈದ್ಯರ ಕೊಠಡಿಯೊಳಗೆ ಉಳಿದ ರೋಗಿಗಳೇ ನುಗ್ಗುತ್ತಿರುವುದರಿಂದ ನಮಗೆ ಪ್ರವೇಶಿಸಲು ನಮಗೆ ಅವಕಾಶವೇ ಸಿಕ್ಕಿಲ್ಲ. ನಾವು ಕುಳಿತಲ್ಲಿಯೇ ಬಾಕಿಯಾಗಿದ್ದೇವೆ’ ಎಂದು ಕೆಲವು ಮಂದಿ ಫಲಾನುಭವಿಗಳು ಮಾಧ್ಯಮ ಪ್ರತಿನಿಧಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಅಂಗವಿಕಲರಿಗೆ ಕಾರ್ಡ್ ನೀಡುವ ಉದ್ದೇಶದಿಂದ ಪ್ರತೀ ತಿಂಗಳ ಎರಡನೇ ಶುಕ್ರವಾರ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಅಂಗವಿಕಲರ ತಪಾಸಣಾ ಶಿಬಿರವನ್ನು ಪ್ರತ್ಯೇಕ ಕೊಠಡಿಯಲ್ಲಿ ನಡೆಸಲಾಗುತ್ತಿತ್ತು. ಆಗ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಪ್ರತ್ಯೇಕ ವ್ಯವಸ್ಥೆಯನ್ನು ಬಿಟ್ಟು ಉಳಿದ ರೋಗಿಗಳ ಜತೆ ಸೇರಿಸಿ ವೈದ್ಯರ ಕೊಠಡಿಯಲ್ಲೇ ನಡೆಸಿರುವುದರಿಂದ ಇಂತಹ ಸಮಸ್ಯೆ ಆಗಿದೆ ಎಂದು ಅಂಗ ಊನತೆಯ ಕುರಿತು ವೈದ್ಯರು ದೃಢ ಪತ್ರ ನೀಡಿದ ಬಳಿಕ ಅರ್ಜಿ ಫಾರಂ ತುಂಬುವ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ತಂಡದಲ್ಲಿದ್ದ ತಾಲ್ಲೂಕು ಪ್ರತಿನಿಧಿ ನವೀನ್‌ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.