ADVERTISEMENT

ಯೋಜನೆ ಅನುಷ್ಠಾನದಲ್ಲಿ ತಂತ್ರಜ್ಞಾನ ಬಳಕೆ

ಮತ್ಸ್ಯ ಸಂಪದ ವೆಬಿನಾರ್‌ನಲ್ಲಿ ಪ್ರೊ.ಸೆಂಥಿಲ್‌ ವೇಲ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:38 IST
Last Updated 19 ಸೆಪ್ಟೆಂಬರ್ 2020, 3:38 IST
ಡಾ.ಸೆಂಥಿಲ್‌ ವೇಲ್‌ ಎ.
ಡಾ.ಸೆಂಥಿಲ್‌ ವೇಲ್‌ ಎ.   

ಮಂಗಳೂರು: ಕಾಲೇಜಿನಲ್ಲಿರುವ ನುರಿತ ತಜ್ಞರ ಸಹಕಾರದಿಂದ ಈಗಿರುವ ಸವಲತ್ತಿನ ಜೊತೆಗೆ ನೂತನ ತಂತ್ರಜ್ಞಾನಗಳ ಬಳಕೆಯೊಂದಿಗೆ ಮತ್ಸ್ಯಸಂಪದದಂತಹ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಮೀನುಗಾರಿಕಾ ಕಾಲೇಜಿನ ಡೀನ್ ಪ್ರೊ.ಎ. ಸೆಂಥಿಲ್ ವೆಲ್ ತಿಳಿಸಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲ ಯವು ನಗರದ ಮೀನುಗಾರಿಕಾ ಕಾಲೇಜು ಮತ್ತು ಮೀನುಗಾರಿಕಾ ಇಲಾಖೆಗಳ ಸಹಯೋಗದಿಂದ ಶುಕ್ರವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗಳನ್ನು ಕಾಲೇಜಿನ ವತಿಯಿಂದ ಅನುಷ್ಠಾನ ಮಾಡುವ ವಿಧಾನ ಅವರು ತಿಳಿಸಿದರು.

ADVERTISEMENT

ಮೀನುಗಾರಿಕಾ ಇಲಾಖೆಯಾ ಉಪನಿರ್ದೇಶಕ ಪಿ.ಪಾರ್ಶ್ವನಾಥ್ ಮಾತನಾಡಿ, ಕಡಲತೀರ ಪ್ರದೇಶದಲ್ಲಿ ವಾಸವಾಗಿರುವ ಮೀನುಗಾರರ ಜೀವನೋಪಾಯಕ್ಕಾಗಿ ಪಂಜರದಲ್ಲಿ ಮೀನು ಸಾಕಣೆ ಮತ್ತು ಸಮುದ್ರ ಕಳೆಗಳ ಬೆಳವಣಿಗೆಗೆ ಒತ್ತು ನೀಡಬೇಕಾಗುತ್ತದೆ ಎಂದರು.

ಮೀನಿನ ಹಿಡುವಳಿ ಮತ್ತು ಮೀನಿನ ತಂಗುದಾಣಗಳ ನೈರ್ಮಲ್ಯಕ್ಕೆ ಆದ್ಯತೆ ಕೊಡುವುದು ಅನಿವಾರ್ಯ ಎಂದ ಅವರು, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಕರಾವಳಿ ಮೀನುಗಾರರಿಗೆ ಕೊಡುಗೆ ಕೊಟ್ಟಂತಾಗಿದೆ ಎಂದರು.

ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎ.ಟಿ. ರಾಮಚಂದ್ರನಾಯ್ಕ ಮಾತನಾಡಿ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು ಕೇಂದ್ರ ಸರ್ಕಾರ ಯೋಜನೆಯಾಗಿದ್ದು, ಮೀನು ಕೃಷಿಕರಿಗೆ ಮತ್ತು ಮೀನುಗಾರರಿಗೆ 2020 ರಿಂದ 2025 ರವರೆಗೆ ಅಸ್ತಿತ್ವದಲ್ಲಿರುತ್ತದೆ ಎಂದು ಹೇಳಿದರು.

₹20,050 ಕೋಟಿ ಅನುದಾನ ಮೀನುಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ಮೀನು ಕೃಷಿಕರ ಮತ್ತು ಮೀನುಗಾರರ ಆದಾಯ ಮತ್ತು ಉದ್ಯೋಗದ ಉತ್ಪಾದನೆಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಒಟ್ಟು 24 ವಿವಿಧ ಯೊಜನೆಗಳನ್ನು ಮೀನುಗಾರಿಕೆ ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ರಾಮಲಿಂಗ, ಒಳನಾಡು ಮೀನುಗಾರಿಕೆಯ ಜಂಟಿ ಕಾರ್ಯದರ್ಶಿ ದಿನೇಶ್ ಕುಮಾರ್ ಕಳ್ಳೇರ್ ಮಾತನಾಡಿದರು. ಧರ್ಮಸ್ಥಳದ ರೈತ ಜೈಶೀಲ ಭಾಗವಹಿಸಿ, ತಮ್ಮ ಸಂದೇಹ ನಿವಾರಿಸಿಕೊಂಡರು. ಮಂಗಳೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಂಯೋಜಕ ರೋಹಿತ್ ಜಿ.ಎಸ್. ಸ್ವಾಗತಿಸಿದರು.

ವಿವಿಧ ಜಿಲ್ಲೆಗಳ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು, ಕಾಲೇಜಿನ ಪ್ರಾಧ್ಯಾಪಕರು, ರೈತರುಗಳು, ಮೀನುಗಾರ ಸಂಘ–ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು ಸೇರಿದಂತೆ 140 ಜನ ಭಾಗವಹಿಸಿದ್ದರು. ವೆಬಿನಾರ್‌ ಅನ್ನು ಗೂಗಲ್ ಮೀಟ್ ಮತ್ತು ಯೂಟ್ಯೂಬ್ ಜಾಲತಾಣಗಳ ಮೂಲಕ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.