ADVERTISEMENT

ಕಳೆದುಹೋದ ಮತ್ತೊಂದು ಋತು: ಪಶ್ಚಿಮ ಕರಾವಳಿ ಸಮಸ್ಯೆಗೆ ‘ಉತ್ತರ’ದ ನಿರೀಕ್ಷೆ

ವಿಕ್ರಂ ಕಾಂತಿಕೆರೆ
Published 9 ಜೂನ್ 2025, 8:03 IST
Last Updated 9 ಜೂನ್ 2025, 8:03 IST
<div class="paragraphs"><p>ನಿರಂತರ ಚಟುವಟಿಕೆ ನಡುವೆಯೂ ಮೀನುಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ಜೀವಂತವಾಗಿಯೇ ಉಳಿದಿವೆ. ಮಂಗಳೂರು ದಕ್ಕೆಯಲ್ಲಿ ಕಂಡ ನೋಟ&nbsp;</p></div>

ನಿರಂತರ ಚಟುವಟಿಕೆ ನಡುವೆಯೂ ಮೀನುಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ಜೀವಂತವಾಗಿಯೇ ಉಳಿದಿವೆ. ಮಂಗಳೂರು ದಕ್ಕೆಯಲ್ಲಿ ಕಂಡ ನೋಟ 

   

–ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಮಂಗಳೂರು: ಕಳೆದ ವರ್ಷ ಜುಲೈ ತಿಂಗಳಲ್ಲಿ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಮುಖಂಡರು, ವಿಜ್ಞಾನಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳನ್ನು ಒಳಗೊಂಡ ‘ಬಿಗ್‌ (ಬ್ರಿಜ್ ಇನ್‌ ದಿ ಯೀಲ್ಡ್ ಗ್ಯಾಪ್‌) ಫಿಷ್‌’ ಸಮಾವೇಶ ನಡೆದಿತ್ತು.

ADVERTISEMENT

ತುರ್ತು ಆಗಬೇಕಾದದ್ದೂ ಸೇರಿದಂತೆ ಒಟ್ಟು 12 ನಿರ್ಧಾರಗಳನ್ನು ಈ ಸಮಾವೇಶದಲ್ಲಿ ಕೈಗೊಳ್ಳಲಾಗಿತ್ತು. ಪಶ್ಚಿಮ ಕರಾವಳಿಯ ಸುಸ್ಥಿರ ಮೀನುಗಾರಿಕೆಯೇ ಸಮಾವೇಶದಲ್ಲಿ ಚರ್ಚೆಯಾಗಿದ್ದ ಪ್ರಮುಖ ವಿಷಯವಾಗಿತ್ತು. ಪಶ್ಚಿಮ ಕರಾವಳಿಯ ಮೀನುಗಾರಿಕೆಗೆ ಸಂಬಂಧಿಸಿ ಇಂಥ ಅದೆಷ್ಟೋ ಸಮಾವೇಶಗಳು, ಸಭೆಗಳು, ಅಧಿಕಾರಸ್ಥರ ಭೇಟಿ ಮುಂತಾದವು ನಡೆದಿವೆ. ಆದರೂ ಮೀನುಗಾರರ ಸಮಸ್ಯೆ ಮತ್ತು ಮೀನುಗಾರಿಕೆಯಲ್ಲಿ ಸುಸ್ಥಿರತೆಯನ್ನು ಕಾಣಲು ಸಾಧ್ಯವಾಗಿಲ್ಲ ಎಂಬ ಕೊರಗು ಇನ್ನೂ ಉಳಿದಿದೆ. 

ಇಂಥ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಮತ್ತೊಂದು ‘ರಜೆ’ ಅವಧಿ ಆರಂಭವಾಗಿದೆ. ಮುಂದಿನ ಋತುವಿನಲ್ಲಾದರೂ ಸಮಸ್ಯೆಗಳು ಪರಿಹಾರವಾಗಿ ಮೀನುಗಾರಿಕೆ ಲಾಭದ ಮತ್ತು ಸಂತೃಪ್ತಿಯ ವೃತ್ತಿಯಾಗಿ ಮಾರ್ಪಡಲಿ ಎಂಬ ಆಶಯದೊಂದಿಗೆ ಕಡಲ ಮಕ್ಕಳು ಸಮುದ್ರ ಮಾತೆಗೆ ಚುಟುಕು ವಿದಾಯ ಹೇಳಿದ್ದಾರೆ.

ಇತ್ತೀಚಿನ ಒಂದು ದಶಕದಲ್ಲಿ ಮೀನುಗಾರಿಕೆ ಮತ್ತು ಮೀನಿನ ಲಭ್ಯತೆ ವಿಷಯ ಹೆಚ್ಚು ಚರ್ಚೆಗೆ ಒಳಗಾಗಿದೆ. ನವೀನ ತಂತ್ರಜ್ಞಾನಗಳ ಬಳಕೆ, ‘ಸಾಂಪ್ರದಾಯಿಕ ವೃತ್ತಿ’ ಎನ್ನುವ ಚೌಕಟ್ಟನ್ನು ಮೀರಿ ಮೀನನ್ನು ಬಾಚಿ ತೆಗೆದು ಸಮುದ್ರ ಸಂಪತ್ತನ್ನು ನಾಶ ಮಾಡುವ ವ್ಯಾಪಾರಿ ಮನೋಭಾವ ಹುಟ್ಟಿಕೊಂಡಿರುವುದು, ಆರ್ಥಿಕ ಲಾಭದ ಆಸೆಯಿಂದ ಎಲ್ಲ ಕಡೆಯಿಂದಲೂ ಜನರು ಈ ವೃತ್ತಿಯ ಕಡೆಗೆ ಆಕರ್ಷಿತರಾಗಿರುವುದು ಮುಂತಾದವು ಸಮಸ್ಯೆಯಾಗಿ ಕಾಡಿದೆ ಎಂದು ಸಾಂಪ್ರದಾಯಿಕ ಮೀನುಗಾರಿಗೆ ಉಳಿಯಬೇಕು ಎಂಬ ಆಶಯ ಹೊಂದಿರುವವರ ಅನಿಸಿಕೆ.

ಪಶ್ಚಿಮ ಕರಾವಳಿಯಲ್ಲಿ 10 ವರ್ಷಗಳಿಂದ ವಾರ್ಷಿಕ ಮೀನಿನ ಲಭ್ಯತೆ ಸರಾಸರಿ 3.7 ಮಿಲಿಯ ಟನ್‌ನಿಂದ 3.9 ಮಿಲಿಯ ಟನ್‌ನಷ್ಟೇ ಇದೆ ಎಂದು ಸಂಶೋಧನೆಯ ಸಾರವೊಂದು ಹೇಳುತ್ತದೆ. 4.8 ಮಿಲಿಯ ಟನ್ ಈ ಭಾಗದ ವಾರ್ಷಿಕ ಸಾಮರ್ಥ್ಯ ಆಗಿದ್ದು ಈಚಿನ 10ವರ್ಷಗಳ ಹಿಂದೆ ಸರಿಸುಮಾರು 4.1 ಮಿಲಿಯ ಟನ್‌ನಿಂದ 4.2 ಮಿಲಿಯ ಟನ್‌ನಷ್ಟು ಮೀನು ಸಿಗುತ್ತಿತ್ತು. ಈಗ ಸಿಗುತ್ತಿರುವ ಪ್ರಮಾಣ ಕಡಿಮೆ ಮಾತ್ರವಲ್ಲ, ಆ ಸಂಖ್ಯೆ ಸ್ಥಿರವಾಗಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ಮೀನುಗಾರಿಕೆ ಮಹಾವಿದ್ಯಾಲಯದ ಅಕ್ವಾಟಿಕ್ ಬಯಾಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ ಮಗದ ತಿಳಿಸಿದ್ದರು.

ಕಾನೂನು ಪಾಲನೆ ಅಗತ್ಯ

ಮೀನುಗಾರಿಕೆಗೆ ಸಂಬಂಧಿಸಿದ ಕಾನೂನುಗಳು ಕಾಗದ ಪತ್ರಗಳಲ್ಲಿ ಮಾತ್ರವಿದೆ. ಅದು ಸಮರ್ಪಕವಾಗಿ ಪಾಲನೆ ಆದರೆ ಪಶ್ಚಿಮ ಕರಾವಳಿಯ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದಾಗಿದೆ ಎಂದು ಹೇಳುತ್ತಾರೆ ಟ್ರೋಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ.

ಮೀನುಗಾರಿಕೆ ಮೇಲೆ ನಿಯಂತ್ರಣ ಇಲ್ಲದೇ ಇರುವುದರಿಂದ ಮೀನಿನ ಉತ್ಪತ್ತಿ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂಬುದರಲ್ಲಿ ಸಂಶಯವೇ ಇಲ್ಲ ಎಂದು ತಜ್ಞರು ಕೂಡ ಹೇಳುತ್ತಾರೆ. ‘ನಮ್ಮ ವ್ಯಾಪ್ತಿಯಲ್ಲಿ ಸಮುದ್ರಕ್ಕೆ ಇಳಿಯುವ ಬೋಟ್‌ಗಳ ಸಂಖ್ಯೆ ತುಸು ಹೆಚ್ಚು. ಭಾರತದ ಇತರ ಪ್ರದೇಶಗಳಲ್ಲಿ ಒಂದು ಕಿಲೊಮೀಟರ್‌ಗೆ 50 ಬೋಟ್‌ಗಳು ಇದ್ದರೆ ನಮ್ಮಲ್ಲಿ ಅದರ ಸಂಖ್ಯೆ 75. ಸಣ್ಣ ಕಣ್ಣಿನ ಬಲೆಗಳ ಬಳಕೆಯೂ ಸಮುದ್ರದಲ್ಲಿ ಮೀನಿನ ಪ್ರಮಾಣ ಕಡಿಮೆಯಾಗಲು ಕಾರಣ ಎನ್ನುವ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.

‘ಸಮಸ್ಯೆಗಳು ಅನೇಕ ಇವೆ. ಈ ಬಾರಿಯಾದರೂ ಅವುಗಳಿಗೆ ಪರಿಹಾರ ಸಿಗಬಹುದು ಎಂಬ ಭರವಸೆ ಇದೆ. ನಿಯಮಗಳ ಕಟ್ಟುನಿಟ್ಟಿನ ಪಾಲನೆ ಆಗಬೇಕು. ಅಗತ್ಯವಿದ್ದಲ್ಲಿ ಬದಲಾವಣೆಯೂ ಆಗಬೇಕು. ಹಿಂದೆ ಏನೇನು ಆಗಿದೆ ಎಂಬುದರ ಬಗ್ಗೆ ವಿಮರ್ಶೆ ಮಾಡಿ ಹೊಸ ಯೋಜನೆಗಳನ್ನು ರೂಪಿಸಲು ಇದು ಸೂಕ್ತ ಕಾಲ. ಅಂಥ ಪ್ರಯತ್ನಕ್ಕೆ ಕೈ ಹಾಕಿದರೆ ಹೊಸ ಸಾಧ್ಯತೆಗಳನ್ನು ಕಾಣಬಹುದಾಗಿದೆ’ ಎಂದು ಹೇಳಿದ ಚೇತನ್ ಬೆಂಗ್ರೆ ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾದ ಯೋಜನೆ ರೂಪಿಸಿದರೆ ಬದಲಾವಣೆ ಸಾಧ್ಯ’ ಎಂದರು.

‘ತಕ್ಷಣಕ್ಕೆ ಸಿಗುವ ಅಪಾರ ಲಾಭದ ಮೇಲೆ ಕಣ್ಣಿಟ್ಟು ಬಹುತೇಕರು ಮೀನು ಶಿಕಾರಿಗೆ ಇಳಿಯುತ್ತಾರೆ. ಇದರಿಂದ ಈ ವೃತ್ತಿಗೇ ತೊಂದರೆ ಆಗುತ್ತಿದೆ. ಮೀನುಗಾರಿಕೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ನೋಡಿಕೊಂಡರೆ ಜೀವನಪರ್ಯಂತ ಈ ವೃತ್ತಿಯಲ್ಲಿ ತೊಡಗಿಸಿಕೊಂಡು ಚೆನ್ನಾಗಿರಬಹುದು. ಕ್ಷಣಿಕ ಲಾಭಕ್ಕಾಗಿ ಸಮುದ್ರ ಸಂಪತ್ತನ್ನೇ ಹಾಳು ಮಾಡಿದರೆ ಭವಿಷ್ಯ ಕರಾಳ ಆಗಲಿದೆ. ಮೀನುಗಾರಿಕೆ ಇಲಾಖೆಯೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು’ ಎಂದು ಅವರು ಹೇಳಿದರು.

‘ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಏಕಸೂತ್ರವಾಗಿ ನಡೆಯಬೇಕು. ಸದ್ಯ ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆ ನಡೆಯುವಾಗ ಪಶ್ಚಿಮ ಕರಾವಳಿಯಲ್ಲಿ ‘ರಜೆ’ ಘೋಷಣೆ ಆಗಿರುತ್ತದೆ. ಇಲ್ಲಿ ಚಟುವಟಿಕೆ ನಡೆಯುವಾಗ ನೆರೆ ರಾಜ್ಯದ ಬೋಟ್‌ಗಳು ಮಾತ್ರವಲ್ಲ, ಚೀನಾದಿಂದಲೂ ಮೀನುಗಾರರ ‘ಅತಿಕ್ರಮಣ’ ನಡೆಯುತ್ತದೆ. ಪಕ್ಕದ ರಾಜ್ಯದವರು ಬಳಸುವ ಬೃಹತ್ ಬೋಟ್‌ಗಳಿಗೆ ಹೋಲಿಸಿದರೆ ನಮ್ಮದು ತೀರಾ ಚಿಕ್ಕ ಬೋಟ್‌ಗಳು. ಇದಕ್ಕೆಲ್ಲ ಏಕಸೂತ್ರ ಬೇಕು’ ಎಂದು ಚೇತನ್ ಆಗ್ರಹಿಸಿದರು.

ಎರಡು ತಿಂಗಳು ಆಳಸಮುದ್ರ ಮೀನುಗಾರಿಕೆ ನಿಷೇಧದ ಕಾರಣ ಮಂಗಳೂರು ದಕ್ಕೆಯಲ್ಲಿ ಲಂಗರು ಹಾಕಿರುವ ಬೋಟ್‌ಗಳು  ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಕಳೆದ ಋತುವಿನಲ್ಲಿ ಮಾರ್ಚ್‌ ವರೆಗೆ ಒಟ್ಟು 1.72 ಲಕ್ಷ ಟನ್ ಮೀನು ಲಭಿಸಿದ್ದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 13 ಸಾವಿರ ಟನ್ ಮೀನು ಲಭಿಸಿದೆ. ಮೀನಿನ ಲಭ್ಯತೆ ಕಳೆದ ಬಾರಿಗಿಂತ ಈ ಬಾರಿ ಶೇಕಡ 30ರಷ್ಟು ಕಡಿಮೆಯಾಗಿದೆ.
ಸಿದ್ದಯ್ಯ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.