ADVERTISEMENT

ದುಬೈನಿಂದ ಮಂಗಳೂರಿಗೆ ಬರಲಿದೆ ವಿಮಾನ

​ಪ್ರಜಾವಾಣಿ ವಾರ್ತೆ
Published 12 ಮೇ 2020, 11:22 IST
Last Updated 12 ಮೇ 2020, 11:22 IST

ಮಂಗಳೂರು: ದುಬೈಯಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಹೊತ್ತ ಏರ್‌ ಇಂಡಿಯಾ ವಿಮಾನ ಐಎಕ್ಸ್‌ 384 ಸಂಜೆ 5.10ಕ್ಕೆ ಹೊರಡಲಿದ್ದು, ರಾತ್ರಿ 10.10ಕ್ಕೆ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ದುಬೈ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ರಿಂದ ಈ ವಿಮಾನ ಹೊರಡಲಿದ್ದು, ಈಗಾಗಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಿದ್ದಾರೆ. ಲಗೇಜ್ ತಪಾಸಣೆ ಇತ್ಯಾದಿ ಪ್ರಕ್ರಿಯೆ ಶುರುವಾಗಿದ್ದು, ಪ್ರತಿ ಪ್ರಯಾಣಿಕರು ಟಿಕೆಟ್ ದರ ಪಾವತಿಸಬೇಕಾಗಿದೆ.

ಮೊದಲು ಎಲ್ಲ ಪ್ರಯಾಣಿಕರ ವೈದ್ಯಕೀಯ ತಪಾಸಣೆ ನಡೆಯಲಿದ್ದು, ಬಳಿಕ ಇತರ ಪ್ರಕ್ರಿಯೆಗಳು ನಡೆಯಲಿವೆ. ಈಗಾಗಲೇ ಬೋರ್ಡಿಂಗ್ ಪ್ರಕ್ರಿಯೆ ಆರಂಭವಾಗಿದೆ.

ADVERTISEMENT

ವಿಮಾನದಲ್ಲಿ ಒಟ್ಟು 176 ಜನ ಪ್ರಯಾಣಿಕರಿದ್ದು, ಇದರಲ್ಲಿ 95 ಪುರುಷರು, 81 ಮಹಿಳೆಯರು ಸೇರಿದ್ದಾರೆ. 12 ಮಂದಿ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು ಹಾಗೂ 38 ಗರ್ಭಿಣಿಯರು ಮಂಗಳೂರಿಗೆ ಬರಲಿದ್ದಾರೆ.

ವಿದೇಶದಿಂದ ಬರುವವರಿಗೆ ಪ್ರತ್ಯೇಕವಾದ ಹೋಟೆಲ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಲ್ಲಿ ಕನಿಷ್ಠ ಶುಲ್ಕವನ್ನು ವಿಧಿಸಿ ಅವರನ್ನು ಹೋಟೆಲ್ ಕ್ವಾರಂಟೈನ್ ಮಾಡಲಾಗುತ್ತದೆ. ಈಗಾಗಲೇ 17 ಹೋಟೆಲ್‌ಗಳು ಹಾಗೂ 12 ಹಾಸ್ಟೆಲ್‌ಗಳನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.