ADVERTISEMENT

ಅಮಾನ್ಯ ಚೆಕ್ ನೀಡಿ ವಂಚನೆ: ಕುಪ್ಪೆಪದವು ಮುತ್ತೂರು ಗ್ರಾಮದ ಫರೀದಾ ಬೇಗಂ ಬಂಧನ

ಚಿನ್ನಾಭರಣ, ದುಬಾರಿ ಸಾಮಗ್ರಿ ಖರೀದಿಸುತ್ತಿದ್ದ ಮಹಿಳೆ– 9 ಪ್ರಕರಣಗಳಲ್ಲಿ ಆರೋಪಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 6:15 IST
Last Updated 21 ಅಕ್ಟೋಬರ್ 2025, 6:15 IST
ಫರೀದಾ ಬೇಗಂ
ಫರೀದಾ ಬೇಗಂ   

ಮಂಗಳೂರು: ಮೋಸ, ವಂಚನೆಗೆ ಸಂಬಂಧಿಸಿದ ಒಂಬತ್ತು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಹಿಳೆಯನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲ್ಲೂಕಿನ ಕುಪ್ಪೆಪದವು ಮುತ್ತೂರು ಗ್ರಾಮದ ಫರೀದಾ ಬೇಗಂ ಅಲಿಯಾಸ್ ಫರೀದಾ ( 28 ವರ್ಷ) ಬಂಧಿತ ಆರೋಪಿ. ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ಫರೀದಾ ಬೇಗಂ, ಮಾನ್ಯತೆ ಇಲ್ಲದ ಚೆಕ್‌ಗಳನ್ನು ನೀಡಿ, ಆ್ಯಪಲ್ ಕಂಪನಿಯ ಎರಡು ಲ್ಯಾಪ್‌ಟಾಪ್‌, ಡೆಲ್ ಕಂಪನಿಯ ಒಂದು ಲ್ಯಾಪ್‌ಟಾಪ್‌ಗಳನ್ನು ಪರಿಚಯದ ವ್ಯಕ್ತಿಯ ಮೂಲಕ ಖರೀದಿಸಿ ಒಟ್ಟು₹ 1.98 ಲಕ್ಷ ವಂಚಿಸಿದ್ದಾಳೆ ಎಂದು ನಗರದ ಎಂಪೈರ್ ಮಾಲ್‌ನ ‘ಲ್ಯಾಪ್ ಟಾಪ್ ಬಜಾರ್’  ಮಳಿಗೆಯ ಜಯರಾಯ ಅವರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಠಾಣೆಯ ಇನ್‌ಸ್ಪೆಕ್ಟರ್‌ ಮೋಹನ ಕೊಟ್ಟಾರಿ ನೇತೃತ್ವದಲ್ಲಿ, ತನಿಖಾಧಿಕಾರಿ ವಿನಾಯಕ ತೋರಗಲ್ ಮತ್ತು ಮಹಿಳಾ ಸಿಬ್ಬಂದಿ ಫರಿದಾ ಅವರನ್ನು ಬಂಧಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ADVERTISEMENT

ಆರೋಪಿ ಮಹಿಳೆಯು ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ಮಾಡಿ ತನ್ನ ಮಾತುಗಳಿಂದ ಅಂಗಡಿ ಮಾಲಕರನ್ನು ನಂಬಿಸುತ್ತಿದ್ದಳು. ಮಾನ್ಯತೆ ಇಲ್ಲದ ಚೆಕ್‌ಗಳನ್ನು ನೀಡಿ ಬೆಲೆಬಾಳುವ ಸ್ವತ್ತುಗಳನ್ನು ಖರೀದಿಸಿ ಮೋಸಗೊಳಿಸುತ್ತಿದ್ದಳು. ಈ ಬಗ್ಗೆ ನಗರದ ಕಾವೂರು, ಬಜಪೆ, ಮೂಡುಬಿದಿರೆ, ಮುಲ್ಕಿ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು,  ಪುತ್ತೂರು ನಗರ ಠಾಣೆಯಲ್ಲಿ 3 ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯ ಶಿರ್ವ ಠಾಣೆಯಲ್ಲಿ ಒಂದು ವಂಚನೆ  ಪ್ರಕರಣ ದಾಖಲಾಗಿತ್ತು. ಮೂಲ್ಕಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆರೋಪಿ ಬಳಿಕ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಳು. ಆಕೆಯ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.