
ಉಪ್ಪಿನಂಗಡಿ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಪೆರ್ನೆ ಎಂಬಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಉಪ ಪ್ರಬಂಧಕರಾಗಿದ್ದ ಪುಲುಗುಜ್ಜು ಸುಬ್ರಹ್ಮಣ್ಯಂ (30) ನಾಪತ್ತೆಯಾಗಿದ್ದು, ಅವರು ಬ್ಯಾಂಕ್‌ಗೆ ₹ 71.41 ಲಕ್ಷ ವಂಚನೆ ಮಾಡಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಎಸ್. ಚಂದ್ರಶೇಖರ್ ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ‘2023ರ ಸೆ.4ರಿಂದ 2025ರ ಡಿ.19ರವರೆಗೆ ಪೆರ್ನೆ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕರಾಗಿದ್ದ ಸುಬ್ರಹ್ಮಣ್ಯಂ ಅವರು ಶಾಖೆಯ ಎಟಿಎಂನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. 2024ರ ಫೆ.6ರಿಂದ 2025ರ ಡಿ.16ರ ಅವಧಿಯಲ್ಲಿ ಅವರು ಅದೇ ಬ್ಯಾಂಕ್‌ನ ಎಟಿಎಂಗೆ ಪ್ರತಿ ದಿನ ನಿಗದಿ ಪಡಿಸಿದ ಹಣ ಜಮೆ ಮಾಡುತ್ತಿರಲಿಲ್ಲ. ಒಟ್ಟು ₹ 70.86 ಲಕ್ಷವನ್ನು ವಂಚಿಸಿದ್ದಾರೆ. ಸೇಫ್ ಲಾಕರ್ ಪರಿಶೀಲಿಸಿದಾಗ 4.400 ಗ್ರಾಂನ ₹ 55 ಸಾವಿರ ಅಂದಾಜು ಮೌಲ್ಯದ 1 ಪ್ಯಾಕೆಟ್ ಚಿನ್ನವನ್ನೂ ಒಯ್ದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಡಿ.17ರಂದು ಆರೋಪಿಯು ಹಣ ದುರುಪಯೋಗಪಡಿಸಿರುವುದು ಗೊತ್ತಾಗಿದ್ದು, ಅಂದು ಅಸೌಖ್ಯದ ಕಾರಣ ನೀಡಿ ಕಚೇರಿಯಿಂದ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಸುಬ್ರಹ್ಮಣ್ಯಂ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಸುಬ್ರಹ್ಮಣ್ಯಂ ಬಿ.ಸಿ.ರೋಡಿನಲ್ಲಿ ವಿಷ್ಣು ಎಂಬುವರ ಜೊತೆ ವಾಸ್ತವ್ಯ ಇದ್ದರು ಎನ್ನಲಾಗಿದ್ದು, ಡಿ.17ರಂದು ಸಹೋದರನಿಗೆ ಅನಾರೋಗ್ಯ ಇದ್ದು, ರೂಮಿಗೆ ಹೋಗುತ್ತೇನೆಂದು ತೆರಳಿ ಬಳಿಕ ನಾಪತ್ತೆಯಾಗಿದ್ದರು.
ಸುಬ್ರಹ್ಮಣ್ಯಂ ಅವರ ಸಹೋದರ ಪುಲುಗುಜ್ಜು ನಾಗ ಫಣೀಂದ್ರ ಎಂಬುವರು ಉಪ್ಪಿನಂಗಡಿ ಠಾಣೆಗೆ ನಾಪತ್ತೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.