ADVERTISEMENT

ಗಣೇಶ ಚತುರ್ಥಿ: ಶ್ರದ್ಧಾಭಕ್ತಿಯಿಂದ ಆಚರಣೆ

ದೇವಸ್ಥಾನಗಳಲ್ಲಿ ಭಕ್ತರ ದಂಡು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದ ರಂಗು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 5:58 IST
Last Updated 2 ಸೆಪ್ಟೆಂಬರ್ 2022, 5:58 IST
ಮಂಗಳೂರಿನ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದ 75ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸಹ ಸರಕಾರ್ಯವಾಹ ಮುಕುಂದ್ ಬುಧವಾರ ಚಾಲನೆ ನೀಡಿದರು
ಮಂಗಳೂರಿನ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದ 75ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸಹ ಸರಕಾರ್ಯವಾಹ ಮುಕುಂದ್ ಬುಧವಾರ ಚಾಲನೆ ನೀಡಿದರು   

ಮಂಗಳೂರು: ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಬಾರಿ ಕೋವಿಡ್‌ ಕಾರ್ಮೋಡ ಸರಿದಿರುವುದರಿಂದ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು.

ಭಕ್ತರು ಬುಧವಾರ ಬೆಳಿಗ್ಗೆ ಸಮೀಪದ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಗಣಪತಿ, ಈಶ್ವರ ದೇವಸ್ಥಾನಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಕೆಲವರು ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಜಿಲ್ಲೆಯಲ್ಲಿ 375ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ಬುಧವಾರವೇ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಇನ್ನು ಹಲವೆಡೆ ಎರಡು, ಮೂರು ಮತ್ತು ಐದು ದಿನ ಆರಾಧಿಸಿ ಬಳಿಕ ವಿಸರ್ಜನೆ ಮಾಡಲು ಸಿದ್ಧತೆ ನಡೆಲಾಗುತ್ತಿದೆ. ಮಂಗಳೂರು ನಗರದಲ್ಲೇ ಐವತ್ತಕ್ಕೂ ಅಧಿಕ ಸ್ಥಳಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ADVERTISEMENT

ಸಂಘ ನಿಕೇತನ: ನಗರದ ಮಣ್ಣಗುಡ್ಡದ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುವ 75ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸಹ ಸರಕಾರ್ಯವಾಹಮುಕುಂದ್ ಚಾಲನೆ ನೀಡಿದರು.

ಆರ್‌ಎಸ್‌ಎಸ್‌ನ ಸಂಘ ಚಾಲಕ ಡಾ.ವಾಮನ್ ಶೆಣೈ, ಸುನಿಲ್ ಆಚಾರ್ , ಡಾ.ಕಲಡ್ಕ ಪ್ರಭಾಕರ್ ಭಟ್, ಗೌರವಾಧ್ಯಕ್ಷ ಪಿ.ರವೀಂದ್ರ ಪೈ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸತೀಶ್ ಪ್ರಭು, ಸುರೇಶ ಕಾಮತ್ , ಜೀವನರಾಜ್ ಶೆಣೈ ಉಪಾಧ್ಯಕ್ಷರಾದ ಜೆ.ಕೆ.ರಾವ್, ಆನಂದ ಪಾಂಗಳ, ಕೆ.ಪಿ.ಟೈಲಾರ್, ಅಭಿಷೇಕ್ ಭಂಡಾರಿ, ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ, ರಘುವೀರ್ ಕಾಮತ್, ಎಸ್‌.ಆರ್.ಕುಡ್ವ, ಗಣೇಶ್ ಪ್ರಸಾದ್, ಜಯಪ್ರಕಾಶ್, ಮಂಗಳಾದೇವಿ ಸ್ವಾಮಿಪ್ರಸಾದ್ ಇದ್ದರು.

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಹರಿನಾಮ ಸಂಕೀರ್ತನೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು ರಾತ್ರಿ ಮೂಡಗಣಪತಿ ಸೇವೆ ಹಾಗೂ ರಂಗಪೂಜೆ ನಡೆದವು. ಸೆ.4ರಂದು ಮೂರ್ತಿ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ.

ಪಂಪ್‌ವೆಲ್‌ ಗಣೇಶೋತ್ಸವ: ಕಂಕನಾಡಿಯ ಪಂಪ್‌ವೆಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 50ನೇ ವರ್ಷದ ಸಂಭ್ರಮಕ್ಕೆ ಸೋಮವಾರ ಚಾಲನೆ ನೀಡಲಾಗಿದ್ದು, ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. 108 ಕಾಯಿಯ ಗಣಯಾಗ, ಮೂಡಪ್ಪ ಸೇವೆ, ರುದ್ರಹೋಮ, ಚಂಡಿಕಾ ಹೋಮ ಹಾಗೂ ವಿವಿಧ ವೈದಿಕ ಕಾರ್ಯಕ್ರಮ ನಡೆದವು.

ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್, ಮೇಯರ್‌ ಪ್ರೇಮಾನಂದ ಶೆಟ್ಟಿ, ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ಕಂಕನಾಡಿ ಗರಡಿಯ ಆಡಳಿತ ಮಂಡಳಿ ಅಧ್ಯಕ್ಷ ಪಿ.ಚಿತ್ತರಂಜನ್‌, ಚಿತ್ರನಟರಾದ ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌ ಭಾಗವಹಿಸಿದ್ದರು. ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್,ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಕೆ, ಗೌರವಾಧ್ಯಕ್ಷ ಎಂ.ಎಂ.ಪ್ರಭು, ಮಹಾಗಣಪತಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೆ.ಬಿ.ಅರಸ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಇದ್ದರು. ಸೆ.2ರಂದು ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ.

ವೆಂಕಟರಮಣ ದೇವಸ್ಥಾನ: ನಗರದ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಐದು ದಿನ ಗಣೇಶೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು. ಚಾತುರ್ಮಾಸ ವ್ರತ ಆಚರಿಸುತ್ತಿರುವ ಕಾಶಿ ಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿ ಮಠದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಮಹಾಗಣಪತಿ ದೇವರ ಮೃತ್ತಿಕಾ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.