ADVERTISEMENT

ಗಾಂಧಿ ಪ್ರಜ್ಞೆ ಎಲ್ಲ ಕಾಲಕ್ಕೂ ಪ್ರಸ್ತುತ: ರವಿಶಂಕರ್ ರಾವ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 14:09 IST
Last Updated 2 ಅಕ್ಟೋಬರ್ 2023, 14:09 IST
ಗಾಂಧಿ ಜಯಂತಿ ಅಂಗವಾಗಿ ಮಂಗಳೂರಿನ ಮಹಾತ್ಮ ಗಾಂಧಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ರವಿಶಂಕರ್ ರಾವ್ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ಗಾಂಧಿ ಜಯಂತಿ ಅಂಗವಾಗಿ ಮಂಗಳೂರಿನ ಮಹಾತ್ಮ ಗಾಂಧಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ರವಿಶಂಕರ್ ರಾವ್ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು   

ಮಂಗಳೂರು: ಜೀವನದುದ್ದಕ್ಕೂ ಒಳಿತನ್ನು ಸ್ವೀಕರಿಸುವ, ಎಲ್ಲರಿಂದ ಎಲ್ಲವನ್ನೂ ಕಲಿಯುವ ಮಾನವತೆಯ ವ್ಯಕ್ತಿತ್ವ ಗಾಂಧೀಜಿಯವರದಾಗಿತ್ತು. ವ್ಯವಸ್ಥೆಯ ಉನ್ನತಿ ಬಗ್ಗೆ ಯೋಚಿಸಿದಾಗ ಗಾಂಧಿ ಪ್ರಜ್ಞೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ರವಿಶಂಕರ್ ರಾವ್ ಅಭಿಪ್ರಾಯಪಟ್ಟರು.

ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನವು ಟಾಗೋರ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಹಾತ್ಮಗಾಂಧಿ ಅವರ ಕಲ್ಪನೆಯಲ್ಲಿ ರಾಮ ರಾಜ್ಯ ಎಂದರೆ ಉತ್ತಮ ಆಡಳಿತ ಎಂದಾಗಿತ್ತು. ಗಾಂಧೀಜಿ ಯಾವತ್ತಿಗೂ ಪರಿಶುದ್ಧತೆಯ ತತ್ವ ಅಳವಡಿಸಿಕೊಂಡಿದ್ದರು. ಹಣಕಾಸಿನ ವ್ಯವಹಾರದಲ್ಲಿ ಗಾಂಧೀಜಿ ಎಷ್ಟು ಶುಭ್ರರಾಗಿದ್ದರೆಂದರೆ, ಬ್ರಿಟಿಷರಿಗೆ ಕೊನೆ ತನಕವೂ ಅವರ ತಪ್ಪನ್ನು ಹುಡುಕಲು ಸಾಧ್ಯವಾಗಲೇ ಇಲ್ಲ. ಆದರೆ, ನಾವಿಂದು ಗಾಂಧಿ ತತ್ವವನ್ನು ಮರೆತಿದ್ದೇವೆ. ಎಲ್ಲಡೆ ಭ್ರಷ್ಟಾಚಾರ ನುಸುಳಿಕೊಂಡಿದೆ‘ ಎಂದು ವಿಷಾದಿಸಿದರು.

ADVERTISEMENT

‘ನಾವು ಸಮಾಜದಿಂದ ಸ್ವೀಕೃತಿಯನ್ನು ಮಾತ್ರ ಪಡೆಯುತ್ತೇವೆ. ತ್ಯಾಗದ ಮನಃಸ್ಥಿತಿ ಬೆಳೆಸಿಕೊಂಡಿಲ್ಲ. ಆದರೆ, ಗಾಂಧೀಜಿ ಬಡವರ ಜತೆ ತಾವಿರುವ ಸಂದೇಶ ಪಸರಿಸಲು ಬದುಕಿನುದ್ದಕ್ಕೂ ಮೇಲುಡುಗೆಯನ್ನು ತ್ಯಜಿಸಿದರು. ಸಮಾಜಕ್ಕೆ ಮಾರ್ಗದರ್ಶನದ ಅಗತ್ಯ ಎದುರಾದಾಗ ಗಾಂಧೀಜಿ ಮತ್ತೆ ಮತ್ತೆ ನೆನಪಾಗುತ್ತಾರೆ’ ಎಂದರು.

ಪ್ರತಿಷ್ಠಾನದ ವತಿಯಿಂದ ನೀಡುವ ‘ವರ್ಷದ ವ್ಯಕ್ತಿ ಗೌರವ–2023’ ಪ್ರಶಸ್ತಿಯನ್ನು ಪರಿಸರ ಕಾರ್ಯಕರ್ತ ಮಾಧವ ಉಳ್ಳಾಲ ಅವರಿಗೆ ಮೇಯರ್ ಸುಧೀರ್‌ ಶೆಟ್ಟಿ ಕಣ್ಣೂರು ಪ್ರದಾನ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಡ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಪ್ರಭಾಕರ ಶ್ರೀಯಾನ್, ಇಬ್ರಾಹಿಂ ಕೋಡಿಜಾಲ್, ಸಹ ಕೋಶಾಧಿಕಾರಿ ಪ್ರೇಮ್‌ಚಂದ್ ಇದ್ದರು. ಕಾರ್ಯದರ್ಶಿ ಇಸ್ಮಾಯಿಲ್ ಎನ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.