
ಜಾತಿವ್ಯವಸ್ಥೆಗೆ ಸೆಡ್ಡುಹೊಡೆದು ಸಮಾಜ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರು, ‘ಮನುಷ್ಯರೆಲ್ಲರಿಗೂ ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂದು ಸಾರುವ ಮೂಲಕ ನಿಜ ಅರ್ಥದಲ್ಲಿ ‘ವಿಶ್ವ ಗುರು’ ಎನಿಸಿಕೊಂಡವರು. ಜಾತಿಯ ಕಾರಣಕ್ಕೆ ಕಡೆಗಣನೆಗೆ ಒಳಗಾದವರ ಏಳಿಗೆಗಾಗಿ ವಿವಿಧೆಗಡೆ ಸಂಚಾರ ನಡೆಸಿ, ತಮ್ಮ ದಿವ್ಯಸಂದೇಶದ ಮೂಲಕ ತಾರತಮ್ಯ ಮೆಟ್ಟಿನಿಲ್ಲುವ ಆತ್ಮಸ್ಥೈರ್ಯ ತುಂಬಿದವರು. ಜಾತಿ ಮತಗಳ ಅಭಿಮಾನದಿಂದ ಕುರುಡಾಗಿ ವರ್ತಿಸುವ ಸಮಾಜದ ಕಣ್ಣು ತೆರೆಯಿಸುವ ಮೂಲಕ ಜಗತ್ತೇ ಕೇರಳದ ಕಡೆಗೆ ದೃಷ್ಟಿ ನೆಡುವಂತೆ ಮಾಡಿದ ಮಹಾನುಭಾವರು.
ಸತ್ಯ ಅಹಿಂಸೆಯ ಮಾರ್ಗದ ಮೂಲಕವೇ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಕಿಚ್ಚು ತುಂಬಿದ ಮಹಾತ್ಮ ಗಾಂಧೀಜಿ ಸಂತರಂತೆಯೇ ಬದುಕಿದವರು. ದೇಶದಾದ್ಯಂತ ಸಂಚರಿಸಿ ತಮ್ಮ ಸರಳ ನಡೆ ನುಡಿಗಳಿಂದಲೇ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ಮೂಲಕ ಜನರನ್ನು ಒಗ್ಗೂಡಿಸಿ ದೇಶಾಭಿಮಾನ ಮೂಡಿಸಿದ ಮಹಾನ್ ನೇತಾರ. ದೇಶದ ಸ್ವಾತಂತ್ರಕ್ಕಾಗಿ ಹೋರಾಡುವ ಜೊತೆ ಜೊತೆಯಲ್ಲಿ ಸಮಾಜದ ತಾರತಮ್ಯ ನಿವಾರಣೆಗಾಗಿಯೂ ಸಮರ ಸಾರಿದವರು. ಪ್ರಾಮಾಣಿಕತೆ, ಆತ್ಮ ಪರಿಶುದ್ಧಿಯ ಮಹತ್ವವನ್ನು ಸಾರಿ ಜಗತ್ತಿನ ಕಣ್ಮಣಿಯಾದವರು.
19ನೇ ಶತಮಾನದ ಪೂರ್ವಾರ್ಧ ಹಾಗೂ 20ನೇ ಶತಮಾನದ ಆದಿ ಭಾಗದಲ್ಲಿ ಬದುಕಿ ಬಾಳಿದ್ದ ಈ ಇಬ್ಬರು ಮಹಾನೀಯರು ಸಮಾಜದ ಅಂಧಕಾರವನ್ನು ಓಡಿಸಿ, ತುಳಿತಕ್ಕೆ ಒಳಗಾದವರ ಕಣ್ಣೀರು ಒರೆಸಿ ಅವರ ಬದುಕಿನಲ್ಲೂ ಬೆಳಕು ಮೂಡುವಂತೆ ಮಾಡಲು ಜೀವನ ಪರ್ಯಂತ ಹೋರಾಟ ನಡೆಸಿದ ಧೀಮಂತರು. ಈ ಇಬ್ಬರು ಮಹಾನುಭಾವರು 1925ರಲ್ಲಿ ಕೇರಳದ ವರ್ಕಳಂನಲ್ಲಿ ಪರಸ್ಪರ ಮುಖಾಮುಖಿಯಾಗಿ ನಡೆಸಿದ ಸಂವಾದ ದೇಶದ ಚರಿತ್ರಾರ್ಹ ಘಟನೆ. ಕೇರಳದ ವೈಕಂನಲ್ಲಿ ದೇವಾಲಯದ ಸುತ್ತಲಿನ ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸಲು ತಮಗೂ ಸಮಾನ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತುಳಿತಕ್ಕೊಳಗಾದ ಸಮುದಾಯದವರು ನಡೆಸಿದ ಹೋರಾಟದಲ್ಲಿ (ವೈಕಂ ಸತ್ಯಾಗ್ರಹ) ಭಾಗವಹಿಸಲು 1925ರ ಮಾರ್ಚ್ 9ರಂದು ಮಹಾತ್ಮ ಗಾಂಧೀಜಿ ಕೇರಳಕ್ಕೆ ಭೇಟಿ ನೀಡಿದ್ದರು. 1925ರ ಮಾರ್ಚ್ 12ರಂದು ಗಾಂಧೀಜಿ ವರ್ಕಲದ ಶಿವಗಿರಿ ಮಠವನ್ನೂ ಸಂದರ್ಶಿಸಿದ್ದರು. ಅಂದು ಗಾಂಧೀಜಿ ಮತ್ತು ನಾರಾಯಣಗುರುಗಳ ನಡುವೆ ನಡೆದ ಸಂವಾದ ದೇಶದ ಜಾತಿವ್ಯವಸ್ಥೆಯ ತಾರತಮ್ಯಗಳು ಎಷ್ಟು ಅರ್ಥರಹಿತ ಎಂಬುದನ್ನು ಸಾರಿತು. ಅಸ್ಪೃಶ್ಯತೆ ನಿವಾರಣೆ ಮತ್ತು ಜಾತಿ ಪದ್ಧತಿ ನಿರ್ಮೂಲನೆ ವಿಚಾರಲ್ಲಿ ಇಬ್ಬರ ನಡುವಿನ ವಿಚಾರ ವಿನಿಮಯ ಸಾಮಾಜಿಕ ನ್ಯಾಯದ ಹೋರಾಟದ ಹಾದಿಗೆ ದೀವಿಗೆಯಾಯಿತು. ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡ ಮಹಾನ್ ವ್ಯಕ್ತಿಗಳಿಬ್ಬರ ಅಪೂರ್ವ ದೃಷ್ಟಿಕೋನಗಳು ಸಮಾನತೆಯ ಸಮಾಜ ಕಟ್ಟುವ ಚಿಂತನೆಗೆ ಹೊಸ ದಿಸೆಯನ್ನು ತೋರಿತು.
ಈ ಸಂವಾದದ ನಡುವೆ, ನಾರಾಯಣಗುರುಗಳ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು‘ ತತ್ವದ ಕುರಿತು, ಮಹಾತ್ಮ ಗಾಂಧೀಜಿ, ‘ಹಲವು ಜಾತಿಗಳಿಂದ ಕೂಡಿರುವ ಸಮಾಜದಲ್ಲಿ ಒಂದೇ ಜಾತಿ ಎಂಬ ಬಾವನೆ ಮೂಡಲು ಸಾಧ್ಯವೇ’ ಎಂದು ತಮ್ಮ ಸಂದೇಹವನ್ನು ತೋಡಿಕೊಳ್ಳುತ್ತಾರೆ. ಅದಕ್ಕೆ ನಾರಾಯಣಗುರುಗಳು ಒಂದು ಮಾವಿನ ಮರವನ್ನು ತೋರಿಸಿ, ‘ಆ ಮರದ ಎಲೆಗಳ ಆಕಾರ ಬೇರೆ ಬೇರೆ. ಆದರೆ ಆ ಮರದ ಪ್ರತಿಯೊಂದು ಎಲೆಯ ರಸ ಸ್ವಾದ ಒಂದೇ. ಅಂತೆಯೇ ಮನುಷ್ಯನ ಜಾತಿಗಳು ಭಿನ್ನವಾಗಿದ್ದರೂ ಅವರೆಲ್ಲ ಒಂದೇ ಪರಮಾತ್ಮನ ಸೃಷ್ಟಿ’ ಎಂದು ವಿವರಿಸುತ್ತಾರೆ. ಸಮಾಜದಲ್ಲಿ ಇರುವ ಜಾತಿ ತಾರತಮ್ಯಗಳ ನಿವಾರಣೆ ಆಗದ ಹೊರತು ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಪಡೆಯುವುದು ಸಾಧ್ಯವಿಲ್ಲ ಎಂದೂ ಗುರುಗಳು ಸ್ಪಷ್ಟಪಡಿಸುತ್ತಾರೆ. ಈ ಉತ್ತರ ಗಾಂಧೀಜಿಯ ಸಂದೇಹವನ್ನು ಸಂಪೂರ್ಣ ನಿವಾರಿಸುವರ ಜೊತೆಗೆ ಈ ವಿಚಾರದಲ್ಲಿ ಅವರಲ್ಲಿ ಸ್ಪಷ್ಟತೆ ಮೂಡುತ್ತದೆ.
ದಮನಿತ ವರ್ಗದ ಸ್ಥಿತಿಗತಿ ಸುಧಾರಣೆಗೆ ನಾರಾಯಣ ಗುರುಗಳ ಬಳಿ ಗಾಂಧೀಜಿ ಸಲಹೆ ಕೇಳುತ್ತಾರೆ. ‘ದಮನಿತರ ಸುಧಾರಣೆಗೆ ಸಹಪಂಕ್ತಿ ಭೋಜನ, ಅಂತರ್ಜಾತಿ ವಿವಾಹಗಳು ಅನಿವಾರ್ಯವಲ್ಲ. ಅವರಿಗೆ ಜ್ಞಾನ, ಶಿಕ್ಷಣ ನೀಡಬೇಕು. ಅವರೂ ಸಂಪತ್ತನ್ನು ಗಳಿಸುವಂತಾಗಬೇಕು. ಬದುಕಿನಲ್ಲಿ ಏಳಿಗೆಯಾಗುವ ಅವಕಾಶ ಅವರಿಗೂ ದಕ್ಕಬೇಕು’ ಎಂದು ಗುರುಗಳು ಹೇಳುತ್ತಾರೆ. ಗಾಂಧೀಜಿಯವರ ಅಹಿಂಸಾ ಮಾರ್ಗ ಹಾಗೂ ಸತ್ಯಾಗ್ರಹಗಳ ಬಗ್ಗೆ ಗುರುಗಳೂ ಸಹಮತ ವ್ಯಕ್ತಪಡಿಸುತ್ತಾರೆ.
ಸಿ.ರಾಜಗೋಪಾಲಾಚಾರಿ, ಇ.ವಿ. ರಾಮಸ್ವಾಮಿ ನಾಯ್ಕರ್, ಗಾಂಧೀಜಿಯವರ ಪುತ್ರ ರಾಮದಾಸ್ ಗಾಂಧಿ ಮತ್ತು ಮಹಾದೇವ ದೇಸಾಯಿ ಗಾಂಧೀಜಿಯ ಜೊತೆಯಲ್ಲಿದ್ದರು. ವಕೀಲರಾದ ಎನ್. ಕುಮಾರನ್ ಅವರು ದ್ವಿಭಾಷಿಯಾಗಿ ಕಾರ್ಯನಿರ್ವಹಿಸಿದ್ದರು.
ಶಿವಗಿರಿಯ ಶಾರದಾ ಮಠದ ಪೂಜೆಯಲ್ಲಿ ಗಾಂಧೀಜಿ ಪಾಲ್ಗೊಳ್ಳುತ್ತಾರೆ. ನಾರಾಯಣ ಗುರುಗಳು ಮಲಯಾಳ ಭಾಷೆಯಲ್ಲಿ ರಚಿಸಿದ್ದ ‘ದೈವದಶಕಂ’ ಅನ್ನು ಅಲ್ಲಿನ ಹರಿಜನ ವಿದ್ಯಾರ್ಥಿಗಳು ರಾಗಬದ್ಧವಾಗಿ ಹಾಡುವುದನ್ನು ನೋಡಿ ರೋಮಾಂಚನಕ್ಕೊಳಗಾಗುತ್ತಾರೆ. ‘ದೈವದಶಕಂ’ನ ಇಂಗ್ಲಿಷ್ ಅನುವಾದವನ್ನು ತಿಳಿದುಕೊಂಡ ಬಳಿಕ ಗಾಂಧೀಜಿಗೆ ಗುರುಗಳ ಕುರಿತ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತದೆ. ದಮನಿತ ಸಮುದಾಯದವರು ಎಲ್ಲರ ಜೊತೆ ಸಮಾನ ನೆಲೆಯಲ್ಲಿ ಬೆರೆಯುವುದನ್ನು ನೋಡಿ ಗಾಂಧೀಜಿ ಸಂಪ್ರೀತರಾಗುತ್ತಾರೆ.
ಅವಿಬ್ಬರ ನಡುವಿನ ಸಂವಾದದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುವ ಭೇದ ಭಾವದಿಂದ ಸೃಷ್ಟಿಯಾಗಿರುವ ಸಮಸ್ಯೆಗಳ ಒಳನೋಟಗಳಿದ್ದವು. ಎಲ್ಲರಿಗೂ ಸಮಾನ ಶಿಕ್ಷಣ ಒದಗಿಸುವ ಅಗತ್ಯತೆ, ಸಾಮಾಜಿಕ ನ್ಯಾಯಗಳ ಮತ್ತು ಆರ್ಥಿಕ ಸಬಲೀಕರಣದ ಚಿಂತನೆಗಳಿದ್ದವು. ಅಹಿಂಸೆ ಪ್ರತಿಪಾದನೆಯ ಮಹತ್ವ ಮತ್ತು ಅಸ್ಪೃಶ್ಯತೆ ನಿವಾರಣೆ ಕುರಿತ ಅವರ ತರ್ಕಗಳು ಗಾಂಧೀಜಿ ಚಿಂತನೆಯ ಮೇಲೂ ಗಳ ಮೇಲೆ ಗಾಢ ಪ್ರಭಾವ ಬೀರಿದವು.
ಮರುದಿನ ಗಾಂಧೀಜಿ ಮತ್ತು ನಾರಾಯಣ ಗುರುಗಳು ಜೊತೆಯಲ್ಲೇ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆ. ಅಹಿಂಸಾತ್ಮಕವಾದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗುವಂತೆ ಗಾಂಧೀಜಿ ಕರೆ ನೀಡುತ್ತಾರೆ. ‘ಗಾಂಧೀಜಿಯ ವಿಚಾರಗಳನ್ನು ಅನುಷ್ಠಾನ ಮಾಡುವಂತೆ ನಾರಾಯಣ ಗುರುಗಳೂ ಹೇಳುತ್ತಾರೆ. ಆ ಬಳಿಕ ತಿರುವನಂತಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿ, ‘ನಾರಾಯಣ ಗುರುಗಳ ದರ್ಶನ ಪಡೆದು ಧನ್ಯನಾದೆ‛ ಎಂದು ಹೇಳಿದ್ದರು.
ಗುರುಗಳ ದೇಹಾಂತ್ಯವಾದ ನಂತರವೂ ಗಾಂಧೀಜಿ ಎರಡು ಬಾರಿ ಶಿವಗಿರಿಗೆ ಭೇಟಿ ನೀಡಿದ್ದರು. ಗುರುಗಳ ಸಮಾಧಿಯ ದರ್ಶನ ಪಡೆದು ಗೌರವ ಸಲ್ಲಿಸಿದ್ದರು.
ಗುರುಗಳ ಜೊತೆ ನಡೆಸಿದ್ದ ಸಂವಾದವು ಅಸ್ಪೃಶ್ಯತೆ ನಿವಾರಣೆಯ ಹೋರಾಟವನ್ನು ತೀವ್ರಗೊಳಿಸಲು ಗಾಂಧೀಜಿಗೆ ಪ್ರೇರಣೆಯಾಯಿತು. ಬಳಿಕ ಅವರು ತಮ್ಮ ಸಂಪದಕತ್ವದ ಪತ್ರಿಕೆ 'ಯಂಗ್ ಇಂಡಿಯಾ'ದ ಹೆಸರನ್ನು 'ಹರಿಜನ' ಎಂದು ಬದಲಾಯಿಸಿದರು. ದಮನಿತರ ಏಳಿಗೆಯ ಕಡೆಗೆ ಹೆಚ್ಚು ಗಮನ ಹರಿಸಿದ್ದರು.
(ಆಧಾರ: ಬಾಬು ಶಿವ ಪೂಜಾರಿ ಅವರ ‘ಶ್ರೀನಾರಾಯಣ ಗುರು ವಿಜಯದರ್ಶನ’ ಮತ್ತು ಇತರ ಮೂಲಗಳಿಂದ)
ನಾರಾಯಣ ಗುರು ಮಹಾಸಮಾಧಿಯ ನೆನಪು
1888ರಲ್ಲಿ ಅರವಿಪುರಂನಲ್ಲಿ ಶಿವಪ್ರತಿಷ್ಠೆ ನೆರವೇರಿಸಿದ ನಾರಾಯಣ ಗುರುಗಳು ಮಹಾಘನಿ ಸಸಿಯನ್ನು ನೆಟ್ಟು ‘ಈ ಮರ ಹೂ ಬಿಡುವಾಗ....’ ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದ್ದರು. 1928ರಲ್ಲಿ ಆ ಮರ ಹೂ ಬಿಟ್ಟಿತು. ಅದೇ ವರ್ಷ ಗುರುಗಳು ಸಮಾಧಿಯಾದರು.
ನಟರಾಜ ಗುರುಗಳು 1928ರಲ್ಲಿ ವಿದೇಶ ಪರ್ಯಾಟಣೆಗೆ ಹೊರಟಾಗ ‘ಮರಳುವುದು ಯಾವಾಗ’ ಎಂದು ನಾರಾಯಣ ಗುರುಗಳು ಕೇಳಿದರು. ನಟರಾಜ ಗುರುಗಳು ‘8 ತಿಂಗಳು ಕಳೆದು’ ಎಂದು ಹೇಳಿದ್ದರು. ಆಗ ನಾರಾಯಣ ಗುರುಗಳು ಕೈ ಎತ್ತಿ ನಾಲ್ಕು ಬೆರಳುಗಳನ್ನು ತೋರಿಸಿ ‘ಇಲ್ಲ ನಾಲ್ವೇ ತಿಂಗಳು’ ಎಂದು ಹೇಳಿದರು. ನಾಲ್ಕು ತಿಂಗಳು ಪೂರ್ತಿಯಾಗುವ ದಿನವೇ ಗುರುಗಳು ಸಮಾಧಿಯಾದರು. ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಧರ್ಮತೀರ್ಥರಲ್ಲಿ ಮಾತಾಡುತ್ತಿದ್ದ ಸಂದರ್ಭದಲ್ಲಿ ನಾರಾಯಣಗುರುಗಳು ‘ಮುಂದೆ ಪ್ರತಿವರ್ಷ ಕನ್ಯಾ ಮಾಸದ 5ರಂದು ಅನ್ನದಾನ ನಡೆಸಬೇಕು’ ಎಂದು ಹೇಳಿದ್ದರು. ಅದೇ ದಿನ ಗುರುಗಳು ಸಮಾಧಿಯಾದರು.
1928 ಸೆಪ್ಟೆಂಬರ್ 20ರಂದು ಬೆಳಗ್ಗಿನ ಪೂಜೆಯ ನಂತರ ಮಠದ ಸನ್ಯಾಸಿಗಳು ಬ್ರಹ್ಮಚಾರಿಗಳು ಭಕ್ತರು ಗುರುಗಳ ದರ್ಶನಕ್ಕಾಗಿ ತೆರಳಿದ್ದರು. ಮೌನದಿಂದಲೇ ಎಲ್ಲರನ್ನು ಕಂಡು. ‘ನಮಗೆ ಇಂದು ತುಂಬಾ ಶಾಂತಿಯ ಅನುಭವವಾಗುತ್ತಿದೆ’ ಎಂದರು. ಬೆಳಿಗ್ಗೆ ತುಂತುರು ಮಳೆ ಪ್ರಾರಂಭವಾಯಿತು. ಮಧ್ಯಾಹ್ನ ಹೊತ್ತಿಗೆ ಮಳೆ ನಿಲ್ಲುತ್ತಿದ್ದಂತೆ ಎಲ್ಲಾ ಸನ್ಯಾಸಿಗಳು ಮತ್ತು ಭಕ್ತವೃಂದ ಮಧ್ಯಾಹ್ನದ ಊಟ ಮುಗಿಸಿ ಗುರುಗಳ ಬಳಿ ತೆರಳಿದ್ದರು. ಗುರುಗಳ ಶಿಷ್ಯರಲ್ಲೊಬ್ಬರಾದ ವಿದ್ಯಾನಂದ ಸ್ವಾಮಿಗಳು ಯೋಗವಾಸಿಷ್ಠ ಗ್ರಂಥದ ಪಾರಾಯಣ ಮಾಡುತ್ತಿದ್ದರು. ಅದರ ಜೀವನ್ಮುಕ್ತಿ ಪ್ರಕಾರವನ್ನು ಪಠಿಸುತ್ತಿದ್ದಂತೆಯೇ ಮಲಗಿದ್ದ ಗುರುಗಳು ಎದ್ದು ಕುಳಿತು ಎಲ್ಲರನ್ನು ಮತ್ತೆ ಕಣ್ಣುಂಬಿ ನೋಡಿ ಧ್ಯಾನ ನಿಷ್ಠರಾದರು.
ಭಕ್ತ ಸಮೂಹ ದೈವ ದಶಕದ ಶ್ಲೋಕಗಳನ್ನು ಏಕಕಂಠವಾಗಿ ಹಾಡಿದರು. ಕೊನೆಯ ಚರಣ ಬರುವಾಗ ಗುರುಗಳು ಮಹಾಸಮಾಧಿ ಪ್ರಾಪ್ತಿ ಹೊಂದಿದರು.
‘ಮುಂದಿನ ಪೀಳಿಗೆಗೆ ಪ್ರೇರಣಯಾಗಲಿ’
ಜನರ ನಡುವೆ ಪ್ರೀತಿ ವಾತ್ಸಲ್ಯ ಸಹೋದರತೆ ಸಾಮರಸ್ಯ ಸಮಾನತೆ ಮೂಡಬೇಕು. ಜಾತಿ ಮತ ಧರ್ಮಗಳ ಕಚ್ಚಾಟ ಕೊನೆಯಾಗಬೇಕಿದೆ. ಇದಕ್ಕಾಗಿ ಗಾಂಧೀಜಿ ಮತ್ತು ನಾರಾಯಣ ಗುರುಗಳ ನಡುವಿನ ಸಂವಾದದಿಂದ ಇಂದಿನ ಹಾಗೂ ಮುಂದಿನ ಪೀಳಿಗೆ ಪ್ರೇರಣೆ ಪಡೆಯಬೇಕು ಎಂಬ ಉದ್ದೇಶದಿಂದ ಗಾಂಧೀಜಿ– ನಾರಾಯಣ ಗುರು ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ.
ಇನ್ನು ಮುಂದೆ ಬರುವ ವಿದ್ಯಮಾನಗಳಿಗೆ ನಾರಾಯಣ ಗುರುಗಳ ಸಿದ್ಧಾಂತವೇ ಔಷಧ ಎಂಬ ಮಾತನ್ನು ಪೋಪ್ ಲಿಯೊ ಕೂಡ ಹೇಳಿದ್ದಾರೆ. ವಿದ್ಯಾರ್ಥಿಗಳು ನಾರಾಯಣ ಗುರು ಹಾಗೂ ಮಾಹತ್ಮ ಗಾಂಧೀಜಿಯ ಚಿಂತನೆಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂಬ ಕಾರಣಕ್ಕೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
– ವಿಖ್ಯಾತಾನಂದ ಸ್ವಾಮೀಜಿ, ಪೀಠಾಧಿಪತಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠ
‘ಜಾತಿ ಭೇದ ಮತದ್ವೇಷವಿಲ್ಲದೆಸರ್ವರೂ ಸಹೋದರತ್ವದಲ್ಲಿ ಬಾಳುವಮಾತೃಕಸ್ಥಾನವಿದು’ — ಅರವಿಪುರಂನಲ್ಲಿ ಸ್ಥಾಪಿಸಿದ ಪ್ರಥಮ ದೇವಸ್ಥಾನದ ಗೋಡೆಯಲ್ಲಿ ನಾರಾಯಣ ಗುರು ಬರೆಸಿದ್ದ ವಾಕ್ಯ
__________________
‘ಈ ಸರ್ವಧರ್ಮ ಸಮ್ಮೇಳನವಾದಿಸಲಿಕ್ಕಲ್ಲ…ವಾದಿಸಿ ಜಯಿಸಲಿಕ್ಕಲ್ಲ…ತಿಳಿಯಲು ಮತ್ತು ತಿಳಿಸಲು’ — ತಮ್ಮ ನೇತೃತ್ವದಲ್ಲಿ ಜರಗಿದಅಲುವ ಅದ್ವೈತ ಆಶ್ರಮದ ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಬರೆಸಿದ್ದ ನಾರಾಯಣ ಗುರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.