ADVERTISEMENT

‘ಮನ ಗೆಲ್ಲುವುದು ಕಷ್ಟ– ಭೀತಿ ಹುಟ್ಟಿಸುವುದು ಸುಲಭ‘

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:46 IST
Last Updated 16 ಆಗಸ್ಟ್ 2022, 4:46 IST
ಕಾರ್ಯಕ್ರಮದಲ್ಲಿ ಉದಯ್‌ ಕುಮಾರ್‌ ಎಂ.ಎ. ಮಾತನಾಡಿದರು. ಇಬ್ರಾಹಿಂ ಕೋಡಿಜಾಲ್‌, ಎ.ಸದಾನಂದ ಶೆಟ್ಟಿ, ಕಿರಣ್‌ ಬುಡ್ಲೆ ಗುತ್ತು, ಬಿ.ಪ್ರಭಾಕರ ಶ್ರಿಯಾನ್‌ ಹಾಗೂ ಇಸ್ಮಾಯಿಲ್ ಎನ್‌ ಇದ್ದಾರೆ– ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಉದಯ್‌ ಕುಮಾರ್‌ ಎಂ.ಎ. ಮಾತನಾಡಿದರು. ಇಬ್ರಾಹಿಂ ಕೋಡಿಜಾಲ್‌, ಎ.ಸದಾನಂದ ಶೆಟ್ಟಿ, ಕಿರಣ್‌ ಬುಡ್ಲೆ ಗುತ್ತು, ಬಿ.ಪ್ರಭಾಕರ ಶ್ರಿಯಾನ್‌ ಹಾಗೂ ಇಸ್ಮಾಯಿಲ್ ಎನ್‌ ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ‘ಇನ್ನೊಬ್ಬರ ಮನಸ್ಸನ್ನು ಗೆಲ್ಲುವುದು ಕಷ್ಟ, ಭಯ ಹುಟ್ಟಿಸುವುದು ಸುಲಭ. ಆದರೆ ಸಮುದಾಯಗಳ ನಡುವೆ ಪ್ರೀತಿ ಹುಟ್ಟಿಸುವ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವ ಬಗೆಯನ್ನು ಮಹಾತ್ಮ ಗಾಂಧಿ ತೋರಿಸಿಕೊಟ್ಟಿದ್ದರು.ಅವರಂತೆ ದ್ವೇಷವನ್ನು ಗೆಲ್ಲುವುದು ಎಲ್ಲರಿಗೂ ಸಾಧ್ಯವಾದರೆ ಜಗತ್ತಿನ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತದೆ’ ಎಂದು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉದಯ್‌ ಕುಮಾರ್‌ ಎಂ.ಎ. ಅಬಿಪ್ರಾಯಪಟ್ಟರು.

ಮಹಾತ್ಮ ಗಾಂಧಿ ಪ್ರತಿಷ್ಠಾನವು ಸೋಮವಾರ ಏರ್ಪಡಿಸಿದ್ದ ‘ಸ್ವಾತಂತ್ರ್ಯೋತ್ಸವ 75’ ಕಾರ್ಯಕ್ರಮದ ಅಂಗವಾಗಿ ಅವರು ಗಾಂಧಿ ‘ಚಿಂತನೆಯಿಂದ ಯುದ್ಧರಹಿತ ಸಮಾಜ’ ಕುರಿತು ಮಾತನಾಡಿದರು.

‘ಹಿರಿಯರ ತ್ಯಾಗ ಬಲಿದಾನವನ್ನು ಮರೆತಿದ್ದೇವೆ. ಹಾಗಾಗಿ ಸ್ವಾತಂತ್ರ್ಯದ ಮಹತ್ವ ನಮಗೆ ತಿಳಿಯುತ್ತಿಲ್ಲ. ಆರೋಗ್ಯದ ಮಹತ್ವ ಮನದಟ್ಟಾಗಬೇಕಾದರೆ ಅನಾರೋಗ್ಯವನ್ನು ಎದುರಿಸಬೇಕು. ಇತ್ತೀಚೆಗೆ ದಾರ್ಶನಿಕರ ಸಂದೇಶಗಳಿಗಿಂತ ಅವರ ಪ್ರತಿಮೆಗಳೇ ಹೆಚ್ಚಾಗಿ ಕಾಣಿಸುತ್ತಿವೆ. ನಮಗೆ ಬುದ್ಧಿ ಬರಬೇಕಾದರೆ ಪ್ರತಿಮೆಗಳೇ ಮಾತನಾಡಬೇಕೋ ಏನೋ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸುಳ್ಳು ಹೇಳುವುದಿಲ್ಲ ಎಂಬ ವ್ರತವನ್ನು ಒಂದು ದಿನ ಪಾಲಿಸಲು ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ. ಹೇಳಿದ್ದನ್ನೇ ಬದುಕಿ ತೋರಿಸಿದ್ದ ಗಾಂಧಿಜಿಯ ಮಹತ್ವ ಏನೆಂಬುದು ಆಗ ತಿಳಿಯುತ್ತದೆ. ಯಾವ ಹುದ್ದೆಗಳೂ ಇಲ್ಲದ ಒಬ್ಬ ಅರೆ ಬೆತ್ತಲೆ ಪಕೀರನ ಮಾತನ್ನಾಲಿಸಲು ಲಕ್ಷಾಂತರ ಜನ ಸೇರುವುದು, ಅವರಮಾತಿಗೆ ಮರುಳಾಗಿ ಸ್ವಾತಂತ್ರ್ಯ ಸಮರಕ್ಕೆ ಸರ್ವಸ್ವವನ್ನೂ ತ್ಯಾಗ ಮಾಡುವುದು ಸಾಮಾನ್ಯವೇ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

‘ಕೋವಿಡ್ ಪರಸ್ಪರ ಹರಡುತ್ತದೆ ಎಂಬ ಕಾರಣಕ್ಕೆ ಅದರ ಬಗ್ಗೆ ಎಲ್ಲರೂ ಎಚ್ಚರ ವಹಿಸಿದ್ದರು. ಅದರ ಹಿಂದೆ ಇದ್ದುದು ಎಲ್ಲಾದರೂ ಈ ಕಾಯಿಲೆ ನನಗೆ ಅಂಟಿಕೊಳ್ಳುತ್ತದೋ ಎಂಬ ಸ್ವಾರ್ಥ. ಬಡತನ, ದಾರಿದ್ರ್ಯ ಅನಕ್ಷರತೆಗಳೂ ಇಂತಹದ್ದೇ ಕಾಯಿಲೆಗಳು. ಇವುಗಳನ್ನು ಓಡಿಸಬೇಕಿದ್ದರೆ ಎಲ್ಲರ ಸಂಘಟಿತ ಪ್ರಯತ್ನ ಅಗತ್ಯ’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಉಪಾಧ್ಯಕ್ಷರಾದ ಬಿ.ಪ್ರಭಾಕರ ಶ್ರಿಯಾನ್‌, ಇಬ್ರಾಹಿಂ ಕೋಡಿಜಾಲ್‌, ಕಾರ್ಯದರ್ಶಿ ಎನ್‌.ಇಸ್ಮಾಯಿಲ್‌, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಕಿರಣ್‌್ ಬುಡ್ಡೆಗುತ್ತು ಇದ್ದರು.

ಪ್ರತಿಷ್ಠಾನದ ವತಿಯಿಂದ ಬಾವುಟಗುಡ್ಡೆಯ ಟ್ಯಾಗೋರ್‌ ಉದ್ಯಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.