ADVERTISEMENT

ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಗಣೇಶೋತ್ಸವ: ಬೆಂಬಲ ಕೋರಿ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 22:18 IST
Last Updated 6 ಸೆಪ್ಟೆಂಬರ್ 2023, 22:18 IST
   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗಣೇಶೋತ್ಸವ ಆಚರಿಸುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಸೆ.2ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಬಿಜೆಪಿ ಕಾರ್ಯಕರ್ತರ ಜತೆ ತೆರಳಿ, ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ವಿವಿ ಪ್ರಭಾರಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರಿಗೆ ಮನವಿ ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ಪ್ರೊ. ಜಯರಾಜ್ ಅಮೀನ್ ಅವರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಗಣೇಶೋತ್ಸವ ಆಚರಣೆ ಬಗ್ಗೆ ನಿರ್ದೇಶನ ನೀಡುವಂತೆ ವಿನಂತಿಸಿದ್ದರು.

ADVERTISEMENT

‘ವಿವಿಯಲ್ಲಿ 40 ವರ್ಷಕ್ಕಿಂತ ಮೊದಲಿನಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಬೇರೆ ಬೇರೆ ಕಡೆಗಳಲ್ಲಿ ಮಾಡುತ್ತಿದ್ದ ಗಣೇಶೋತ್ಸವವನ್ನು ಕೋವಿಡ್ ಸಂದರ್ಭದಲ್ಲಿ 2021ರಲ್ಲಿ ಒಂದೇ ಕಡೆ ಆಚರಿಸಲಾಗಿತ್ತು. ಇದಕ್ಕೆ ವಿವಿಯಿಂದಲೇ ₹1.52 ಲಕ್ಷ ವೆಚ್ಚ ಮಾಡಲಾಗಿದೆ. 2022ರಲ್ಲಿ ವಿದ್ಯಾರ್ಥಿ ಕ್ಷೇಮಪಾಲಾ ನಿರ್ದೇಶನಾಲಯದ ಮೂಲಕ ಆಯೋಜಿಸಿ ₹1.97 ಲಕ್ಷ ವೆಚ್ಚ ಮಾಡಲಾಗಿದೆ. ವಿವಿ ವತಿಯಿಂದ ಮಾಡಿದ ವೆಚ್ಚಕ್ಕೆ ಆಡಿಟ್ ಆಕ್ಷೇಪಣೆ ಬಂದಿದ್ದು, ಗಣೇಶೋತ್ಸವ ಆಚರಣೆಗೆ ಕಚೇರಿ ಕೈಪಿಡಿ ನಿಯಮದಲ್ಲಿ ಅವಕಾಶ ಇಲ್ಲ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಈ ಬಾರಿ ಗಣೇಶೋತ್ಸವ ಆಚರಣೆಗೆ ₹ 2ಲಕ್ಷ ಬಿಡುಗಡೆ ಮಾಡುವಂತೆ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದಿಂದ ಪತ್ರ ಬಂದಿದೆ. ಮಂಗಳಾ ಸಭಾಂಗಣದಲ್ಲಿ ಗಣೇಶೋತ್ಸವ ನಡೆಸಬೇಕೆಂದು ವಿದ್ಯಾರ್ಥಿಗಳು ಎಂದು ಹೆಸರಿಸಿದ ಪತ್ರ ಬಂದಿದೆ. ಈ ನಡುವೆ ಸೆ.2ರಂದು ಶಾಸಕ ವೇದವ್ಯಾಸ ಕಾಮತ್ ಅವರು ಸುಮಾರು ಎಂಟು ಜನರ ಜತೆಗೆ ಬಂದು ವಿವಿ ವತಿಯಿಂದ ಮಂಗಳಾ ಸಭಾಂಗಣದಲ್ಲಿ ಗಣೇಶೋತ್ಸವ ಆಚರಿಸಬೇಕೆಂದು ಆಗ್ರಹಿಸಿ ಸುಮಾರು ಎರಡು ತಾಸು ಚರ್ಚಿಸಿ ನನ್ನ ಮೇಲೆ ಒತ್ತಡ ತಂದಿದ್ದಾರೆ. ಒಪ್ಪಿಗೆ ನೀಡದಿದ್ದಲ್ಲಿ ಪತ್ರಿಭಟನೆ, ಮಾಧ್ಯಮ ಗೋಷ್ಠಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಗಮನಿಸಿ, ಯಾವ ಸ್ಥಳದಲ್ಲಿ ನಡೆಸುವ ಬಗ್ಗೆ ಮತ್ತು ಆರ್ಥಿಕ ಬೆಂಬಲದ ಬಗ್ಗೆ ಸೂಚನೆ ನೀಡಬೇಕು’ ಎಂದು ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

ಬುಧವಾರ ಪ್ರೊ. ಜಯರಾಜ್ ಅಮೀನ್ ಅವರು ಪತ್ರಿಕಾ ಹೇಳಿಕೆ ನೀಡಿ, ‘ವಿವಿ ಆವರಣದಲ್ಲಿ ಗಣೇಶೋತ್ಸವ ನಡೆಸಲು ಯಾವುದೇ ನಿರಾಕರಣೆ, ವಿರೋಧ ಇಲ್ಲ. ಈ ಹಿಂದಿನಂತೆಯೇ ಈ ವರ್ಷವೂ ವಿವಿಯ ಆವರಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತದೆ’ ಎಂದು ತಿಳಿಸಿದ್ದಾರೆ.

‘ಸ್ಥಳೀಯ ಶಾಸಕರು ಬಿಜೆಪಿ ಮುಖಂಡರ ಜತೆ ಸೇರಿ ಗಣೇಶೋತ್ಸವಕ್ಕೆ ಹಣ ಬಿಡುಗಡೆ ಮಾಡುವಂತೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗೆ ಮನವಿ ನೀಡಿದ್ದಾರೆ. ಸತತ ಎರಡು ತಾಸು ಕುಲಪತಿ ಅವರನ್ನು ಅವರದೇ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಈ ನಡೆ ಸರಿಯಲ್ಲ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.