ಮಂಗಳೂರು: ತುಳುನಾಡಿನಲ್ಲಿ ಆಟಿ ತಿಂಗಳು ಕಳೆದು, ಗೌರಿ–ಗಣೇಶ ಹಬ್ಬ ಬರುತ್ತಿದ್ದಂತೆಯೇ ಮಾರುಕಟ್ಟೆಗಳು ಮತ್ತೆ ಕಳೆಗಟ್ಟಿವೆ. ಚೌತಿ ಹಬ್ಬದ ಪ್ರಯುಕ್ತ ಹೂವು ಹಣ್ಣುಗಳ ಮಾರಾಟದ ಭರಾಟೆ ಜೋರಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂವಿನ ದರವು ತುಸು ಅಗ್ಗ ಇದೆ.
ಹಾಸನ, ಭದ್ರಾವತಿ, ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸೇವಂತಿ ಹಾಗೂ ಚೆಂಡು ಹೂವುಗಳು ಭಾರಿ ಪ್ರಮಾಣದಲ್ಲಿ ನಗರವನ್ನು ತಲುಪಿವೆ. ಬೇರೆ ಜಿಲ್ಲೆಗಳ ಹೂವಿನ ವರ್ತಕರೂ ನಗರದಲ್ಲಿ ಹಬ್ಬದ ವ್ಯಾಪಾರಕ್ಕಾಗಿ ಬೀಡುಬಿಟ್ಟಿದ್ದಾರೆ. ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ, ಜನ ಜಂಗುಳಿ ಜಾಸ್ತಿ ಇರುವ ವೃತ್ತಗಳ ಬಳಿ, ಪಾದಚಾರಿ ಮಾರ್ಗಗಳಲ್ಲಿ ಸೇವಂತಿಗೆ ಹೂಗಳನ್ನು ರಾಶಿ ಹಾಕಿಕೊಂಡು ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ಹಳದಿ, ಬಿಳಿ, ಕೆಂಬಣ್ಣ ಸೇವಂತಿಗೆ, ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ ಮಾಲೆಗಳಿಂದಾಗಿ ನಗರದ ಗಡಿಯಾರ ವೃತ್ತ, ಕೇಂದ್ರೀಯ ಮಾರುಕಟ್ಟೆ, ಲಾಲ್‌ಬಾಗ್–ಬಿಜೈ ಮಾರ್ಗ, ಉರ್ವ ಮಾರುಕಟ್ಟೆ ಮೊದಲಾದ ಪ್ರದೇಶಗಳು ಹೊಸ ಕಳೆ ಪಡೆದಿವೆ.
ಸೇವಂತಿಗೆ ಹೂವು ಮಾರಿಗೆ ₹ 100ರಿಂದ ₹ 150ರವರೆಗೆ ಹಾಗೂ ಮೊಳಕ್ಕೆ ₹ 50ರಂತೆ ಮಾರಾಟವಾಗುತ್ತಿದೆ. ಚೆಂಡು ಹೂವಿನ ಮಾಲೆಗೆ ₹ 200 ದರವಿದೆ. ಜಾಜಿ ಮಲ್ಲಿಗೆ ಹೂವಿನ ಮಾರು ₹ 200ರಿಂದ ₹ 250ರವರೆಗೆ ಮಾರಾಟವಾಗುತ್ತಿದೆ.
‘ನಾವು ಹಾಸನದಿಂದ ಹೂವು ತಂದು ಮಾರುತ್ತಿದ್ದೇವೆ. ಇಲ್ಲಿ ನಮಗೆ ಪ್ರತಿ ವರ್ಷವೂ ವ್ಯಾಪಾರ ಚೆನ್ನಾಗಿ ಆಗುತ್ತದೆ. ಈ ಸಲದ ಹೂವಿನ ವ್ಯಾಪಾರ ಈಗಷ್ಟೇ ಶುರುವಾಗಿದೆ. ನಾಳೆ ಹಾಗೂ ನಾಡಿದ್ದು ವ್ಯಾಪಾರದ ಚೆನ್ನಾಗಿ ಆಗುವ ನಿರೀಕ್ಷೆ ಇದೆ’ ಎಂದು ಹಾಸನದ ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಚೌತಿ ಹಬ್ಬದಲ್ಲಿ ವಿಶೇಷವಾಗಿ ಬಳಕೆಯಾಗುವ ಲಾವಂಚ, ಶುಂಟಿ ಗಿಡಗಳು ತಲಾ ₹ 20ರಂತೆ ಹಾಗೂ ತುಳಸಿ ಮಾಲೆ ಮೊಳಕ್ಕೆ ₹ 50ರಂತೆ ಮಾರಾಟವಾಗುತ್ತಿವೆ. ಹಿಂಗಾರವೊಂದಕ್ಕೆ ₹ 250 ದರ ಇದೆ.
ಹಣ್ಣುಗಳು ತುಸು ದುಬಾರಿ ಇವೆ. ಏಲಕ್ಕಿ ಬಾಳೆ ಕೆ.ಜಿ.ಗೆ ₹120, ನೇಂದ್ರ ಕೆ.ಜಿ.ಗೆ ₹ 100ರಂತೆ ಮಾರಾಟವಾಗುತ್ತಿದೆ. ಸೇಬು ಪ್ರತಿ ಕೆ.ಜಿ.ಗೆ ₹200ರಿಂದ ₹ 240ರವರೆಗೆ ದರ ಇದೆ. ದಾಳಿಂಬೆ ಕೆ.ಜಿ.ಗೆ ₹ 240 ಹಾಗೂ ಮುಸುಂಬಿಗೆ ₹ 90 ದರ ಇದೆ.
ಹಾಲುಬೆಂಡೆಗೆ ಕೆ.ಜಿ.ಗೆ ₹350: ಊರಿನ ತರಕಾರಿಗಳಿಗೆ ದುಬಾರಿ ದರ ಇದೆ. ಹಾಲು ಬೆಂಡೆ ಕೆ.ಜಿ.ಗೆ ₹300ರಿಂದ ₹350 ದರ ಇದೆ. ಊರಿನ ಮುಳ್ಳುಸೌತೆ ಕೆ.ಜಿ.ಗೆ ₹ 180, ಅಲಸಂದೆ ₹80 ಹಗೂ ಹಾಗಲಕಾಯಿ ₹ 100ರಂತೆ ಮಾರಾಟವಾಗುತ್ತಿದೆ. ಹೊರ ಜಿಲ್ಲೆಗಳಿಂದ ತರುವ ತರಕಾರಿಗಳ ದರದಲ್ಲಿ ಭಾರಿ ಹೆಚ್ಚಳವಾಗಿಲ್ಲ.
ಎಲ್ಲೆಡೆ ಕಬ್ಬಿನ ಜಲ್ಲೆಗಳು...
ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪನನ್ನು ಪೂಜಿಸುವ ಮಂಟಪದ ಅಲಂಕಾರಕ್ಕೆ ಹಾಗೂ ಪಂಚ ಕಜ್ಜಾಯಕ್ಕೆ ಬಳಸುವ ಕಬ್ಬಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕಬ್ಬಿನ ಒಂದು ಜಲ್ಲೆ ₹ 70ರಂತೆ ಮಾರಾಟವಾಗುತ್ತಿದೆ. 10 ಕಬ್ಬಿನ ಜಲ್ಲೆಗಳಿರುವ ಕಟ್ಟು ₹ 400ರಂತೆ ಮಾರಾಟ ವಾಗುತ್ತಿದೆ. ಹಿಂದೆಲ್ಲ ಮಂಗಳೂರಿನ ಗ್ರಾಮಾಂತರ ಪ್ರದೇಶಗಳು ಕಿನ್ನಿಗೋಳಿಯಲ್ಲೂ ಕಬ್ಬು ಬೆಳೆಯುತ್ತಿದ್ದರು. ಆದರೆ ಈಚಿನ ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಕಬ್ಬು ಬೆಳೆಯುವ ಪ್ರಮಾಣ ತೀರಾ ಕಡಿಮೆಯಾಗಿದೆ. ‘ನಾವು ಕುಂದಾಪುರ ಕಡೆಯಿಂದ ಕಬ್ಬನ್ನು ತರಿಸಿದ್ದೇವೆ. ಒಂದು ಕಟ್ಟು ಕಬ್ಬಿಗೆ ₹350ರಂತೆ ನೀಡಿ ತರುತ್ತೇವೆ. ಸಾಗಣೆ ವೆಚ್ಚ ತೆಗೆದರೆ ನಮಗೆ ಹೆಚ್ಚೇನೂ ಲಾಭ ಉಳಿಯದು’ ಎಂದು ವರ್ತಕ ಶಕ್ತಿನಗರದ ಪದ್ಮನಾಭ ‘ಪ್ರಜಾವಾಣಿ’ಗೆ ತಿಳಿಸಿದರು.
ತರಕಾರಿ ದರ (ಪ್ರತಿ ಕೆ.ಜಿ.ಗೆ ₹)
ಬೆಂಡೆ;60–70 ಬೀಟ್ ರೂಟ್;40–50 ಹೀರೆಕಾಯಿ;60–70 ಬೀನ್ಸ್;70–80 ಅಲಸಂದೆ;60–80 ನುಗ್ಗೆ;60–80 ಕುಂಬಳಕಾಯಿ;20–30 ಟೊಮ್ಯಾಟೊ;40–50 ಸಾಂಬಾರ್ ಸೌತೆ;40–50 ಮುಳ್ಳುಸೌತೆ;30–45 ಆಲುಗಡ್ಡೆ;26–28
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.