ಎಫ್‌ಐಆರ್
ಮಂಗಳೂರು: ಗಣೇಶ ಮಂಟಪದ ಎದುರು ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಸಿದ್ದಲ್ಲದೆ, ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಪುಂಜಾಲಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಯವರು ಬುಧವಾರ ರಾತ್ರಿ 10.45 ರ ವೇಳೆಗೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿದ್ದರು. ಇದನ್ನು ಗಮನಿಸಿದ ಪುಂಜಾಲಕಟ್ಟೆ ಠಾಣೆಯ ಪಿಎಸ್ ಐ, ಧ್ವನಿವರ್ಧಕ ಬಳಕೆಯ ಬಗ್ಗೆ ಜಾರಿಯಲ್ಲಿರುವ ಕಾನೂನು ಪಾಲಿಸುವಂತೆ ಮತ್ತು ಧ್ವನಿವರ್ಧಕ ಸ್ಥಗಿತಗೊಳಿಸುವಂತೆ ತಿಳಿಸಿದ್ದು, ಸಂಘಟಕರು ಅದನ್ನು ಪಾಲನೆ ಮಾಡಿದ್ದರು.
ಆದರೆ ಪುನಃ ರಾತ್ರಿ ಸುಮಾರು 11.50ರ ವೇಳೆಗೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಕಂಡು ಬಂದಿದ್ದು, ಗಣೇಶೋತ್ಸವ ಸಮಿತಿಯವರನ್ನು ಪ್ರಶ್ನಿಸಿದಾಗ, ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಪುನೀತ್ ಮಡಂತ್ಯಾರು, ತಾರಾನಾಥ ಕಜಕ್ಕಾರು, ಗುರು ಮಡಂತ್ಯಾರು, ನಾಟಕ ಆಯೋಜಕರು ಹಾಗೂ 10-15 ಜನರು ಗುಂಪಿನಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರಿಗೆ ಧಿಕ್ಕಾರ ಕೂಗಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಯೋಜಕರಿಗೆ ನೀಡಿದ್ದ ತಿಳಿವಳಿಕೆ ಪತ್ರದ ಷರತ್ತನ್ನು ಉಲ್ಲಂಘಿಸಿ, ಧ್ವನಿವರ್ಧಕ ಬಳಸಿದ ಬಗ್ಗೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.