
ಆದೇಶ
ಮಂಗಳೂರು: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಪ್ರಕರಣವೊಂದರ ಆರೋಪಿಯನ್ನು ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
‘ಆರೋಪಿಯು 2025ರ ಜುಲೈ ಎರಡನೇ ವಾರದಲ್ಲಿ ಬಾಲಕಿಯನ್ನು ಬೈಕ್‌ನಲ್ಲಿ ಕಾಪು ಕಿನಾರೆಗೆ ಕರೆದೊಯ್ದು ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ ಮತ್ತು ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದ’ ಎಂದು ಮೂಲ್ಕಿ ಠಾಣೆಯಲ್ಲಿ 2025ರ ಜುಲೈ 23ರಂದು ದೂರು ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಅದೇ ದಿನ ಬಂಧಿಸಿದ್ದರು. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆಕೆ ಗರ್ಭಿಣಿಯಾಗಿದ್ದು ಗೊತ್ತಾಗಿತ್ತು. ಮೂಲ್ಕಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯ, ನೊಂದ ಬಾಲಕಿ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ದಾಖಲಿಸಿತ್ತು. ಪ್ರಾಸಿಕ್ಯೂಷನ್ ಪರವಾಗಿ 8 ಮಂದಿ ಸಾಕ್ಷ್ಯ ನುಡಿದಿದ್ದರು. 26 ದಾಖಲೆಗಳನ್ನು ಹಾಗೂ ಒಂದು ಮೊಬೈಲ್‌ನ್ನು ನಿಶಾನೆಯಾಗಿ ಗುರುತಿಸಲಾಗಿತ್ತು. ಸಂತ್ರಸ್ತ ಬಾಲಕಿ ಹಾಗೂ ಪೋಷಕರೂ ಸಾಕ್ಷ್ಯ ಹೇಳಿದ್ದರು.
ಈ ಪ್ರಕರಣದಲ್ಲಿ ಆರೋಪವನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಾಧಾರಗಳ ಕೊರತೆ ಇದ್ದ ಕಾರಣಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಮಾನು ಅವರು ಆರೋಪಿಯನ್ನು ಖುಲಾಸೆಗೊಳಿಸಿ ಬುಧವಾರ ಈ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಯ ಪರವಾಗಿ ವಕೀಲ ಸುಕೇಶ್ ಕುಮಾರ್ ಶೆಟ್ಟಿ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.