ADVERTISEMENT

ಜಾಗತಿಕ ಭಂಡಾರಿ ಕ್ರೀಡಾ ಸಂಗಮ 29ರಂದು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 15:44 IST
Last Updated 27 ಜನವರಿ 2023, 15:44 IST
ಸುದ್ದಿಗೊಷ್ಠಿಯಲ್ಲಿ ಸತ್ಯರಂಜನ್‌ ಭಂಡಾರಿ ಮಾತನಾಡಿದರು. ನಿತಿನ್‌ ಭಂಡಾರಿ, ಕೃಷ್ಣಾನಂದ ಭಂಡಾರಿ ಕುತ್ತೆತ್ತೂರು, ನಿತ್ಯಾನಂದ ಭಂಡಾರಿ ತಲಪಾಡಿ, ನಿಶಾನ್‌ ಭಂಡಾರಿ ಇದ್ದರು– ಪ್ರಜಾವಾಣಿ ಚಿತ್ರ
ಸುದ್ದಿಗೊಷ್ಠಿಯಲ್ಲಿ ಸತ್ಯರಂಜನ್‌ ಭಂಡಾರಿ ಮಾತನಾಡಿದರು. ನಿತಿನ್‌ ಭಂಡಾರಿ, ಕೃಷ್ಣಾನಂದ ಭಂಡಾರಿ ಕುತ್ತೆತ್ತೂರು, ನಿತ್ಯಾನಂದ ಭಂಡಾರಿ ತಲಪಾಡಿ, ನಿಶಾನ್‌ ಭಂಡಾರಿ ಇದ್ದರು– ಪ್ರಜಾವಾಣಿ ಚಿತ್ರ   

ಮಂಗಳೂರು: ವಿಶ್ವ ಭಂಡಾರಿ ಸಮಾಜ ಸಂಘಟನೆಗಳ ಒಕ್ಕೂಟವಾದ ಭಂಡಾರಿ ಮಹಾಮಂಡಲ, ಭಂಡಾರಿ ಯುವ ವೇದಿಕೆ ಆಶ್ರಯದಲ್ಲಿ ಇದೇ 29ರಂದು ಇಲ್ಲಿನ ಅಡ್ಯಾರು ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ‘ಜಾಗತಿಕ ಭಂಡಾರಿ ಕ್ರೀಡಾ ಸಂಗಮ-2023’ ಏರ್ಪಡಿಸಲಾಗಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಕಾರ್ಯಕ್ರಮ ಸಂಘಟನಾ ಸಮಿತಿಯ ಗೌರವ ಸಲಹೆಗಾರ ಸತ್ಯರಂಜನ್‌ ಭಂಡಾರಿ, ‘ಜಾಗತಿಕ ಭಂಡಾರಿ ಕ್ರೀಡಾ ಸಂಗಮ ಭಂಡಾರಿ ಸಮಾಜ ಬಾಂಧವರಿಗಾಗಿ ಮಕ್ಕಳಿಂದ ಹಿರಿಯರವರೆಗೆ ಬಗೆಬಗೆಯ ಕ್ರೀಡೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಿದೆ. ವಧು-ವರ ಅನ್ವೇಷಣೆಗಾಗಿ ‘ಭಂಡಾರಿ ಪೊದು ಚಾವಡಿ’ ಕಾರ್ಯಕ್ರಮ ಮತ್ತು ಅಭಾ ಕಾರ್ಡ್‌ ನೋಂದನಿಯೂ ನಡೆಯಲಿದೆ’ ಎಂದರು.

‘ಭಂಡಾರಿ ಭಾಂಧವರ ಜಾತ್ರೆಯಂತೆ ಇದನ್ನು ಆಚರಿಸಲಿದ್ದೇವೆ. ವಿಭಿನ್ನ ಆಟಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಉತ್ತಮ ಉಡುಗೆ, ಉತ್ತಮ ಕೇಶವಿನ್ಯಾಸ 45 ವರ್ಷ ಮೇಲಿನವರಿಗೆ ‘ಉತ್ತಮ ದಂಪತಿ’ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕುದುರೆ ಸವಾರಿಯಂತಹ ವಿಶೇಷ ಆಕರ್ಷಣೆಗಳೂ ಇವೆ. ಬೆಳಗ್ಗೆ 8.30ರಿಂದ ಸಂಜೆ 6ರವರೆಗೆ ಎಡೆಬಿಡದೆ ಕಾರ್ಯಕ್ರಮಗಳು ನಡೆಯಲಿವೆ. 3 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಯುವ ವೇದಿಕೆಯ ಅಧ್ಯಕ್ಷ ನಿತ್ಯಾನಂದ ಭಂಡಾರಿ ತಲಪಾಡಿ, ‘ಬ್ಯಾಸ್ಕೆಟ್‌ಬಾಲ್‌ ಪಟು ಪ್ರಸ್ತಿಕ್‌ ಭಂಡಾರಿ ಬೆಳಿಗ್ಗೆ 8.30ಕ್ಕೆ ಕ್ರೀಡಾಜ್ಯೋತಿ ಬೆಳಗುವರು. ಭಂಡಾರಿ ಮಹಾಮಂಡಲದ ಕಾರ್ಯದರ್ಶಿ ಸತೀಶ್ ಭಂಡಾರಿ ಕಾಡಬೆಟ್ಟು ಧ್ವಜಾರೋಹಣ ನೆರವೇರಿಸುವರು. ಕರಾಟೆಪಟು ಭಕ್ತಿ ಎನ್‌ ಭಂಡಾರಿ ಪ್ರತಿಜ್ಞೆ ಬೋಧಿಸುವರು. ಬಾರ್ಕೂರು ಕಚ್ಚೂರು ನಾಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಮೇಯರ್‌ ಜಯಾನಂದ ಅಂಚನ್ ಮತ್ತಿತರರು ಭಾಗವಹಿಸುವರು’ ಎಂದರು.

‘ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಅಧ್ಯಕ್ಷತೆ ವಹಿಸುವರು. ಯುವಜನ ಸಬಲೀಕರಣ ಮತ್ತು ಕ್ರೀಡಾಸಚಿವ ಕೆ.ಸಿ.ನಾರಾಯಣ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್‌ ಕುಮಾರ್‌, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪುಜಾರಿ, ಶಾಸಕರಾದ ಡಾ.ವೈಭರತ್‌ ಶೆಟ್ಟಿ, ಡಿ.ವೇದವ್ಯಾಸ ಕಾಮತ್‌ ಕೆಪಿಸಿಸಿ ಪ್ರಧಾನ ಕಾರ್ಯದರ್ಶೀ ಮಿಥುನ್‌ ರೈ, ಬಾರ್ಕೂರು ಕಚ್ಚೂರು ನಾಗೇಶ್ವರ ದೇವಸ್ಥಾನದ ಮೊಕ್ತೇಸರ ಕಡಂದಲೆ ಸುರೇಶ್‌ ಭಂಡಾರಿ ಮತ್ತಿತರರು ಭಾಗವಹಿಸುವರು’ ಎಂದರು.

ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೃಷ್ಣಾನಂದ ಭಂಡಾರಿ ಕುತ್ತೆತ್ತೂರು, ಖಚಾಂಚಿ ನಿಶಾನ್ ಭಂಡಾರಿ ಮಂಗಳೂರು ಹಾಗೂ ಉಪಾಧ್ಯಕ್ಷ ನಿತಿನ್‌ ಭಂಡಾರಿ ಬಜಾಲ್, ಮೋಹಿತ್‌ ಭಂಡಾರಿ ಕಿನ್ನಿಗೋಳಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.