ಮಂಗಳೂರಿನಲ್ಲಿ ವಶಪಡಿಸಿಕೊಂಡ ಕ್ರೀಡಾ ಪರಿಕರಗಳನ್ನು ಡಿಸಿಪಿ ಎಚ್.ಎನ್.ಮಿಥುನ್ ಮಂಗಳವಾರ ಪ್ರದರ್ಶಿಸಿದರು. ಡಿಸಿಪಿ ಕೆ.ರವಿಶಂಕರ್, ಎಸಿಪಿ ಪ್ರತಾಪ್ ಸಿಂಗ್ ಥೋರಟ್, ಎಸಿಪಿ ವಿಜಯಕ್ರಾಂತಿ ಜೊತೆಯಲ್ಲಿದ್ದರು.
ಪ್ರಜಾವಾಣಿ ಚಿತ್ರ
ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಸಮೀಪದಿಂದ ಚಿನ್ನದ ವ್ಯಾಪಾರಿಯೊಬ್ಬರನ್ನು ಅಪಹರಿಸಿ, ಹೆದರಿಸಿ ಸುಮಾರು ₹35 ಲಕ್ಷ ಬೆಲೆಯ 350 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದ ಪ್ರಕರಣದ ಐವರು ಆರೋಪಿಗಳನ್ನು ಇಲ್ಲಿನ ಸಿಸಿಬಿ ಪೊಲೀಸರು ಪುಣೆಯಲ್ಲಿ ಸೋಮವಾರ ಬಂಧಿಸಿದ್ದಾರೆ.
ಈ ಬಗ್ಗೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್.ಎನ್, ‘ಚಿನ್ನದ ವ್ಯಾಪಾರಿ ಭಾನುದಾಸ ಹರಿ ಥೋರಟ್ ಇದೇ 13ರಂದು ಬೆಳಿಗ್ಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಹತ್ತಿರದ ಕೈರಳಿ ಹೋಟೆಲ್ ಬಳಿ ಆಟೊರಿಕ್ಷಾಕ್ಕಾಗಿ ಕಾಯುತ್ತಿದ್ದರು. ಆಗ ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ಬಂದ ಆರು ಮಂದಿ, ಥೋರಟ್ ಅವರನ್ನು ಮಾತನಾಡಿಸಿ, ತಮ್ಮನ್ನು ಕಸ್ಟಮ್ಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ‘ನಿಮ್ಮನ್ನು ವಿಚಾರಣೆ ಮಾಡಬೇಕಿದೆ. ನಮ್ಮೊಂದಿಗೆ ಬನ್ನಿ’ ಎಂದು ಥೋರಟ್ ಅವರನ್ನು ಗದರಿಸಿ, ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡರು. ಉತ್ತರ ಕನ್ನಡ ಜಿಲ್ಲೆಯ ಕುಮಟಾಕ್ಕೆ ಕರೆದೊಯ್ದು ಬೆದರಿಸಿ, ಆವರ ಬಳಿ ಇದ್ದ ಸುಮಾರು ₹35 ಲಕ್ಷ ಬೆಲೆಯ 350 ಗ್ರಾಂ ತೂಕದ ಬಂಗಾರದ ಗಟ್ಟಿಗಳನ್ನು ದರೋಡೆ ಮಾಡಿದ್ದರು‘ ಎಂದರು.
ಬಳಿಕ ಥೋರಟ್ ಅವರನ್ನು ಕುಮಟಾ ತಾಲೂಕಿನ ಶಿರಸಿ ಬಳಿಯ ಅಂತ್ರವಳ್ಳಿ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಥೋರಟ್ ಅವರು ಕುಮಟಾ ಠಾಣೆಗೆ ದೂರು ನೀಡಿದ್ದರು ಎಂದು ತಿಳಿಸಿದರು.
'ಕುಮಟಾ ಠಾಣೆಯಲ್ಲಿ ಈ ಬಗ್ಗೆ ದಾಖಲಾದ ಎಫ್.ಐ.ಆರ್ ಅನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆರೋಪಿಗಳ ಪತ್ತೆಗೆ ಸಿಸಿಬಿ ಮತ್ತು ಕೇಂದ್ರ ಉಪವಿಭಾಗದ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ವಶಕ್ಕೆ ಪಡೆಯಲಾಗಿದೆ. ಈ ಕೃತ್ಯ ನಡೆಸಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದು, ದೋಚಿದ್ದ ಚಿನ್ನವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ. ದರೋಡೆ ಮಾಡಿದ್ದ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆಯಲು ಕ್ರಮವಹಿಸಲಾಗಿದೆ' ಎಂದು ತಿಳಿಸಿದರು.
ಡಿಸಿಪಿ (ಅಪರಾಧ ಮತ್ತು ಸಂಚಾರ) ರವಿಶಂಕರ್ ಕೆ., ಎಸಿಪಿ (ಸೆಂಟ್ರಲ್) ಪ್ರತಾಪ್ ಸಿಂಗ್ ಥೋರಟ್, ಎಸಿಪಿ (ದಕ್ಷಿಣ) ವಿಜಯ ಕ್ರಾಂತಿ ಸುದ್ದಿಗೋಷ್ಠಿಯಲ್ಲಿದ್ದರು.
ಬ್ರಾಂಡ್ ಹೆಸರು ದುರ್ಬಳಕೆ: ಕ್ರೀಡಾ ಪರಿಕರ ವಶಕ್ಕೆ
‘ಉಳ್ಳಾಲ ಠಾಣಾ ವ್ಯಾಪ್ತಿಯ ಸ್ಪೋರ್ಟ್ಸ್ ವಿನ್ನರ್ ಮಳಿಗೆ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವ್ ಸ್ಪೋರ್ಟ್ಸ್ ಸೆಂಟರ್ ಮಳಿಗೆಯಲ್ಲಿ ಕೊಸ್ಕೊ ನಿವಿಯ ಮತ್ತು ಯೋನೆಕ್ಸ್ ಬ್ರಾಂಡ್ ಗಳ ಉತ್ಪನ್ನದ ಸೋಗಿನಲ್ಲಿ ಮಾರಾಟ ಮಾಡುತ್ತಿದ್ದ ಸುಮಾರು 300 ಫುಟ್ ಬಾಲ್ ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ರಾಕೆಟ್‍ಗಳಂತಹ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ಮಿಥುನ್ ಎನ್.ಎಚ್. ಮಾಹಿತಿ ನೀಡಿದರು. ‘ಬ್ರ್ಯಾಂಡ್ ಉತ್ಪನ್ನಗಳ ಸೋಗಿನಲ್ಲಿ ನಕಲಿ ಕ್ರೀಡಾ ಪರಿಕರ ಮಾರಾಟ ಮಾಡುತ್ತಿರುವ ಬಗ್ಗೆ ಬ್ರ್ಯಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ದಕ್ಷಿಣ ಭಾರತದ ಪ್ರಾದೇಶಿಕ ಮುಖ್ಯಸ್ಥ ಸ್ಟೀಫನ್ ರಾಜ್ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯ ಪೊಲೀಸರು ₹ 3.5ಲಕ್ಷ ಮೌಲ್ಯದ ಕ್ರೀಡಾ ಪರಿಕರ ಹಾಗೂ ನಗರ ಉತ್ತರ ಠಾಣೆಯ ಪೊಲೀಸರು ₹ 5 ಲಕ್ಷ ಮೌಲ್ಯದ ಪರಿಕರ ವಶಪಡಿಸಿಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. ಗ್ರಾಹಕರು ಬ್ರಾಂಡೆಡ್ ಪರಿಕರಗಳನ್ನು ಖರೀದಿಸುವಾಗ ಎಚ್ಚರವಹಿಸಬೇಕು. ನಕಲಿ ಉತ್ಪನ್ನಗಳನ್ನು ಹೆಚ್ಚೂ ಕಡಿಮೆ ನೈಜ ಉತ್ಪನ್ನಗಳಷ್ಟೇ ದರಕ್ಕೆ ಮಾರಾಟ ಮಾಡಲಾಗುತ್ತದೆ. ಗ್ರಾಹಕರನ್ನು ಆಕರ್ಷಿಸಲು ಶೇ 20ರಷ್ಟು ರಿಯಾಯಿತಿ ನೀಡಿದ್ದೆವು ಎಂದು ಮಳಿಗೆಯ ಮಾಲೀಕರು ತಿಳಿಸಿದ್ದಾರೆ. ಈ ನಕಲಿ ಉತ್ಪನ್ನಗಳು ಪಂಜಾಬಿನ ಜಲಂಧರ್‌ನಿಂದ ತರಿಸಿಕೊಂಡಿದ್ದು ಅವರ ಬಳಿ ಸಿಕ್ಕ ಬಿಲ್‌ಗಳಿಂದ ಇದು ಗೊತ್ತಾಗಿದೆ. ಇವುಗಳ ಪೂರೈಕೆದಾರರು ಹಾಗೂ ತಯಾರಕರ ಪತ್ತೆಗೆ ಕ್ರಮ ವಹಿಸಿದ್ದೇವೆ’ ಎಂದರು. ‘ತುಸು ಉಬ್ಬಿದ ಬ್ಯಾಜ್ ಸಂಖ್ಯೆ 3ಡಿ ಹೋಲೋಗ್ರಾಂ ಸಹಾಯದಿಂದ ಕ್ರೀಡಾ ಪರಿಕರ ಅಸಲಿಯೋ ನಕಲಿಯೋ ಎಂದು ಪತ್ತೆ ಹಚ್ಚಬಹುದು. ಅಸಲಿ ಮತ್ತು ನಕಲಿ ಉತ್ಪನ್ನಗಳ ಬಣ್ಣಗಳಲ್ಲೂ ತುಸು ವ್ಯತ್ಯಾಸ ಗುರುತಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.