ಮೂಡುಬಿದಿರೆ: ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯರ ಕತ್ತಿನಿಂದ ಚಿನ್ನದ ಸರ ಕಿತ್ತೊಯ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕಳವಾಗಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
‘ಉಳ್ಳಾಲ ಸಮೀಪದ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯ ಹಬೀಬ್ ಹಸನ್ ಯಾನೆ ಹಬ್ಬಿ(42) ಮತ್ತು ಬಂಟ್ವಾಳ ತಾಲ್ಲೂಕಿನ ಜೋಡುಮಾರ್ಗದ ಬಿ– ಮೂಡಾ ಗ್ರಾಮದ ಅದ್ಯಾಡಿಯ ಉಮ್ಮರ್ ಸಿಯಾಫ್ ಯಾನೆ ಚಿಯಾ (29) ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಕಳವಾದ ಚಿನ್ನಾಭರಣಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮೌಲ್ಯ ₹ 2.5 ಲಕ್ಷ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ (70 ವರ್ಷ) ಕತ್ತಿನಲ್ಲಿದ್ದ 24 ಗ್ರಾಂ ತೂಕದ ಚಿನ್ನದ ಸರವನ್ನು ಆರೋಪಿಗಳು ಆ.15ರಂದು ಕಿತ್ತೊಯ್ದಿದ್ದರು. ಮೂಡುಮಾರ್ನಾಡು ಗ್ರಾಮದ ಬಸದಿ ಬಳಿ ಪ್ರೇಮಾ ( 82 ವರ್ಷ) ಕತ್ತಿನಲ್ಲಿದ್ದ 3 ಪವನ್ ತೂಕದ ಚಿನ್ನದ ಸರವನ್ನು ಸೆ. 2ರಂದು ಕಿತ್ತೊಯ್ದಿದ್ದರು. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
‘ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಅನ್ನು ಆರೋಪಿಗಳು ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದರು. ಆರೋಪಿ ಹಬೀಬ್ ಹಸನ್ 42 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ನ್ಯಾಯಾಲಯದ ವಿಚಾರಣೆಗೆ ದೀರ್ಘ ಸಮಯದಿಂದ ಗೈರಾಗುತ್ತಿದ್ದ. ಉಳ್ಳಾಲ ಠಾಣೆಯ 5, ಕಾರ್ಕಳ, ಮೂಡುಬಿದಿರೆ ಮತ್ತು ಕೊಣಾಜೆ ಠಾಣೆಗಳ ತಲಾ 2, ಮೂಲ್ಕಿ, ಸುರತ್ಕಲ್ ಮತ್ತು ಬಜಪೆ ಠಾಣೆಗಳ ತಲಾ ಒಂದು ಪ್ರಕರಣಗಳು ಸೇರಿ ಒಟ್ಟು 15 ಪ್ರಕರಣಗಳಿಗೆ ಸಂಬಂಧಿಸಿ ಆತನ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ನಿರ್ದೇಶನದಂತೆ ಮೂಡುಬಿದಿರೆ ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿತ್ತು. ಎಎಸ್‌ಐ ಪ್ರಶಾಂತ್, ಮೋಹನ್ ದಾಸ್ ಕೋಟ್ಯಾನ್, ಅಪರಾಧ ವಿಭಾಗದ ಸಿಬ್ಬಂದಿ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.