ADVERTISEMENT

ಮಂಗಳೂರು | ವಿಮಾನದಲ್ಲಿ ಬಂದು ರೈಲಿನಲ್ಲಿ ಕದಿಯುತ್ತಿದ್ದರು!

ರೈಲು ಪ್ರಯಾಣಿಕರ ಚಿನ್ನಾಭರಣ ಕಳವು: ಉತ್ತರ ಪ್ರದೇಶದ ಆರೋಪಿಗಳಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 5:36 IST
Last Updated 5 ಅಕ್ಟೋಬರ್ 2023, 5:36 IST
ಆರ್‌ಪಿಎಫ್‌ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಸ್ವತ್ತುಗಳು
ಆರ್‌ಪಿಎಫ್‌ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಸ್ವತ್ತುಗಳು   

ಮಂಗಳೂರು: ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು, ಇಲ್ಲಿನ ರೈಲುಗಳಲ್ಲಿ ರಾತ್ರಿ ವೇಳೆ ಪ್ರಯಾಣಿಸಿ ಸಹ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಆರೋಪಿಗಳಿಬ್ಬರನ್ನು ರೈಲು ಸಂರಕ್ಷಣಾ ಪಡೆಯ (ಆರ್‌ಪಿಎಫ್‌) ಪೊಲೀಸರ ವಿಶೇಷ ತಂಡವು ಬಂಧಿಸಿದೆ.

ಉತ್ತರ ಪ್ರದೇಶದ ಮಿರ್ಜಾಪುರ, ಧೋರುಪುರದ ಅಭಯ್‌ರಾಜ್‌ ಸಿಂಗ್‌ (26)  ಮತ್ತು ರಾಜ್‌ಪುರದ ಹರಿಶಂಕರ್‌ ಗಿರಿ (25) ಬಂಧಿತರು ಎಂದು ಆರ್‌ಪಿಎಫ್‌ ಮೂಲಗಳು ತಿಳಿಸಿವೆ.

‘ಮಂಗಳೂರು ಮತ್ತು ಸುರತ್ಕಲ್‌ ನಡುವೆ ಸೆ.28ರಂದು ಸಂಚರಿಸಿದ್ದ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವಾಗಿತ್ತು. ಇಬ್ಬರು ಯುವಕರ ವರ್ತನೆ ಬಗ್ಗೆ ಸಂದೇಹ ಮೂಡಿದ್ದರಿಂದ ಅವರನ್ನು ಅ.2ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ರೈಲಿನಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದರು. ಆರೋಪಿಗಳನ್ನು ನಗರದ ರೈಲ್ವೆ ಪೊಲೀಸರ ವಶಕ್ಕೆ ಒಪ್ಪಿಸಿದ್ದೇವೆ’ ಎಂದು ಆರ್‌ಪಿಎಫ್‌ ಮಾಹಿತಿ ನೀಡಿದೆ.

ADVERTISEMENT

‘ಆರೋಪಿಗಳು ರೈಲ್ವೆಯ ಪಾಲಕ್ಕಾಡ್‌, ತಿರುವನಂತಪುರ ವಲಯಗಳಲ್ಲಿ  ಹಾಗೂ ಕೊಂಕಣ ರೈಲ್ವೆಯ ವ್ಯಾಪ್ತಿ‌ಯಲ್ಲಿ ಸಂಚರಿಸುವ ರೈಲುಗಳಲ್ಲಿ ಸಹಪ್ರಯಾಣಿಕರಿಂದ ಕದ್ದಿರುವ ಚಿನ್ನಾಭರಣಗಳು ಸೇರಿ ಒಟ್ಟು 125 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಆರ್‌ಪಿಎಫ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಉತ್ತರಪ್ರದೇಶದಿಂದ ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರು. ಚಿನ್ನಾಭರಣ ಧರಿಸಿರುವ ವೃದ್ಧರು ಹಾಗೂ ಮಹಿಳಾ ಪ್ರಯಾಣಿಕರನ್ನು ಗುರುತಿಸುತ್ತಿದ್ದರು. ರೈಲಿನ ವೇಗವು ಕಡಿಮೆ ಆದ ಸಂದರ್ಭದಲ್ಲಿ ಅವರ ಚಿನ್ನಾಭರಣಗಳನ್ನು ಕಿತ್ತುಕೊಂಡು, ಬೋಗಿಗಳಿಂದ ಹೊರಗೆ ಜಿಗಿದು ಪರಾರಿಯಾಗುತ್ತಿದ್ದರು. ಕೃತ್ಯಕ್ಕೆ ವಾರಾಂತ್ಯದಲ್ಲಿ ಚಲಿಸುವ ರೈಲುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು’ ಎಂದು ಅವರು ತಿಳಿಸಿದರು.

ಈ ಆರೋಪಿಗಳಿಬ್ಬರು ಉತ್ತರ ಪ್ರದೇಶದಿಂದ ಗೋವಾಕ್ಕೆ ಸೆ 21ರಂದು ಬಂದಿದ್ದರು. ಅಲ್ಲಿಂದ ತಿರುವನಂತಪುರಕ್ಕೆ ಹೋಗುವ ರೈಲು ಹತ್ತಿದ್ದರು. ಗೋವಾದ ಕುಳೆಂನಲ್ಲಿ ರೈಲು ವೇಗ ಕಡಿಮೆಯಾದಾಗ ಮಹಿಳೆಯೊಬ್ಬರ ಚಿನ್ನಾಭರಣ ಕದ್ದು ರೈಲಿನಿಂದ ಜಿಗಿಯುತ್ತಿದ್ದರು. ಬೇರೊಂದು ರೈಲನ್ನು ಹಿಡಿದು ಇದೇ ಮಾದರಿಯಲ್ಲಿ ಕೃತ್ಯ ಮುಂದುವರಿಸಿದ್ದರು’ ಎಂದು ವಿವರಿಸಿದರು.

ರೈಲಿನಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.