ADVERTISEMENT

ಮಂಗಳೂರು: ಕಡಿಮೆಯಾಗುತ್ತಿದೆ ಸ್ವರ್ಣಕಾರರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 6:28 IST
Last Updated 11 ಡಿಸೆಂಬರ್ 2024, 6:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಂಗಳೂರು: ಚಿನ್ನಾಭರಣಗಳ ಬೇಡಿಕೆ ಹೆಚ್ಚಾಗಿದ್ದರೂ ಸಣ್ಣ ಪ್ರಮಾಣದಲ್ಲಿ ಚಿನ್ನದ ಕೆಲಸ ಮಾಡುವವರು ಮತ್ತು ಸಣ್ಣ ಜ್ಯುವೆಲ್ಲರಿ ನಡೆಸುತ್ತಿರುವವರ ಬದುಕು ಈಗಲೂ ಸಂಕಷ್ಟದಲ್ಲಿದೆ.

ಗ್ರಾಹಕರು ಬ್ರಾಂಡೆಡ್ ಆಭರಣಗಳ ಬೆನ್ನು ಬಿದ್ದಿರುವುದು ಮತ್ತು ಯುವ ತಲೆಮಾರು ಚಿನ್ನದ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದು ಈ ಪರಿಸ್ಥಿತಿಗೆ ಕಾರಣ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಈ ವರ್ಷ ಏಪ್ರಿಲ್‌ನಿಂದ ಜೂನ್ ತಿಂಗಳ ಅವಧಿಯಲ್ಲಿ ಚಿನ್ನದ ಆಭರಣಗಳ ರಫ್ತು ಶೇ 11.56ರಷ್ಟು ಹೆಚ್ಚಳ ಕಂಡಿದೆ. ಆದರೆ, ಸಾಂಪ್ರದಾಯಿಕ ಆಭರಣ ತಯಾರಕರ ಸಂಖ್ಯೆ ಈಚಿನ ಕೆಲವು ವರ್ಷಗಳಲ್ಲಿ ಶೇ 40ರಷ್ಟು ಕಡಿಮೆಯಾಗಿದೆ. ಕೆಲವು ವರ್ಷಗಳ ಹಿಂದೆ 4 ಲಕ್ಷ ಇದ್ದ ಸಾಂಪ್ರದಾಯಿಕ ಚಿನ್ನದ ಕೆಲಸಗಾರರ ಸಂಖ್ಯೆ ಈಗ 2.5 ಲಕ್ಷಕ್ಕೆ ಇಳಿದಿದೆ ಎನ್ನುವುದು ಕರ್ನಾಟಕ ಸ್ವರ್ಣಕಾರರ ಸಂಘದ (ಕೆಎಸ್‌ಎಸ್‌)ದ ಮುಖಂಡ ಆರ್‌. ರಾಮಮೂರ್ತಿ ವಿಶ್ವಕರ್ಮ ಅವರ ಮಾಹಿತಿ.

ADVERTISEMENT

‘ರಾಜ್ಯದಲ್ಲಿ ಸಾಂಪ್ರದಾಯಿಕ ಜ್ಯುವೆಲ್ಲರಿ ಮಳಿಗೆಗಳ ಮಾಲೀಕರು ಮತ್ತು ಚಿನ್ನದ ಕೆಲಸ ಮಾಡುವವರ ಮೇಲೆ ಆತಂಕದ ಛಾಯೆ ಕವಿದಿದೆ. ಬೆಂಗಳೂರಿನಲ್ಲೇ 5 ಸಾವಿರದಷ್ಟು ಇದ್ದ ಸಣ್ಣ ಆಭರಣ ಮಳಿಗೆಗಳ ಪೈಕಿ 500ರಷ್ಟು ಈಚಿನ ವರ್ಷಗಳಲ್ಲಿ ಬಾಗಿಲು ಮುಚ್ಚಿವೆ’ ಎಂದು ಬೆಂಗಳೂರು ಜ್ಯುವೆಲ್ಲರ್ಸ್ ಸಂಘದ ಕಾರ್ಯದರ್ಶಿ ಅಶೋಕ್ ರಾಥೋಡ್ ಹೇಳಿದರು.  

‘ಜಿಲ್ಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ತಯಾರಿಸುವವರ ಸಾಲಿಗೆ 15 ವರ್ಷಗಳಿಂದ ಹೊಸ ಪ್ರತಿಭೆಗಳ ಸೇರ್ಪಡೆಯಾಗಲಿಲ್ಲ’ ಎಂದು ಮಂಗಳೂರಿನ ಚಿನ್ನಾಭರಣ ವ್ಯಾಪಾರಿ ಅರುಣ್ ಶೇಟ್ ಹೇಳಿದರೆ, ಜಿಲ್ಲೆಯಲ್ಲಿ 5 ಸಾವಿರದಷ್ಟು ಇದ್ದ ಸಾಂಪ್ರದಾಯಿಕ ಕೆಲಸಗಾರರ ಪೈಕಿ ಶೇ 75ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅತ್ಯಂತ ಪ್ರತಿಭಾಶಾಲಿಗಳಾಗಿದ್ದ ಕೆಲಸದವರು ಈಗ ಆಟೊ ರಿಕ್ಷಾ ಓಡಿಸುತ್ತಿದ್ದಾರೆ’ ಎಂದು ದಕ್ಷಿಣ ಕನ್ನಡ ಚಿನ್ನದ ಕೆಲಸಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್‌ ಹಳಗಿ ಹೇಳಿದರು.  

‘ಯುವಜನರಿಗೆ ಚಿನ್ನದ ಕೆಲಸ ಮತ್ತು ವ್ಯಾಪಾರದ ಮೇಲೆ ಆಸಕ್ತಿಯೇ ಇಲ್ಲ. ಮೈಸೂರಿನಲ್ಲಿ ಒಂದು ದಶಕದಲ್ಲಿ 30ರಷ್ಟು ಅಂಗಡಿಗಳು ಮುಚ್ಚಿವೆ. ಮುಂದಿನ ಜನಾಂಗವು ಭಿನ್ನ ಪಥದಲ್ಲಿ ನಡೆಯಲು ನಿರ್ಧಿರಿಸಿದೆ’ ಎಂದು ಮೈಸೂರು ಸರಾಫ ಸಂಘದ ಅಧ್ಯಕ್ಷ ಸಿ.ಎಸ್. ಅಮರನಾಥ್ ಅಭಿಪ್ರಾಯಪಟ್ಟರು.

‘ಸುಮಾರು 400ರಷ್ಟು ಸಣ್ಣ ಮಳಿಗೆಗಳ ಶೇ 70ರಷ್ಟು ವಹಿವಾಟು ಬ್ರಾಂಡೆಡ್ ಅಥವಾ ‘ಕಾರ್ಪೊರೇಟ್‌’ ಜ್ಯುವೆಲ್ಲರಿ ಮಳಿಗೆಗಳ ಪಾಲಾಗಿ ಬಿಟ್ಟಿದೆ’ ಎಂದು ಕಲಬುರಗಿ ಸರಾಫ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾ‍ಪುರ ಹೇಳಿದರು.

ಮೂಲಕ್ಕೆ ವಾಪಸ್: ಬ್ರಾಂಡೆಡ್‌ ಆಭರಣಗಳಿಂದ ವಿಮುಖರಾಗಿ ಮೂಲಕ್ಕೆ ವಾಪಸ್ ಆಗುತ್ತಿರುವುದು ಕೂಡ ಕೆಲವು ಕಡೆಗಳಲ್ಲಿ ಕಂಡುಬರುತ್ತಿದೆ. ಆಭರಣಗಳನ್ನು ವಾಪಸ್ ಮಾರುವ ಮತ್ತು ದುರಸ್ತಿ ಮಾಡುವ ಸಂದರ್ಭದಲ್ಲಿ ಬ್ರಾಂಡೆಡ್ ಷೋರೂಮ್‌ಗಳು ವಿಭಿನ್ನ ನೀತಿಗಳನ್ನು ಅನುಸರಿಸುತ್ತಿವೆ. ಇದರಿಂದ ಬೇಸರಗೊಂಡು ಸಾಂಪ್ರದಾಯಿಕ ಮಳಿಗೆಗಳತ್ತ ಬರುವವರ ಸಂಖ್ಯೆ ಈಚೆಗೆ ಹೆಚ್ಚುತ್ತಿದೆ ಎಂದು ಬೆಳಗಾವಿಯ ಶಹಾಪುರ ಸರಾಫ್ ಸಂಘದ ಕಾರ್ಯದರ್ಶಿ ಸಂತೋಷ್ ಕಲಘಟಗಿ ಹೇಳಿದರು.

ಮುಕ್ಕಾದ ಸಿಎಫ್‌ಸಿ ಪ್ರಸ್ತಾವ

ಮಂಗಳೂರಿನಲ್ಲಿ ₹20 ಕೋಟಿ ವೆಚ್ಚದಲ್ಲಿ ಕ್ಲಸ್ಟರ್ ಅಥವಾ ಸಮಾನ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಸ್ಥಾಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಹೂಡಿಕೆ ಮಾಡಲು ಯಾರೂ ಮುಂದೆ ಬರಲಿಲ್ಲ. ಸಿಎಫ್‌ಸಿ ಸ್ಥಾಪನೆ ಆದರೆ ಎಲ್ಲ ಸೇವೆಗಳು ಒಂದೇ ಸೂರಿನಡಿ ಲಭಿಸಲಿದ್ದು ವೃತ್ತಿಪರರಿಗೆ ಕೈತುಂಬ ಕೆಲಸ ಸಿಗಲಿದೆ ಎಂದು ದಕ್ಷಿಣ ಕನ್ನಡ ಚಿನ್ನದ ಕೆಲಸಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್‌ ಹಳಗಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.