ADVERTISEMENT

ಗೋಳಿತ್ತೊಟ್ಟು: 186 ಗ್ರಾಂ ಚಿನ್ನಾಭರಣ ಕಳವು

ಟಿ.ವಿ, ಗ್ಯಾಸ್‌ ಸ್ಟೌ, ಸಿಲಿಂಡರನ್ನೂ ಕದ್ದೊಯ್ದ ಕಳ್ಳರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 6:07 IST
Last Updated 15 ಜನವರಿ 2023, 6:07 IST

ಉಪ್ಪಿನಂಗಡಿ: ಕಡಬ ತಾಲ್ಲೂಕು ಗೋಳಿತ್ತೊಟ್ಟು ಗ್ರಾಮದ ಕಲಾಯಿಲ್ ಎಂಬಲ್ಲಿ ಫಾ. ಜಿಜನ್ ಅಬ್ರಹಾಂ ಅವರು ಮನೆಗೆ ಬೀಗ ಹಾಕಿ ಹೋಗಿದ್ದಾಗ ಅವರ ಮನೆಯಲ್ಲಿದ್ದ ಚಿನ್ನಾಭರಣಗಳು ಸೇರಿದಂತೆ ಹಲವು ಸೊತ್ತುಗಳು ಕಳವಾಗಿವೆ. ಮನೆಯಲ್ಲಿದ್ದ ಟಿ.ವಿ., ರಿಮೋಟ್‌, ಅಡುಗೆ ಅನಿಲ ಸಿಲಿಂಡರ್‌, ಸ್ಟೌಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ!

’ಫಾ. ಜಿಜನ್ ಅವರು ಮಾವ ಸ್ಕರಿಯಾ ಜೊತೆಯಲ್ಲಿ ವಾಸವಿದ್ದರು. ಅನಾರೋಗ್ಯ ಪೀಡಿತ ಮಾವನವರನ್ನು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಒಳರೋಗಿಯಾಗಿ ಗುರುವಾರ ದಾಖಲು ಮಾಡಿದ್ದರು. ಮನೆಗೆ ಬೀಗ ಹಾಕಿ ಹೆಂಡತಿ ಮಕ್ಕಳನ್ನು ಕೊಣಾಲು ಗ್ರಾಮದ ಆರ್ಲ ಮನೆಯಲ್ಲಿ ಶುಕ್ರವಾರ ಬಿಟ್ಟು ಬಮದಿದ್ದರು. ಮಾವನವರ ಆರೈಕೆಗಾಗಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿದ್ದರು. ಶನಿವಾರ ಮನೆಗೆ ಮರಳಿದಾಗ ಮುಂಬಾಗಿಲು ಅರ್ಧ ತೆರೆದಿತ್ತು. ಮನೆಯೊಳಗಿದ್ದ ಕಬ್ಬಿಣದ ಕಪಾಟುಗಳ ಬಾಗಿಲುಗಳು ತೆರೆದಿದ್ದವು. ಅದರೊಳಗಿದ್ದ ಬಟ್ಟೆಬರೆಗಳು ಹಾಗೂ ಸೊತ್ತುಗಳು ಚೆಲ್ಲಾಪಿಲ್ಲಿಯಾದ್ದವು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

’ಮನೆಯಲ್ಲಿದ್ದ ಚಿನ್ನದ ನಾಲ್ಕು ಸರಗಳು, ಎರಡು ಬಳೆಗಳು, 10 ಜೊತೆ ಬೆಂಡೋಲೆಗಳು, ಎರಡು ಉಂಗುರ, ಒಂದು ನೆಕ್ಲೇಸ್‌, ಎರಡು ಬ್ರಾಸ್ಲೆಟ್‌ ಕಳವಾಗಿವೆ. ಒಟ್ಟು 186 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಇದರ ಅಂದಾಜು ಮೌಲ್ಯ ₹ 4.65 ಲಕ್ಷ ಎಂದು ಅಂದಾಜಿಸಲಾಗಿದೆ.

ADVERTISEMENT

ಮನೆಯ ಹಾಲ್‌ನಲ್ಲಿದ್ದ 52 ಇಂಚಿನ ಟಿ.ವಿ ಮತ್ತು ರಿಮೋಟ್, ಹೆಡ್ ಫೋನ್‌ ಸೆಟ್, ಅಡುಗೆ ಕೋಣೆಯಲ್ಲಿದ್ದ ಎಚ್.ಪಿ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌ ಕಪಾಟಿನಲ್ಲಿರಿಸಿದ್ದ % 50 ಸಾವಿರ ನಗದು ಕೂಡ ಕಳವಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ₹ 5.87 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.