ADVERTISEMENT

ಮಂಗಳೂರಿನಲ್ಲಿ ಗೂಡ್ಸ್ ರೈಲು ಡಿಕ್ಕಿ ಹೊಡೆದು 17 ಎಮ್ಮೆ ಸೇರಿ, 20 ಜಾನುವಾರುಗಳ ಸಾವು

​ಪ್ರಜಾವಾಣಿ ವಾರ್ತೆ
Published 15 ಮೇ 2023, 5:48 IST
Last Updated 15 ಮೇ 2023, 5:48 IST
Harishankar R.
   Harishankar R.

ಮಂಗಳೂರು: ನಗರದ ಹೊರ ವಲಯದ ಜೋಕಟ್ಟೆ ಅಂಗರಗುಂಡಿ ಬಳಿ ಸರಕು ಸಾಗಣೆ‌ ರೈಲು ಡಿಕ್ಕಿಹೊಡೆದು 17 ಎಮ್ಮೆಗಳು ಸೇರಿ 20 ಜಾನುವಾರುಗಳು ಸೋಮವಾರ ನಸುಕಿನಲ್ಲಿ ಮೃತಪಟ್ಟಿವೆ.

'ಬೆಳಿಗ್ಗೆ 5 ಗಂಟೆ ಸುಮಾರಿಗೆ ಗೂಡ್ಸ್ ರೈಲು ನಿಧಾನವಾಗಿ ಚಲಿಸುತ್ತಿತ್ತು. ಸ್ಥಳಕ್ಕೆ ಹೋಗಿ ನೋಡಿದಾಗ ಎಮ್ಮೆಗಳು ಸತ್ತಿರುವುದು ಕಂಡು ಬಂತು' ಎಂದು ಪ್ರತ್ಯಕ್ಷ‌ದರ್ಶಿಯೊಬ್ಬರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ತೋಕೂರಿನಿಂದ ಪಣಂಬೂರಿಗೆ ಸರಕು ಸಾಗಣೆ ರೈಲು ಸಾಗುವ ಹಳಿ ಇದೆ. ಇದರಲ್ಲಿ ಗೂಡ್ಸ್ ರೈಲು ಸಾಗುವಾಗ ಹಾರ್ನ್‌ ಹಾಕುತ್ತಾರೆ. ಬಹುಶಃ ಎಮ್ಮೆಗಳು ಹಳಿಯ ಮೇಲೆ ಮಲಗಿದ್ದಾಗ ರೈಲು ಹಾದುಹೋಗಿರಬಹುದು' ಎಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ.

ADVERTISEMENT

2021ರಲ್ಲೂ ತೋಕೂರಿನಲ್ಲಿ ಇದೇ ರೀತಿ ಅವಘಡ ಸಂಭವಿಸಿತ್ತು. 13 ಎಮ್ಮೆಗಳು ಸತ್ತಿದ್ದವು. ಶನಿವಾರ ಈ ಪ್ರದೇಶದಲ್ಲಿ ಭಾರೀ ಮಳೆಯಾದ ಕಾರಣ ರೈಲು ಹಳಿ ಬಳಿ ಕೆಸರು ನೀರು ನಿಂತಿತ್ತು. ಎಮ್ಮೆಗಳು ಕೆಸರಿನ‌ ಬಳಿ ಮಲಗುತ್ತವೆ. ಆಗ ರೈಲು ಹಾರ್ನ್ ಹಾಕುತ್ತಾ ಸಾಗಿಬಂದರೂ ಎಮ್ಮೆಗಳು ಮೇಲೇಳುವುದಿಲ್ಲ' ಎಂದು ಅವರು ವಿವರಿಸಿದರು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರಿನ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ಹಳಿಗಳ ಬಳಿ ಬಿದ್ದಿದ್ದ ಎಮ್ಮೆಗಳ ಮೃತದೇಹಗಳನ್ನು ತೆರವು ಮಾಡಿದ್ದಾರೆ. ನಾಲ್ಕು ಎಮ್ಮೆಗಳನ್ನು ರಕ್ಷಿಸಿ‌ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

'ಬೀಡಾಡಿ ಜಾನುವಾರುಗಳ ಸುರಕ್ಷತೆಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು' ಎಂದು ಡಿವೈಎಫ್ಐ ಮುಖಂಡ ಇಮ್ತಿಯಾಜ್ ಒತ್ತಾಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.