ADVERTISEMENT

‘ಜಾಗತಿಕ ಸವಾಲು ಎದುರಿಸಲು ಸರ್ಕಾರ ಬೆಂಬಲ ಅಗತ್ಯ’

ಗೋಡಂಬಿ ರಫ್ತು: ಸಾಮರ್ಥ್ಯ ವೃದ್ಧಿ ಕಾರ್ಯಾಗಾರದಲ್ಲಿ ಉದ್ಯಮಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:39 IST
Last Updated 18 ಜನವರಿ 2026, 6:39 IST
ಮಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಸಂಘದ ಎ.ಕೆ.ರಾವ್‌ ಮಾತನಾಡಿದರು ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಸಂಘದ ಎ.ಕೆ.ರಾವ್‌ ಮಾತನಾಡಿದರು ಪ್ರಜಾವಾಣಿ ಚಿತ್ರ   

ಮಂಗಳೂರು:  ‘ನಮ್ಮ ದೇಶದ ಗೋಡಂಬಿ ಉದ್ಯಮವು  ಜಾಗತಿಕ ಮಾರುಕಟ್ಟೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇವುಗಳನ್ನು ಸಮರ್ಥವಾಗಿ ಎದುರಿಸಿ, ರಫ್ತು ಹೆಚ್ಚಿಸುವುದಕ್ಕೆ ಹಾಗೂ ಈ ಕ್ಷೇತ್ರದಲ್ಲಿ ಪಾರಮ್ಯ ಉಳಿಸಿಕೊಳ್ಳುವುದಕ್ಕೆ ಸರ್ಕಾರಗಳ ಬೆಂಬಲ ಅಗತ್ಯ. ಗೋಡಂಬಿ ರಫ್ತು ಬೆಂಬಲಿಸುವ ಒಂದು ವೇದಿಕೆ ಬೇಕು’ ಎಂದು ಕರ್ನಾಟಕ ಗೋಡಂಬಿ ಉತ್ಪಾದಕರ ಸಂಸ್ಥೆ (ಕೆಸಿಎಂಎ) ಅಧ್ಯಕ್ಷ ಎ.ಕೆ ರಾವ್ ಹೇಳಿದರು.

ಗೋಡಂಬಿ ರಫ್ತು ಉತ್ತೇಜನಕ್ಕಾಗಿ  ಕೃಷಿ ಮತ್ತು ಸಂಸ್ಕರಿತ ಆಹಾರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಇಲ್ಲಿ ಶನಿವಾರ ಏರ್ಪಡಿಸಿದ್ದ ಸಾಮರ್ಥ್ಯ ವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಈಚಿನ ವರ್ಷಗಳಲ್ಲಿ ದೇಸಿ ಮಾರುಕಟ್ಟೆಯಲ್ಲೂ ಗೋಡಂಬಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ದರ ಸಿಗುತ್ತಿದೆ.  ರಫ್ತಿಗಿಂತಲೂ ದೇಸಿ ಮಾರುಕಟ್ಟೆಯೇ ಲಾಭದಾಯಕ. ಹಾಗಾಗಿ ಉದ್ಯಮಿಗಳು ಗೋಡಂಬಿ ರಫ್ತಿನಿಂದ ವಿಮುಖರಾಗಿ ದೇಸಿ ಮಾರುಕಟ್ಟೆ ವಿಸ್ತರಣೆಯತ್ತ ಒಲವು ತೋರಿಸುತ್ತಿದ್ದಾರೆ. ಹಿಂದೆಲ್ಲ ರಾಜ್ಯದ ಕರಾವಳಿ ಜಿಲ್ಲೆಗಳು ಗೋಡಂಬಿ ಉದ್ಯಮದಲ್ಲಿ ಪಾರಮ್ಯ ಸಾಧಿಸಿದ್ದರು. ತ್ವರಿತ ಯಾಂತ್ರೀಕರಣ ಪ್ರಕ್ರಿಯೆಯಿಂದಾಗಿ ಗುಜರಾತ್‌ನಲ್ಲಿ ಗೋಡಂಬಿ ಉದ್ದಿಮೆ  ಬೆಳೆಯುತ್ತಿದ್ದು, ಅವರು ನಮ್ಮನ್ನು ಹಿಂದಿಕ್ಕುವ ಸಾಧ್ಯತೆ ಇದೆ. ‌ರಫ್ತು ಉತ್ತೇಜನ ನೆರವು ಎಲ್ಲ ವರ್ಗಗಳ ಗೋಡಂಬಿ ಉದ್ದಿಮೆದಾರರಿಗೆ ಸಮಾನವಾಗಿ ಸಿಗಬೇಕು’ ಎಂದರು.   

ADVERTISEMENT

‘ರಾಜ್ಯದಲ್ಲಿ ಗೇರು ಬೆಳೆ ವಿಸ್ತರಣೆಗೆ ಅವಕಾಶಗಳಿದ್ದರೂ ಸರ್ಕಾರದಿಂದ ಉತ್ತೇಜನ ಸಿಗುತ್ತಿಲ್ಲ. ಆಂತರಿಕ ಗೇರು ಉತ್ಪಾದನೆ ಕುಸಿಯುತ್ತಲೇ ಸಾಗುತ್ತಿದ್ದು, ಅದು ಎಕರೆಗೆ ₹ 200 ಕೆ.ಜಿ.ಗಳಿಗೆ ಕುಸಿದಿದೆ’  ಕಾಂಬೋಡಿಯಾದಲ್ಲಿ ಎಕರೆಗೆ 800 ಕೆ.ಜಿ ಇಳುವರಿ ಸಿಗುತ್ತಿದೆ. ಇಲ್ಲಿ ಗೇರು ಬೆಳೆ ವಿಸ್ತರಣೆಗೆ ಯುದ್ಧೊಪಾಡಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ’ ಎಂದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ‘ಗೇರು ಬೆಳೆಯಲು ರೈತರು ಮುಂದೆ ಬರುತ್ತಿದ್ದಾರೆ. ಹೆಚ್ಚು ಇಳುವರಿ ನೀಡುವ ಗೇರು ತಳಿಗಳ ಅಭಿವೃದ್ಧಿ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ. ರೈತರಿಗೆ ಗೇರು ಗಿಡಗಳನ್ನು ಉಚಿತವಾಗಿ ವಿತರಿಸುವ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ. ಫೆಬ್ರುವರಿಯಲ್ಲಿ ನಿಗಮದಿಂದಗೇರು ಮೇಳವನ್ನು ಆಯೋಜಿಸಲಿದ್ದೇವೆ. ಅಲ್ಲಿ ಗೇರು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದೇವೆ’ ಎಂದರು.  

ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್‌, ‘ಸರ್ಕಾರ ಈಚೆಗೆ ಕೈಗಾರಿಕಾ ನೀತಿ 2025–30 ಅನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಗೆಗಳಿಗೆ ಅನೇಕ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ’ ಎಂದರು.

ಕೃಷಿ ಜಂಟಿ ನಿರ್ದೇಶಕ ಹೊನ್ನೇಗೌಡ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಚ್‌. ಶಶಿಧರ್, ಕಸ್ಟಮ್ಸ್‌ ಅಧೀಕ್ಷಕ ಸಂತೋಷ್ ಕುಮಾರ್, ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯ (ಡಿಸಿಸಿಡಿ )ಸಹಾಯಕ ನಿರ್ದೇಶಕ ದೀಪ್ತಿ ಶಿಷ್ಕರ್ ಮೊದಲಾದವರು ಭಾಗವಹಿಸಿದ್ದರು. 

ಅಪೆಡಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಧರ್ಮರಾವ್ ಸ್ವಾಗತಿಸಿದರು. ಅಪೆಡಾ ವ್ಯವಸ್ಥಾಪಕಿ ಮಧುಮತಿ ಆಂಡ್ರೂಸ್‌ ಧನ್ಯವಾದ ಸಲ್ಲಿಸಿದರು. 

‘ಗೋಡಂಬಿ ರಫ್ತಿಗೆ ವಿಯೆಟ್ನಂ ಸವಾಲು’ ‘

ಗೋಡಂಬಿ ಉದ್ಯಮಗಳು ಕರಾವಳಿಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿವೆ. ವಿಯೆಟ್ನಂನಂತಹ ದೇಶಗಳಲ್ಲಿ ಗೋಡಂಬಿ ಉದ್ದಿಮೆ ವ್ಯಾಪಕವಾಗಿ ಯಾಂತ್ರೀಕರಣಗೊಂಡಿದೆ. ಅಲ್ಲಿ ಗೋಡಂಬಿ ಉತ್ಪಾದನೆ ದಿನಕ್ಕೆ 500 ಟನ್‌ವರೆಗೂ ತಲುಪಿದೆ. ಅಲ್ಲಿನ ಉತ್ಪಾದನಾ ವೆಚ್ಚವೂ ಕಡಿಮೆ. ಅಲ್ಲಿನ ಸರ್ಕಾರ  ರಫ್ತಿಗೂ ಉತ್ತೇಜನ ನೀಡುತ್ತಿದೆ. ನಮ್ಮಲ್ಲಿ ಅದಕ್ಕೆ ವ್ಯತಿರಕ್ತ ಪರಿಸ್ಥಿತಿ ಇದೆ. ನಮ್ಮಲ್ಲಿ ದಾಖಲೆಗಳನ್ನು ಸಲ್ಲಿಸುವಾಗ ಸ್ವಲ್ಪ ವ್ಯತ್ಯಾಸವಾದರೂ ಕಸ್ಟಮ್ಸ್ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗುತ್ತಾರೆ. ಬಂದರಿನಲ್ಲಿ ಉಗ್ರಾಣಗಳ ಕೊರತೆಯೂ ಇದೆ. ಶೇ 2.5ರಷ್ಟು ತೆರಿಗೆ ಈ ಉದ್ದಿಮೆದಾರರಿಗೆ ಅನಗತ್ಯ ಕಿರಿಕಿರಿಯನ್ನು ಉಂಟುಮಾಡುತ್ತಿದೆ. ಮೂಲಸೌಕರ್ಯ ಹೆಚ್ಚಿಸಿ ಕಸ್ಟಮ್ಸ್ ನಿಯಮ ಸರಳೀಕರಣಗೊಳಿಸಿದರೆ ಮಾತ್ರ ಗೋಡಂಬಿ ರಫ್ತಿನಲ್ಲಿ ವಿಯೆಟ್ನಂ  ಸವಾಲನ್ನು ಸಮರ್ಥವಾಗಿ ಎದುರಿಸಬಹುದು’ ಎಂದು ಎ.ಕೆ.ರಾವ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.