ADVERTISEMENT

ಸುಬ್ರಹ್ಮಣ್ಯ | ಮುಚ್ಚಲ್ಪಟ್ಟ ಶಾಲೆಗೆ ಮತ್ತೆ ‘ಮರುಜೀವ’

ದೇವರಹಳ್ಳಿಯ ಗ್ರಾಮಸ್ಥರು, ತಾ.ಪಂ. ಸದಸ್ಯರ ಪ್ರಯತ್ನಕ್ಕೆ ಫಲ

ಲೋಕೇಶ್ ಸುಬ್ರಹ್ಮಣ್ಯ
Published 6 ಆಗಸ್ಟ್ 2020, 19:30 IST
Last Updated 6 ಆಗಸ್ಟ್ 2020, 19:30 IST
ದೇವರಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮತ್ತೆ ತೆರೆಯಲಾಗಿದೆ
ದೇವರಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮತ್ತೆ ತೆರೆಯಲಾಗಿದೆ   

ಸುಬ್ರಹ್ಮಣ್ಯ: ವರ್ಷದ ಹಿಂದೆ ಮುಚ್ಚಲ್ಪಟ್ಟಿದ್ದ ಇಲ್ಲಿನ ದೇವರಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯು ಊರವರು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಅಶೋಕ್ ನೆಕ್ರಾಜೆ ಪ್ರಯತ್ನದ ಫಲವಾಗಿ ಮತ್ತೆ ತೆರೆದಿದೆ. ಈಗಾಗಲೇ ಆರು ಮಕ್ಕಳು ಪ್ರವೇಶ ಪಡೆದಿದ್ದು, ಇನ್ನಷ್ಟು ಮಕ್ಕಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ.

ಈ ಬಾರಿ ಒಂದು ಮತ್ತು ಎರಡನೇ ತರಗತಿಗೆ 6 ಮಕ್ಕಳ ಪ್ರವೇಶಾತಿ ಆಗಿದೆ. 1963ರಲ್ಲಿ ಪ್ರಾರಂಭವಾದ ದೇವರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿತ್ತು. ಕಳೆದ ವರ್ಷ ಮುಚ್ಚಲ್ಪಟ್ಟಿತು.

ಶಾಲೆಯನ್ನು ಮತ್ತೆ ತೆರೆಯುವಂತೆ ಊರವರು ಅಶೋಕ್ ನೆಕ್ರಾಜೆ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ನಿರ್ಣಯಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಅವರಿಗೆ ಮನವಿ ನೀಡಿದ್ದರು. ಮನವಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇಲಾಖೆಯು ಶಾಲೆ ತೆರೆಯಲು ಆದೇಶ ಹೊರಡಿಸಿದೆ. ಶಿಕ್ಷಕಿ ಅಮೃತಾ ಅವರನ್ನು ನಿಯೋಜಿಸಲಾಗಿದೆ. ಮುಚ್ಚಲ್ಪಟ್ಟ ಶಾಲೆಯು ಬುಧವಾರ ಪುನಃ ಶೈಕ್ಷಣಿಕ ಚಟುವಟಿಕೆಗೆ ತೆರೆದುಕೊಂಡಿದೆ.

ADVERTISEMENT

ಅಶೋಕ್ ನೆಕ್ರಾಜೆ ಅಧ್ಯಕ್ಷತೆಯಲ್ಲಿ ಬುಧವಾರ ಪೋಷಕರ ಸಭೆ ನಡೆಯಿತು. ಶಿಕ್ಷಣ ಸಂಯೋಜಕಿ ಸಂಧ್ಯಾ ಎಸ್., ಮಕ್ಕಳ ಪೋಷಕರಾದ ಯಶಸ್ವಿನಿ ಡಿ.ಪಿ, ಸಾವಿತ್ರಿ, ಹೇಮಲತಾ, ಮೋಹಿನಿ, ವಿನೋದ, ಮಂಜುನಾಥ, ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿಗಳಾದ ದಿಲೀಪ್, ಮಣೀಶ್ ಇದ್ದರು. ವಿದ್ಯಾರ್ಥಿಗಳಿಗೆ ಪುಸ್ತಕ– ಪೆನ್ನು ಸೇರಿದಂತೆ ಕಲಿಕೆಯ ಸಲಕರಣೆಗಳನ್ನು ನೆಕ್ರಾಜೆ ಉಚಿತವಾಗಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.