ADVERTISEMENT

ಫಲಾನುಭವಿಗಳಿಗೆ ತಲುಪಿದ ₹ 98,954 ಕೋಟಿ: ಎಚ್.ಎಂ ರೇವಣ್ಣ

ಬಿ.ಸಿ.ರೋಡು: ಗೃಹಲಕ್ಷ್ಮಿ ಫಲಾನುಭವಿಗಳ ಸ್ವಸಹಾಯ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:12 IST
Last Updated 29 ಅಕ್ಟೋಬರ್ 2025, 4:12 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಮಂಗಳವಾರ ನಡೆದ ಗೃಹಲಕ್ಷ್ಮಿ ಫಲಾನುಭವಿಗಳ ‘ಸ್ವಸಹಾಯ ಸಂಘಗಳ ಉದ್ಘಾಟನೆ’ ಕಾರ್ಯಕ್ರಮಕ್ಕೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಚಾಲನೆ ನೀಡಿದರು
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಮಂಗಳವಾರ ನಡೆದ ಗೃಹಲಕ್ಷ್ಮಿ ಫಲಾನುಭವಿಗಳ ‘ಸ್ವಸಹಾಯ ಸಂಘಗಳ ಉದ್ಘಾಟನೆ’ ಕಾರ್ಯಕ್ರಮಕ್ಕೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಚಾಲನೆ ನೀಡಿದರು   

ಬಂಟ್ವಾಳ: ‘ದೇಶದಲ್ಲಿ ಈ ಹಿಂದೆ ಗುಜರಾತ್ ಮಾದರಿ ಎನ್ನುತ್ತಿದ್ದವರು ಈಗ ಕರ್ನಾಟಕ ಮಾದರಿ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಟ್ಟು ₹ 98,954 ಕೋಟಿ ಮೊತ್ತದ ಹಣವನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ನೀಡಿದೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಇಲ್ಲಿನ ಬಿ.ಸಿ.ರೋಡು ಅಂಬೇಡ್ಕರ್ ಭವನದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಮಂಗಳವಾರ ನಡೆದ ಗೃಹಲಕ್ಷ್ಮಿ ಫಲಾನುಭವಿಗಳ ‘ಸ್ವಸಹಾಯ ಸಂಘಗಳ ಉದ್ಘಾಟನೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಕ್ತಿ ಯೋಜನೆಯು ಗಿನ್ನೆಸ್ ದಾಖಲೆ ಬರೆದಿದ್ದು, ಇಲ್ಲಿನ ಗ್ಯಾರಂಟಿ ಯೋಜನೆಗಳ ಬಗ್ಗೆ ಆರ್ಥಿಕ ತಜ್ಞರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ದೇಶದಲ್ಲಿ ಗರಿಷ್ಠ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆ ರಾಜ್ಯಕ್ಕಿದ್ದರೆ, ರಕ್ತ ಕ್ರಾಂತಿ ಇಲ್ಲದೆ ಭೂ ಮಸೂದೆ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಈ ಜಿಲ್ಲೆಗೆ ಇದೆ. ಪಂಚ ಗ್ಯಾರಂಟಿ ಯೋಜನೆಯಲ್ಲಿ ಅತಿ ಹೆಚ್ಚು ಫಲಾನುಭವಿಗಳು ಈ ಜಿಲ್ಲೆಯಲ್ಲೇ ಇದ್ದಾರೆ. ನಾವು ಜನರ ಬದುಕಿನೊಂದಿಗೆ ರಾಜಕೀಯ ಮಾಡಿದರೆ ಬಿಜೆಪಿಯು ಜನರ ಭಾವನೆಯೊಂದಿಗೆ ರಾಜಕೀಯ ಮಾಡುತ್ತಿದೆ ಎಂದರು.

ADVERTISEMENT

ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲೇ ಗರಿಷ್ಠ ಅನುದಾನ ಇಲ್ಲಿಗೆ ಬಂದಿದೆ’ ಎಂದರು.

ಅನಂತಾಡಿ ಮತ್ತು ಕೇಪು ಗ್ರಾಮದಲ್ಲಿ ಅತಿ ಹೆಚ್ಚು ಗುಂಪು ರಚಿಸಿದ ಸಂಘಗಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಿಸಿದರು.

ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಮಾತನಾಡಿ, ‘ರಾಜ್ಯದಲ್ಲಿ ಪ್ರಥಮ ಬಾರಿಗೆ ಗೃಹಲಕ್ಷ್ಮಿ ಫಲಾನುಭವಿಗಳ ಸ್ವಸಹಾಯ ಸಂಘ ರಚನೆಯಾಗಿದೆ. ದೇಶದಲ್ಲಿ ದುರ್ಬಲರಿಗೆ ಸುರಕ್ಷತೆ ನೀಡಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ಭೂ ಮಸೂದೆ, ಅಕ್ರಮ ಸಕ್ರಮ, 94ಸಿ, ಪಡಿತರ ಫಲಾನುಭವಿಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ’ ಎಂದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಭರತ್ ಮುಂಡೋಡಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ ಕಾರ್ಬಾರಿ, ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ್, ಪುರಸಭಾಧ್ಯಕ್ಷ ವಾಸು ಪೂಜಾರಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಉಸ್ಮಾನ್, ಕಡಬ ತಾಲ್ಲೂಕು ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಭಾಗವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಸ್ವಾಗತಿಸಿದರು. ಬಂಟ್ವಾಳ ತಾಲ್ಲೂಕು ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ‘ತಾಲ್ಲೂಕಿಗೆ ಒಟ್ಟು ₹ 528 ಕೋಟಿ ಮೊತ್ತ ಫಲಾನುಭವಿಗಳಿಗೆ ಸಿಕ್ಕಿದೆ ಎಂದರು.

ಪಿಡಿಒ ಸುನಿಲ್ ಕಡೇಶ್ವಾಲ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.