ADVERTISEMENT

18 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಕದಿಕ್ಕಾರು ಬೀಡಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಜಾಗದಲ್ಲಿ ವಾಸ್ತವ್ಯ ಇದ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 16:34 IST
Last Updated 12 ಅಕ್ಟೋಬರ್ 2021, 16:34 IST
ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನ ಬಳಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿರುವ ಕುಟುಂಬಗಳಿಗೆ ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿ. ಹರ್ಷೇಂದ್ರ ಕುಮಾರ್ ಹಕ್ಕುಪತ್ರ ವಿತರಿಸಿದರು.
ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನ ಬಳಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿರುವ ಕುಟುಂಬಗಳಿಗೆ ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿ. ಹರ್ಷೇಂದ್ರ ಕುಮಾರ್ ಹಕ್ಕುಪತ್ರ ವಿತರಿಸಿದರು.   

ಪುತ್ತೂರು: ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನ ಬಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ 1.6 ಎಕರೆ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿರುವ 18 ಕುಟುಂಬಗಳಿಗೆ ವಾಸಸ್ಥಳವನ್ನು ಶ್ರೀ ಕ್ಷೇತ್ರದ ವತಿಯಿಂದ ದಾನ ರೂಪದಲ್ಲಿ ನೀಡಲಾಗಿದೆ. ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಂಗಳವಾರ ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಉಪ ನೋಂದಣಿ ಕಚೇರಿಯಲ್ಲಿ ಭೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಕ್ಷೇತ್ರದ ಪರವಾಗಿ 18 ಕುಟುಂಬಗಳಿಗೆ ಹಕ್ಕುಪತ್ರ ಹಸ್ತಾಂತರಿಸಿದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ‘ಉಳುವನೇ ಹೊಲದೊಡೆಯ’ ಕಾನೂನು ಜಾರಿಯ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ 3,600 ಎಕರೆ ಜಮೀನನ್ನು ಗೇಣಿದಾರರಿಗೆ ನೀಡಲಾಗಿತ್ತು. ಆ ಕಾಲದಿಂದಲೇ ಕದಿಕ್ಕಾರು ಬೀಡಿನ ಜಾಗದಲ್ಲಿ ವಾಸವಾಗಿದ್ದ ಕುಟುಂಬಗಳು ಕ್ಷೇತ್ರದ ಮೇಲಿನ ಭಕ್ತಿಯಿಂದ ಅರ್ಜಿ ಹಾಕಿರಲಿಲ್ಲ. ಆ ಕುಟುಂಬಕ್ಕೆ ಕ್ಷೇತ್ರದ ವತಿಯಿಂದ ಹಕ್ಕುಪತ್ರ ಮಾಡಿ ದಾನ ರೂಪದಲ್ಲಿ ಜಮೀನು ನೀಡಲಾಗಿದೆ’ ಎಂದರು.

ಸುಳ್ಯ ತಾಲ್ಲೂಕಿನ ಮರ್ಕಂಜದಲ್ಲಿ 15 ಕುಟುಂಬಗಳು ಕ್ಷೇತ್ರದ ಅಧೀನದಲ್ಲಿರುವ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ್ತವ್ಯವಿದ್ದು, ಅವರಿಗೂ ದಾನ ರೂಪದಲ್ಲಿ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ಹಕ್ಕುಪತ್ರ ಪಡೆದುಕೊಂಡ ಕುಟುಂಬಗಳ ಪರವಾಗಿ ಮಾತನಾಡಿದ ಮಹಾಲಿಂಗ ಅವರು, ‘ಉದ್ಯಮಿ ಆಶೋಕ್ ರೈ ಕೋಡಿಂಬಾಡಿ ನೇತೃತ್ವದಲ್ಲಿ ಕ್ಷೇತ್ರವನ್ನು ಸಂಪರ್ಕಿಸಿ ಹಕ್ಕುಪತ್ರ ನೀಡುವ ಬಗ್ಗೆ ಪ್ರಸ್ತಾವಿಸಿದಕ್ಕೆ ಧರ್ಮಾಕಾರಿ ಹೆಗ್ಗಡೆ ಒಪ್ಪಿಗೆ ಸೂಚಿಸಿದ್ದರು’ ಎಂದರು.

ಧರ್ಮಸ್ಥಳ ಕ್ಷೇತ್ರದ ಕಂದಾಯ ವಿಭಾಗದ ಮುಖ್ಯಸ್ಥ ಶುಭಚಂದ್ರ ರಾಜ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ತಹಶೀಲ್ದಾರ್ ರಮೇಶ್ ಬಾಬು, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಜಿಲ್ಲೆ-2ರ ನಿರ್ದೇಶಕ ಪ್ರವೀಣ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಆನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.