ADVERTISEMENT

ಹನುಮಗಿರಿ: 29ರಂದು ‘ಭಜನಾ ಸಂಭ್ರಮ’ ದಾಖಲೆ

ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ ನಿರ್ಮಾಣ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 11:15 IST
Last Updated 13 ಡಿಸೆಂಬರ್ 2019, 11:15 IST

ಪುತ್ತೂರು : ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹುನುಮಗಿರಿ ಕ್ಷೇತ್ರದ ಸಂಯುಕ್ತ ಆಶ್ರಯದಲ್ಲಿ ಇದೇ 29ರಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳ 1000ಕ್ಕೂ ಹೆಚ್ಚು ಭಜನಾ ತಂಡಗಳ ಕೂಡುವಿಕೆಯೊಂದಿಗೆ ‘ಭಜನಾ ಸಂಭ್ರಮ’ ಸಮಾವೇಶ ನಡೆಯಲಿದ್ದು, ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸುವ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆ, ವ್ಯಸನಮುಕ್ತ ಸಮಾಜ, ಸಂಸ್ಕಾರಯುತ ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಭಜನಾ ಮಂಡಳಿಗಳ ಪಾತ್ರ ಬಹಳ ಮುಖ್ಯವಾಗಿದ್ದು, ಸಾಮಾಜಿಕ ಕಳಕಳಿಯುಳ್ಳ ಭಜನಾ ಮಂಡಳಿಗಳು ಒಂದೆಡೆ ಸೇರಿ ಸಮಾಜಮುಖಿ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ಹಾಗೂ ಮುಂದಿನ ಹಂತದಲ್ಲಿ ಭಜನಾ ಮಂಡಳಿಗಳನ್ನು ಇನ್ನಷ್ಟು ಸಕ್ರೀಯಗೊಳಿಸಿ, ಹೊಸ ಚಟುವಟಿಕೆಗಳ ಕುರಿತು ಸಂಕಲ್ಪ ಕೈಗೊಳ್ಳುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಮುಕ್ಕಾಲು ಗಂಟೆಯ ಸಾಧನೆ: ‘ಭಜನಾ ಸಂಭ್ರಮದ ಕೇಂದ್ರ ಬಿಂದು ಕಾರ್ಯಕ್ರಮ ಅಂದು ಸಂಜೆ 6.12ಕ್ಕೆ ಶಂಖಉದ್ಘೋಷದೊಂದಿಗೆ ಆರಂಭಗೊಳ್ಳಲಿದೆ. 1000ಕ್ಕೂ ಹೆಚ್ಚು ಭಜನಾ ಮಂಡಳಿಗಳ 5 ಸಾವಿರಕ್ಕೂ ಹೆಚ್ಚು ಭಜನಾ ಕಾರ್ಯಕರ್ತರು ಭಜನಾಂಗಣದಲ್ಲಿ 1000 ದೀಪಗಳನ್ನು ಬೆಳಗಿಸಿ, 5ಸಾವಿರ ಹಣತೆಗಳನ್ನು ಹಚ್ಚಿ ಏಕಕಾಲದಲ್ಲಿ ಆಯ್ದ 6 ಭಜನೆಗಳನ್ನು ಹಾಡುವ ಈ ಐತಿಹಾಸಿಕ ಕಾರ್ಯಕ್ರಮ 45 ನಿಮಿಷ ನಡೆಯಲಿದೆ. ಈಗಾಗಲೇ 1 ಸಾವಿರ ಭಜನಾ ಮಂಡಳಿಗಳು ನೋಂದಣಿ ಮಾಡಿಕೊಂಡಿದ್ದು, 1,200 ಭಜನಾ ಮಂಡಳಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 20 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಸಭೆ: ‘ ಅಂದು ಸಂಜೆ 4.45ಕ್ಕೆ ನಡೆಯುವ ಸಭೆಯಲ್ಲಿ ಕೇಂದ್ರದ ಪಶುಸಂಗೋಪನಾ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಮುಖ್ಯ ಅತಿಥಿಯಾಗಿರುವರು. ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ ಪ್ರಧಾನ ಭಾಷಣ ಮಾಡುವರು. ಭಜನಾ ಸಂಭ್ರಮ ಸ್ವಾಗತ ಸಮಿತಿಯ ಅಧ್ಯಕ್ಷ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು’ ಎಂದು ಮೂಡೆತ್ತಾಯ ತಿಳಿಸಿದರು.

ಎರಡು ಗೋಷ್ಠಿಗಳು: ‘ಬೆಳಿಗ್ಗೆ 9ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು,10ಗಂಟೆಗೆ ಸಾಮಾಜಿಕ ಪರಿವರ್ತನೆಗಾಗಿ ಭಜನಾ ಮಂಡಳಿಗಳು ಮಾಡಬಹುದಾದ ಚಟುವಟಿಕೆಗಳ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ತಾಲ್ಲೂಕು ಸಂಯೋಜಕರ ಬೈಠಕ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಅವರ ಜತೆ ನಡೆಯಲಿದೆ. 12ಗಂಟೆಗೆ ಭಜನಾ ಮಂಡಳಿಗಳು ಮುಂದೆ ಕೈಗೊಳ್ಳಬೇಕಾದ ಸಂಕಲ್ಪದ ಕುರಿತು ಎರಡನೇ ಗೋಷ್ಠಿ ನಡೆಯಲಿದೆ’ ಎಂದು ಅವರು ತಿಳಿಸಿದರು.

ಶೋಭಾಯಾತ್ರೆ-ಸಾಂಸ್ಕೃತಿಕ ವೈಭವ: ಸಂಜೆ 3 ಗಂಟೆಗೆ ಈಶ್ವರಮಂಗಲ ಪಂಚಲಿಂಗೇಶ್ವರ ದೇವಾಲಯ ಹಾಗೂ ಈಶ್ವರಮಂಗಲ ಗ್ರಾಮ ಪಂಚಾಯಿತಿ ಕಚೇರಿ ಬಳಿಯಿಂದ ಏಕಕಾಲದಲ್ಲಿ ಎರಡು ಕಡೆಗಳಿಂದ ಭಜನಾಂಗಣಕ್ಕೆ ಶೋಭಾ ಯಾತ್ರೆ ನಡೆಯಲಿದೆ. ಶೋಭಾ ಯಾತ್ರೆಯಲ್ಲಿ ಕುಣಿತ ಭಜನೆಗೆ ಅವಕಾಶವಿದೆ. ಭಜನಾ ಮಂಡಳಿಗಳ ಎಲ್ಲರೂ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವರು. ರಾತ್ರಿ 7.30ರಿಂದ ಆಳ್ವಾಸ್ ದೇಶಿ ಸಾಂಸ್ಕೃತಿಕ ವೈಭವ ನಡೆಯಲಿದೆ.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸಹಜ್ ರೈ ಬಳೆಜ್ಜ, ವಿಭಾಗ ಸಂಯೋಜಕ ಪ್ರವೀಣ್ ಸರಳಾಯ, ನಿರ್ವಹಣಾ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ರೈ, ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.