ADVERTISEMENT

ಸೌಹಾರ್ದವಿಲ್ಲದೇ ತುಳುನಾಡಿನ ಸತ್ವ ಉಳಿಯದು: ನಟ ನವೀನ್ ಡಿ ಪಡೀಲ್‌

ನಟ ನವೀನ್ ಡಿ ಪಡೀಲ್‌ಗೆ ಪ್ರೆಸ್ ಕ್ಲಬ್ ಗೌರವ

​ಪ್ರಜಾವಾಣಿ ವಾರ್ತೆ
Published 28 ಮೇ 2025, 3:58 IST
Last Updated 28 ಮೇ 2025, 3:58 IST
ಸಂವಾದದಲ್ಲಿ ನವೀನ್ ಡಿ. ಪಡೀಲ್ ಮಾತನಾಡಿದರು: ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ನವೀನ್ ಡಿ. ಪಡೀಲ್ ಮಾತನಾಡಿದರು: ಪ್ರಜಾವಾಣಿ ಚಿತ್ರ   

ಮಂಗಳೂರು: 'ಬ್ರಹ್ಮಕಲಶೋತ್ಸವ, ಉರುಸ್, ಸಾಂತ್‌ಮಾರಿಯಂತಹ ಪವಿತ್ರ ಹಬ್ಬಗಳನ್ನು ಒಗ್ಗೂಡಿ ಆಚರಿಸುವ ಜಿಲ್ಲೆ ನಮ್ಮದು. ಸೌಹಾರ್ದ ಕದಡಿ ಇಲ್ಲಿನ ಸಾಮರಸ್ಯದ ಸಂಸ್ಕೃತಿಗೆ  ಧಕ್ಕೆ ತರಬಾರದು. ಸೌಹಾರ್ದ ಇಲ್ಲದೇ ಹೋದರೆ ತುಳುನಾಡಿನ ಸತ್ವ ಉಳಿಯದು’ ಎಂದು ನಟ ನವೀನ್ ಡಿ.ಪಡೀಲ್‌ ಹೇಳಿದರು.

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರೆಸ್ ಕ್ಲಬ್ ಗೌರವ’ ಸ್ವೀಕರಿಸಿದ ಬಳಿಕ ಅವರು ಸಂವಾದದಲ್ಲಿ ಮನ ಬಿಚ್ಚಿ ಮಾತನಾಡಿದರು. 

‘ಇಲ್ಲಿ ಕೋಮು ದ್ವೇಷ ಏಕೆ ಹೆಚ್ಚುತ್ತಿದೆ, ಗಲಾಟೆ, ಕೊಲೆಗಳು ಏಕೆ ನಡೆಯುತ್ತಿವೆ. ಅಮಾಯಕರು ಏಕೆ ಸಾಯುತ್ತಿದ್ದಾರೆ. ಗಲಾಟೆಗಳ ಮೂಲಕ ಸುಮ್ಮನೆ ಮನಃಶಾಂತಿ ಕಳೆದುಕೊಳ್ಳುವ ಬದಲು ಎಲ್ಲರೂ ಒಗ್ಗಟ್ಟಿನಿಂದ ಬದುಕಬಹುದಲ್ಲವೇ. ಈಶ್ವರ, ಅಲ್ಲಾ, ಯೇಸು ಮೊದಲಾದ ದೇವರು ಬಲಾಢ್ಯರಲ್ಲವೇ, ಅವರೇಕೆ ನಮ್ಮ ಜನರಿಗೆ ಬುದ್ಧಿ ಕೊಡುತ್ತಿಲ್ಲ. ನಾವು ಯಾರಿಗೋ ಮತ ಹಾಕುತ್ತೇವೆ ಎಂಬ ಕಾರಣಕ್ಕೆ ಇನ್ನು ಯಾರೊ ಏಕೆ ಸಾಯಬೇಕು’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಇಲ್ಲಿ ಸೌಹಾರ್ದದ ಕಾಪಾಡಲೆಂದೇ ಮನುಷ್ಯತ್ವಕ್ಕೆ ಬೆಲೆ ನೀಡುವ ಸಂದೇಶ ಸಾರುವ ‘ನೆರೆಕರೆ’ ತುಳು ಸಿನಿಮಾ ನಿರ್ಮಿಸುತ್ತಿದ್ದೇವೆ. ಶಶಿರಾಜ್ ಕಾವೂರು ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಅದನ್ನು ನಾನೇ  ನಿರ್ದೇಶಿಸುತ್ತಿದ್ದೇನೆ’  ಎಂದರು.

 ಹಿಂದೂಗಳು ಮಾತ್ರ ನೋಡುತ್ತಾರೆ ಎಂದು ಸಿನಿಮಾ ಮಾಡಲಾಗದು. ಎಲ್ಲ ಧರ್ಮದವರನ್ನೂ ಚಿತ್ರಮಂದಿರಗಳಿಗೆ ಸೆಳೆಯುವಂತಹ ಸಿನಿಮಾ ಮಾಡುವ ಅಗತ್ಯವಿದೆ’ ಎಂದರು.

‘ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಿನಿಮಾಗಳಲ್ಲಿ ನನ್ನ ಅಭಿನಯವನ್ನು ಪ್ರೇಕ್ಷಕರು ಸರಿಯಾಗಿ ಗುರುತಿಸಿಲ್ಲ. ಆ ಬಗ್ಗೆ ಬೇಸರವಿಲ್ಲ. ತುಳು ಸಿನಿಮಾ ರಂಗ ಬದಲಾಗಬೇಕಾದ ಅಗತ್ಯವಿದೆ. ನಮಗೆ ಮಲಯಾಳ ಚಿತ್ರರಂಗ ಮಾದರಿಯಾಗಬೇಕು. ಸಿನಿಮಾದಲ್ಲಿ ನಾಟಕೀಯತೆ ಬದಲು ವಾಸ್ತವಕ್ಕೆ ಆದ್ಯತೆ  ಸಿಗಬೇಕು. ಕಾಮಿಡಿಗೆ ಕೂಡ ಪಾತ್ರಗಳಿಗೆ ಸಹಜವಾಗಿ ಹೊಂದುವಂತಿರಬೇಕು’  ಎಂದರು. 

‘ಕರಿಯಜ್ಜ ಕೊರಗಜ್ಜ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಗಿ ಹಾಸಿಗೆ ಹಿಡಿದರೂ ನಿರ್ಮಾಪಕರು ನೋಡಲು ಬಾರದ ಬಗ್ಗೆ ಅವರು ಬೇಸರ ತೋಡಿಕೊಂಡರು.

ಬಾಲ್ಯದ ದಿನಗಳ ಕಷ್ಟಗಳನ್ನು ಹಂಚಿಕೊಂಡ ಅವರು ರಂಗಭೂಮಿಯ ದಿನಗಳನ್ನೂ ಮೆಲುಕು ಹಾಕಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು‌. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ,  ಅನ್ನು ಮಂಗಳೂರು, ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ‌ ಅಡ್ಕಸ್ಥಳ ಭಾಗವಹಿಸಿದ್ದರು. 

‘ಸಿನಿಮಾದಲ್ಲಿ ದೈವಾರಾಧನೆ –ವಿಕೃತಿ ಬೇಡ’

‘ದೈವಾರಾಧನೆಯನ್ನು ಸಿನಿಮಾದಲ್ಲಿ ತೋರಿಸಲೇ ಬಾರದು ಎನ್ನುವುದು ತಪ್ಪು. ಅದನ್ನು ಹೇಗೆ  ತೋರಿಸಲಾಗುತ್ತದೆ ಎಂಬುದು ಮುಖ್ಯ. ಸಿನಿಮಾದಲ್ಲಿ ತೋರಿಸುವ ದೈವಾರಾಧನೆಯೂ ಭಕ್ತಿ ಹುಟ್ಟುವುದಕ್ಕೆ ಪ್ರೇರಣೆ ಆಗುತ್ತದೆ. ಕಾಂತಾರ ಸಿನಿಮಾ ಬಂದ ಬಳಿಕ ದೈವಾರಾಧನೆ ಬಗ್ಗೆ ಅನೇಕರಲ್ಲಿ ಜಾಗೃತಿ ಮೂಡಿದೆ. ಅದನ್ನು ವಿಕೃತವಾಗಿ ತೋರಿಸಬಾರದು’ ಎಂದು ನವೀನ್ ಡಿ.ಪಡೀಲ್ ಹೇಳಿದರು.

‘ಮೂಳೆ ಕಸಿ ಶಸ್ತ್ರಚಿಕಿತ್ಸೆ ಶೀಘ್ರ’

‘ಚಿತ್ರೀಕರಣವೊಂದರ ಸಂದರ್ಭದಲ್ಲಿ ಕಾಲಿನ ಮೂಳೆ ಮುರಿದಿದ್ದರಿಂದ ಸಮಸ್ಯೆ ಆಗುತ್ತಿದೆ. ಮೂಳೆ ಕಸಿ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ತಿಂಗಳು ಈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ’ ಎಂದು ನವೀನ್ ಡಿ.ಪಡೀಲ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.