ADVERTISEMENT

ಬಿಜೆಪಿಯಿಂದ ದುರ್ಬಲರ ಶೋಷಣೆ: ರಮಾನಾಥ ರೈ ಆರೋಪ

ಉತ್ತರ ಪ್ರದೇಶ ಸರ್ಕಾರ ವಜಾ ಮಾಡಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:31 IST
Last Updated 2 ಅಕ್ಟೋಬರ್ 2020, 16:31 IST
ಡಿವೈಎಫ್‌ಐ ಕಾರ್ಯಕರ್ತರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಡಿವೈಎಫ್‌ಐ ಕಾರ್ಯಕರ್ತರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.   

ಮಂಗಳೂರು:‘ಉತ್ತರ ಪ್ರದೇಶದ ಹಾಥರಾಸ್‌ನಲ್ಲಿ ದಲಿತ ಯುವತಿಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಮತ್ತು ಆ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ನಡೆದುಕೊಂಡ ರೀತಿ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ’ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವಿಷಯವಾಗಿ ಪ್ರಧಾನಿ ಮೌನ ಮುರಿಯಬೇಕು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕಿತ್ತೊಗೆದು ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಯುವತಿಯ ಮೃತದೇಹದ ಅಂತಿಮ ದರ್ಶನಕ್ಕೆ ಕುಟುಂಬದವರಿಗೆ ಅವಕಾಶ ನೀಡದೆ, ರಾತ್ರೋರಾತ್ರಿ ಪೊಲೀಸರೇ ಅಂತ್ಯಸಂಸ್ಕಾರ ಮಾಡಿರುವುದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದಂತಹ ಅಮಾನವೀಯ ಕೃತ್ಯ’ ಎಂದರು.

ADVERTISEMENT

‘ಹಾಥರಾಸ್‌ ಘಟನೆಯ ಬಗ್ಗೆ ದೇಶದಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದೆ. ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೋದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿ ಅವರನ್ನು ಉತ್ತರ ಪ್ರದೇಶದ ಪೊಲೀಸರು ತಡೆದಿರುವುದು ಖಂಡನೀಯ. ರಾಹುಲ್‌ ಗಾಂಧಿ ಅವರ ಮೇಲಿನ ಹಲ್ಲೆ ಖಂಡಿಸಿ ರಾಜ್ಯದಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ’ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.

‘ಹಾಥರಾಸ್‌ ಘಟನೆಗೆ ಸಂಬಂಧಿಸಿದಂತೆ ಸಂಸದ ನಳಿನ್‌ ಕುಮಾರ್ ಕಟೀಲ್‌ ಮತ್ತು ಶೋಭಾ ಕರಂದ್ಲಾಜೆ ಯಾಕೆ ಮಾತನಾಡುತ್ತಿಲ್ಲ’ ಎಂದು ಖಾದರ್‌ ಪ್ರಶ್ನಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಇದ್ದರು.

‘ಯುಪಿಯಲ್ಲಿ ಗೂಂಡಾ ರಾಜ್ಯ’

ಮಂಗಳೂರು: ‘ಉತ್ತರ ಪ್ರದೇಶ ಹಾಥರಸ್‌ನಲ್ಲಿ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಾಮುಕರನ್ನು ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರ ರಕ್ಷಣೆ ಮಾಡುತ್ತಿದೆ’ ಎಂದು ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್‌ಬಜಾಲ್ ಆರೋಪಿಸಿದರು.

ಡಿವೈಎಫ್ಐ ಉರ್ವಸ್ಟೋರ್ ಘಟಕ ಹಾಗೂ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಉರ್ವಸ್ಟೋರ್ ಜಂಕ್ಷನ್‌ನಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಪದಾಧಿಕಾರಿಗಳಾದ ಪ್ರಶಾಂತ್ ಎಂ.ಬಿ., ಮನೋಜ್, ಸುಖೇಶ್, ಸುಧಾಕರ್, ಹರೀಶ್ ಹರಿಣಾಕ್ಷಿ, ಅಶೋಕ್ ಶ್ರೀಯಾನ್ ಸ್ಯಾಮುವೆಲ್ ಟೈಟಸ್, ದಿನೇಶ್, ವಾಮನ್, ಕಿಶೋರ್ ಎಂ, ರಘುವೀರ್, ಕೃಷ್ಣ ತಣ್ಣೀರುಬಾವಿ, ಸಾಗರ್, ರಕ್ಷಿತ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.